ಅನಿಲ್‍ ಕುಂಬ್ಳೆ ಕೋಚ್‍ ಸ್ಥಾನದಿಂದ ಹೊರಹೋಗುವ ಸಾಧ್ಯತೆ: ದ್ರಾವಿಡ್‍ಗೆ ಸಿಗುವುದೇ ಅವಕಾಶ?

0
495

ಸಿಕ್ಕ ಅಲ್ಪ ಅವಕಾಶದಲ್ಲೇ ಭಾರತ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಅನಿಲ್‍ ಕುಂಬ್ಳೆ ಕೋಚ್‍ ಸ್ಥಾನದಿಂದ ಹೊರಹೋಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಕೋಚ್‍ ಬದಲಾವಣೆಗೆ ದಿಢೀರ್‍ ನಿರ್ಧಾರ ಕೈಗೊಂಡಿರುವ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಕೋಚ್‍ ಆಗಿದ್ದ ಅನಿಲ್‍ ಕುಂಬ್ಳೆ ಗರಡಿಯಲ್ಲಿ ಭಾರತ ತಂಡ ಯಶಸ್ಸಿನ ಅಲೆಯ ಮೇಲೆ ತೇಲಿತ್ತು. ಚಾಂಪಿಯನ್ಸ್ ಟ್ರೋಫಿ ನಂತರ ಭಾರತ ತಂಡ ವಿದೇಶ ಪ್ರವಾಸಗಳನ್ನು ಕೈಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಕೋಚ್ ಬದಲಾವಣೆಗೆ ನಿರ್ಧರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕುಂಬ್ಳೆ ಅವಧಿಯಲ್ಲಿ ಟೀಮ್​ ಇಂಡಿಯಾ ಟೆಸ್ಟ್​​ನಲ್ಲಿ ನಂಬರ್​ 1 ಸ್ಥಾನ ಅಲಂಕರಿಸಿತ್ತು. ಅಲ್ಲದೆ ಸಾಲು ಸಾಲು ಸರಣಿಗಳನ್ನು ಗೆದ್ದು ದಾಖಲೆಯನ್ನು ನಿರ್ಮಿಸಿತ್ತು. ತವರಿನಲ್ಲಿ ನ್ಯೂಜಿಲೆಂಡ್​​, ಇಂಗ್ಲೆಂಡ್​​, ಬಾಂಗ್ಲಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು ಸಾಧನೆಯನ್ನು ಮಾಡಿತ್ತು. ಕುಂಬ್ಳೆ ಕೋಚ್​ ಅವಧಿಯಲ್ಲಿ ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್​​ನಲ್ಲಿ ಮಾತ್ರ ಸೋಲಿನ ಕಹಿಯನ್ನು ಕಂಡಿತ್ತು.

ಜೂನ್​​ನಲ್ಲೇ ಕುಂಬ್ಳೆ ಅವರ ಅಧಿಕಾರ ಅವಧಿ ಮುಗಿಯುತ್ತದೆ. ಬಿಸಿಸಿಐ ಅವರನ್ನು ಮುಂದುವರೆಸುವ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಆಗ ಕುಂಬ್ಳೆ ಅವರು ಚಾಂಪಿಯನ್ಸ್​ ಟ್ರೋಫಿಗೆ ತಂಡವನ್ನು ಮುನ್ನಡೆಸುವ ಬಯಕೆ ಹೊಂದಿರುವುದಾಗಿ ಬಿಸಿಸಿಐಗೆ ಪತ್ರ ಮುಖೇನ ತಿಳಿಸಿದ್ದರು. ಇದರಿಂದ ಕುಂಬ್ಳೆ ಮಂಡಳಿಯ ಪದಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ನೂತನ ಕೋಚ್‍ ಆಯ್ಕೆ ಕುರಿತು ಸಚಿನ್​ ತೆಂಡೂಲ್ಕರ್​, ವಿವಿಎಸ್​ ಲಕ್ಷ್ಮಣ್​​ ಮತ್ತು ಸೌರವ್​ ಗಂಗೂಲಿ ನೇತೃತ್ವದ ಕ್ರಿಕೆಟ್​ ಸಲಹಾ ಸಮಿತಿ ನಿರ್ಧರಿಸಲಿದ್ದು, ಈ ಹಿಂದೆ ರಾಹುಲ್‍ ದ್ರಾವಿಡ್‍ ಅವರ ಹೆಸರು ಕೇಳಿಬಂದಿತ್ತು. ಆದರೆ ದ್ರಾವಿಡ್‍ ನಾನಿನ್ನು ಸಿದ್ಧನಾಗಿಲ್ಲ ಎಂದಿದ್ದರು. ಇದೀಗ ದ್ರಾವಿಡ್‍ ಮೇಲೆ ಮತ್ತೆ ಕಣ್ಣು ನೆಟ್ಟಿದ್ದು, ಅವರ ಆಯ್ಕೆ ತಳ್ಳಿ ಹಾಕುವಂತಿಲ್ಲ.