ಅಂಬುಲೆನ್ಸ್ ಸಿಗದೆ ಅಪ್ಪನ ಹೆಗಲ ಮೇಲೆಯೇ ಮಗ ಪ್ರಾಣ ಬಿಟ್ಟ

0
752

ಕಾನ್ಪುರ್: ವ್ಯಕ್ತಿಯೊಬ್ಬ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಹೆಗಲ ಮೇಲೆ ಹೊತ್ತು 10 ಕಿ.ಮೀ ನಡೆದು ಸಾಗಿದ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಘಟನೆ ಮರೆಯಾಗುವ ಮೊದಲೇ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮಾನವೀಯತೆಯನ್ನೇ  ಮರೆಯುತ್ತಿರುವ ಜನ ಈ ಘಟನೆ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಗನನ್ನು ಆಸ್ಪತ್ರೆಗೆ ಸೇರಿಸಲು ಅಂಬುಲೆನ್ಸ್ ಸಿಗದೇ ವ್ಯಕ್ತಿಯೊಬ್ಬ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ಘಟನೆ ನಡೆದಿದೆ. 12 ವರ್ಷದ ಬಾಲಕನಿಗೆ ಭಾನುವಾರ ಹುಷಾರಿಲ್ಲದ ಕಾರಣ ಅಪ್ಪ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾನೆ. ಆದರೆ, ಜ್ವರ ಹೆಚ್ಚಾದ ಕಾರಣ, ಮತ್ತೆ ಆಸ್ಪತ್ರೆಗೆ ಸೇರಿಸಿದ್ದಾನೆ.

ಆತನಿಗೆ ಸ್ವಲ್ಪ ಸಮಯ ಚಿಕಿತ್ಸೆ ನೀಡಿದ ವೈದ್ಯರು, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.

ಆದರೆ, ಅಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ. ಕೊನೆಗೆ ಹೆಗಲ ಮೇಲೆಯೇ ಮತ್ತೊಂದು ಆಸ್ಪತ್ರೆಗೆ ಹೋದ ವ್ಯಕ್ತಿ ಅಲ್ಲಿಂದ ಇನ್ನೊಂದು ಆಸ್ಪತ್ರೆಗೆ ಹೋಗಿದ್ದಾನೆ. ಈ ಸಂದರ್ಭದಲ್ಲೇ ಅಪ್ಪನ ಹೆಗಲ ಮೇಲೆಯೇ ಮಗ ಪ್ರಾಣ ಬಿಟ್ಟಿದ್ದಾನೆ.

ಮಗನನ್ನು ಹೆಗಲ ಮೇಲೆ ಹೊತ್ತು 3 ಆಸ್ಪತ್ರೆಗಳಿಗೆ ಅಲೆದಾಡಿದ ವ್ಯಕ್ತಿ, ಮಗ ಮೃತಪಟ್ಟ ನಂತರವೂ ಹೆಗಲ ಮೇಲೆ ಹೊತ್ತುಕೊಂಡೇ ಮನೆಗೆ ಹೋಗಿದ್ದಾನೆ. ಮಾನವೀಯತೆ ಮರೆತ ಜನ ಹೇಗೆಲ್ಲಾ ವರ್ತಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ.