ಐವತ್ತಾರು ವರ್ಷದ ತನ್ನ ತಾಯಿಗೆ ಸಂಗಾತಿಯನ್ನು ಹುಡುಕಿದ ಮಗಳು!

0
1729

ಬೆಂಗಳೂರು: ಐವತ್ತಾರು ವರ್ಷದ ತನ್ನ ತಾಯಿಗೆ ಸಂಗಾತಿಯನ್ನು ಹುಡುಕಿದ ಮಗಳು–ಅಳಿಯ, 52 ವರ್ಷದ ಮಗನಿಗೆ  (ವಿದುರ) ಹೆಣ್ಣು ನೋಡಿದ ವೃದ್ಧ ದಂಪತಿ..!

‘ಅನುಬಂಧ ಫೌಂಡೇಷನ್‌’ ಗಾಂಧಿನಗರದ ವೈಷ್ಣವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ವೃದ್ಧರು ಸಂಗಾತಿಯನ್ನು ಹುಡುಕಿಕೊಳ್ಳುವ ‘ಲವ್‌ ಎಗೇನ್‌’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು. ಜೀವನದ ಸಂಧ್ಯಾಕಾಲದಲ್ಲಿ ಆಸರೆಗೆಂದು ಒಂದು ಜೀವವನ್ನು ಹುಡುಕುತ್ತಾ ಬಂದವರು ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕೆ ಒಡ್ಡಿದರು.

download
‘ಲವ್‌ ಎಗೇನ್‌’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.

ವಿಚ್ಛೇದನ ಪಡೆದಿರುವವರು, ವಿದುರ– ವಿಧವೆಯರು, ಒಂಟಿಯಾಗಿ ಜೀವನ ಸಾಗಿಸುತ್ತಿರುವ 42–78 ವರ್ಷದೊಳಗಿನವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಗಿನಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ 297 ಮಂದಿ ಹೆಸರು ನೋಂದಾಯಿಸಿಕೊಂಡರು. ಈ ಪೈಕಿ 28 ಜನರು ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡರು. 11 ಮಂದಿ ಮದುವೆಯಾಗಲು ನಿರ್ಧರಿಸಿದರು. ಗರಿಷ್ಠ ವಯಸ್ಸಾಗಿದ್ದ 71 ವರ್ಷದ ವ್ಯಕ್ತಿಯೊಬ್ಬರು 64 ವರ್ಷದ ಮಹಿಳೆಯನ್ನು ಆಯ್ಕೆ ಮಾಡಿಕೊಂಡರು.

ಈಡೇರಿದ ವೃದ್ಧ ದಂಪತಿ ಆಸೆ: ಬೆಂಗಳೂರಿನ ನಿವಾಸಿಯಾಗಿರುವ ಮಹಿಳೆಯೊಬ್ಬರು 56 ವರ್ಷದ ತನ್ನ ತಾಯಿಗೆ ಗಂಡು ಹುಡುಕಿಕೊಂಡು ಬಂದಿದ್ದರು. ತಾಯಿಗೆ ಸೂಕ್ತವಾದ ವರನನ್ನು ಹುಡುಕುವಲ್ಲಿ ಅವರು ಸಫಲರಾದರು. ಆ ಮಹಿಳೆಯ ಪ್ರಯತ್ನಕ್ಕೆ ಅವರ ಪತಿ ಸಾಥ್‌ ನೀಡಿದರು.

ಧಾರವಾಡದಿಂದ ಬಂದಿದ್ದ 82 ವರ್ಷದ ಅಜ್ಜ ಹಾಗೂ 75 ವರ್ಷದ ಅಜ್ಜಿ ತನ್ನ 52 ವರ್ಷದ ಮಗನಿಗೆ (ವಿದುರ) ಹೆಣ್ಣು ಹುಡುಕಾಟದಲ್ಲಿ ತೊಡಗಿದ್ದರು. ಒಂದೆರಡು ಹೆಣ್ಣುಗಳನ್ನು ನೋಡಿದರು. ಆದರೆ, ಅವರ ಮಗನಿಗೆ ತಕ್ಕುದಾದ ಹೆಣ್ಣು ಸಿಗಲಿಲ್ಲವಂತೆ. ಹೀಗಾಗಿ ವರನ ಮಾಹಿತಿ ಇದ್ದ ಕಡತವನ್ನು ಅನುಬಂಧ ಫೌಂಡೇಷನ್‌ಗೆ ನೀಡಿ ತೆರಳಿದರು.