ಇಂಡೋ-ಪಾಕ್ 5ನೇ ಯುದ್ಧಕ್ಕೆ ಉರಿ ನಾಂದಿಯಾದೀತೇ?

0
1810

ಇತಿಹಾಸ ಅವಲೋಕಿಸಿದಾಗ ಪಾಕಿಸ್ತಾನದಿಂದ ಎಂದಿಗೂ ಭಾರತಕ್ಕೆ ಒಳ್ಳೆಯದಾದ ಘಟನೆ ನಡೆದಿದ್ದಿಲ್ಲ. ಆದರೆ, ಭಾರತದಿಂದ ಪಾಕಿಸ್ತಾನಕ್ಕೆ ಒಳಿತಾಗಿದೆ.

1971ರಲ್ಲಿ ನಡೆದ ಯುದ್ಧದಲ್ಲಿ ಭಾರತವು ಪಾಕಿಸ್ತಾನದ ಭೂ ಪ್ರದೇಶವನ್ನು ತನ್ನ ವಶಕ್ಕೆ ಪಡೆದಿದ್ದರೂ ಶಿಮ್ಲಾ ಒಪ್ಪಂದದಂತೆ ಅದನ್ನು ಹಿಂದಿರುಗಿಸಿ ತನ್ನ `ಹಿರಿಮೆ’ ಮೆರೆದಿದೆ. ಒಂದು ವೇಳೆ ಪಾಕಿಸ್ತಾನವೇನಾದರೂ ಅದೇ ಯುದ್ಧದಲ್ಲಿ ಭಾರತದ ಭೂಪ್ರದೇಶ ವಶಕ್ಕೆ ತೆಗೆದುಕೊಂಡು, ಒಪ್ಪಂದದ ಮೂಲಕ ಮತ್ತೆ ಆ ಪ್ರದೇಶ ಮರಳಿ ಭಾರತಕ್ಕೆ ಕೊಡುತ್ತಿತ್ತೇ? ಖಂಡಿತ ಸಾಧ್ಯವಿಲ್ಲ. ಕುತಂತ್ರಿ ಪಾಕಿಗೆ ಭಾರತೀಯರಂತೆ `ಮಾನವೀಯತೆ’ಯೇ ಇಲ್ಲ. ಒಂದು ವೇಳೆ ಇದ್ದಿದ್ದರೆ ಪಾಕಿಸ್ತಾನವೂ ವಿಶ್ವಮಾನ್ಯವಾಗುತ್ತಿತ್ತು. ಈಗೇನೂ ಪಾಕಿಸ್ತಾನ `ವಿಶ್ವಮಾನ್ಯ’ ಆಗಿಲ್ಲ ಎಂದು ಭಾವಿಸುವುದು ಬೇಡ. ಏಕೆಂದರೆ, ಪಾಕಿಸ್ತಾನವೂ ಇತ್ತೀಚೆಗೆ `ಭಯೋತ್ಪಾದನೆ’ ಮೂಲಕ ವಿಶ್ವಮಾನ್ಯವಾಗಿದೆ.

ಪಾಕಿಸ್ತಾನಕ್ಕೆ ಅದ್ಯಾವಾಗ ಒಳ್ಳೇ ಬುದ್ಧಿ ಬರುತ್ತದೋ? `ಸಭ್ಯ ಪಾಕಿಸ್ತಾನ’ವಾಗಲು ಯಾವ ಮುಖಂಡನ ಅಗತ್ಯವಿದೆಯೋ ಏನೋ? ಇಡೀ ವಿಶ್ವವೇ ತಮ್ಮನ್ನು `ಭಯೋತ್ಪಾದಕ’ ದೇಶ ಎಂದು ಹೇಳುತ್ತಿದ್ದರೂ ಅದಕ್ಕೆ ಯಳ್ಳಷ್ಟೂ ಚಿಂತೆಯಿಲ್ಲ. ತಮ್ಮ ದೇಶದ ಮೇಲೆ ಉಗ್ರರು ದಾಳಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ಉದಾಹರಣೆ, ಕಳೆದ ವರ್ಷ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯೊಂದು ಅಲ್ಲಿಯ ಸೈನಿಕ ಶಾಲೆ ಮೇಲೆ ದಾಳಿ ಮಾಡಿ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದರು. ಇದು ಯಾವ ಪುರುಷಾರ್ಥಕ್ಕೆ? ತಮ್ಮದೇ ದೇಶದ ಮಕ್ಕಳನ್ನು ಹೇಯವಾಗಿ ಹತ್ಯೆ ಮಾಡಿದ್ದರೂ ಪಾಕಿಸ್ತಾನ ಸರ್ಕಾರ ಆ ಉಗ್ರರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ!

ಭಾರತವೂ ಸೇರಿ ವಿಶ್ವದ ವಿವಿಧ ದೇಶಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲೂ ಪಾಕಿಸ್ತಾನದ ಕೈವಾಡದ ಶಂಕೆ ಇದೆ. ಕೆಲವೊಂದು ಬಾಂಬ್ ಸ್ಫೋಟಗಳ ಹೊಣೆಯನ್ನು ಪಾಕಿಸ್ತಾನಿ ಭಯೋತ್ಪಾದನಾ ಸಂಘಟನೆಗಳೇ ಒಪ್ಪಿಕೊಂಡಿದೆ. ಆದರೂ ಪಾಕಿಸ್ತಾನ ಮಾತ್ರ `ಇದು ನಮ್ಮ ಕೃತ್ಯ’ವಲ್ಲ ಎಂಬ ಹೇಳಿಕೆ ನೀಡಿ ಜಾರಿಕೊಳ್ಳುತ್ತಿದೆ. ಪಾಕಿಸ್ತಾನದಿಂದ ದೂರದಲ್ಲಿರುವ ವಿಶ್ವದ ಹಿರಿಯಣ್ಣ ಅಮೆರಿಕಾಕ್ಕೂ `ಪಾಕ್ ಭಯ’ ಹುಟ್ಟಿತ್ತು. ಒಸಾಮಾ ಬಿನ್ ಲಾಡೆನ್ ಅಮೆರಿಕಾದ ನಿದ್ದೆಗೆಡಿಸಿದ್ದ. ಅಮೆರಿಕಾದ ವಿಮಾನವನ್ನೇ ಹೈಜಾಕ್ ಮಾಡಿ, ಅಲ್ಲಿನ ವಾಣಿಜ್ಯ ಕಟ್ಟಡಕ್ಕೆ ನುಗ್ಗಿಸಿ ಸ್ಫೋಟಿಸಿದ ರೀತಿ ಭಯಂಕರ. ಬಳಿಕ ಅಮೆರಿಕಾವು ಲಾಡೆನ್‍ನನ್ನು ಹೊಡೆದುರುಳಿಸಿತು ಆ ಮಾತು ಬೇರೆ. ಪ್ಯಾರಿಸ್‍ನ ಪತ್ರಿಕಾ ಕಚೇರಿಗೆ ನುಗ್ಗಿ ಅಲ್ಲಿನ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದು ಇನ್ನೂ ಕಣ್ಮುಂದೆ ಇದೆ.

ನೆರೆಯಲ್ಲೇ ಇರುವ ಪಾಕ್ ಉಪಟಳ ಭಾರತಕ್ಕೆ ಸಹಿಸಲಾಗುತ್ತಿಲ್ಲ. ಆದರೂ `ಭಾಯಿ-ಭಾಯಿ’ ಎನ್ನುತ್ತಲೇ ಇದ್ದಾರೆ. ಪಾಕಿಸ್ತಾನಿಗರು ನಮ್ಮ `ಬಾಂಧವರು’ ಎಂದು ಭಾರತ ಬಿಗಿದಪ್ಪಿಕೊಳ್ಳುತ್ತದೆ. ಆದರೆ, ನರಿ ಬುದ್ಧಿಯ ಪಾಕಿಸ್ತಾನ ಮಾತ್ರ `ಭಾಯಿ’ಯ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಲಿದೆ. ಪಾಕಿಗಳ ಕ್ಯಾತೆ ನಿಂತಿಲ್ಲ. ಕಾಶ್ಮೀರ ವಿಚಾರವಾಗಿ ಮುಸುಕಿನ ಗುದ್ದಾಟ ಈ ಕ್ಷಣದವರೆಗೂ ಮುಂದುವರಿಸಿದೆ. ಇದೇ ವಿಚಾರವಾಗಿ ಭಾರತ-ಪಾಕಿಸ್ತಾನದ ನಡುವೆ 3 ಯುದ್ಧ ನಡೆದಿದೆ. ಇನ್ನೊಂದು ಯುದ್ಧ ಬಾಂಗ್ಲಾದೇಶಿಗರನ್ನು ಸ್ವತಂತ್ರರಾಗಿಸಲು ಭಾರತ ಪಾಕ್‍ನೊಂದಿಗೆ ಯುದ್ಧ ನಡೆಸಿದೆ.

ಈ ವೇಳೆಯಲ್ಲಿ ಅಂತರ್ಜಾಲದಲ್ಲಿ ಲಭ್ಯವಿರುವ ಇಂಡೋ-ಪಾಕ್‍ನ ನಾಲ್ಕು ಯುದ್ಧಗಳ ಸಂಕ್ಷಿಪ್ತ ಮಾಹಿತಿ ಹೀಗಿದೆ…

1947ರ ಅಕ್ಟೋಬರ್‍ನಲ್ಲಿ ಭಾರತ-ಪಾಕಿಸ್ತಾನದ ನಡುವೆ ಕಾಶ್ಮೀರಕ್ಕೆ ಮೊದಲ ಯುದ್ಧ ನಡೆಯಿತು. ಇದನ್ನು `ಪ್ರಥಮ ಕಾಶ್ಮೀರಿ ಕದನ’ ಎಂದೂ ಕರೆಯಲಾಗುತ್ತದೆ. ಕಾಶ್ಮೀರದಲ್ಲಿ ರಾಜಾಡಳಿತ ಮುಂದುವರಿದಿತ್ತು. ಹರಿಸಿಂಗ್ ಎಂಬ ರಾಜನ ಆಡಳಿತದ ವ್ಯಾಪ್ತಿಗೆ ಜಮ್ಮು-ಕಾಶ್ಮೀರ ರಾಜ್ಯ ಒಳಪಟ್ಟಿತ್ತು. ಪಾಕಿಸ್ತಾನವು ಈ ರಾಜ್ಯ ಭಾರತ ಪಾಲಾಗಲಿವೆಯೇನೋ ಎಂಬ ಆತಂಕದಿಂದ ಅದನ್ನು ಪಡೆಯಲು ರಾಜನ ಆಡಳಿತ ವಿರೋಧಿಸಿ ಯುದ್ಧ ನಡೆಸಿದರು. ಯುದ್ಧದ ಬಳಿಕ ನಡೆದ ವಿಭಜನೆ ವೇಳೆ ಅಲ್ಲಿದ್ದ ಮುಸ್ಲೀಮರಿಗೆ ಪಾಕಿಸ್ತಾನ ಅಥವಾ ಭಾರತ ಸೇರಿಕೊಳ್ಳಲು ಅಥವಾ ಸ್ವತಂತ್ರವಾಗಿ ಇರಲು ಅವಕಾಶ ಮಾಡಿಕೊಡಲಾಯಿತು.

ಜಮ್ಮು-ಕಾಶ್ಮೀರದಲ್ಲಿ ಮುಸ್ಲೀಮರು ಬಹಳ ಸಂಖ್ಯೆಯಲ್ಲಿದ್ದರು. ಹೀಗಾಗಿ ಬುಡಕಟ್ಟು ಜನಾಂಗದವರು ಪಾಕಿಸ್ತಾನದ ಸೈನ್ಯದ ನೆರವಿನೊಂದಿಗೆ ಹರಿಸಿಂಗ್‍ನ ಮೇಲೆ ದಾಳಿ ನಡೆಸಿದರು. ಹೀಗಾಗಿ ರಾಜನು ಭಾರತದಲ್ಲಿ ರಾಜ್ಯ ವಿಲೀನ ಮಾಡುವ ಪ್ರಕ್ರಿಯೆಗೆ ಸಹಿ ಹಾಕಿ, ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಮಿಲಿಟರಿ ಪಡೆ ನಿಯೋಜಿಸಿದನು. ಈ ಹಿನ್ನೆಲೆಯಲ್ಲಿ ಯುನೈಟೆಡ್ ನೇಷನ್‍ನ ಭದ್ರತಾಪಡೆ ಏ.22, 1948ರಂದು `ರೆಸ್ಯೂಲೇಶನ್ ಆ್ಯಕ್ಟ್-47′ ಪ್ರಕಾರ `ಗಡಿ ನಿಯಂತ್ರಣ ರೇಖೆ’ (ಲೈನ್ ಆಫ್ ಕಂಟ್ರೋಲ್)ಯನ್ನು ಘೋಷಿಸಿತು. ಜ. 1.1949ರ 23:59 ಗಂಟೆಯಿಂದ ಕಾಶ್ಮೀರ ಕಣಿವೆ ಸೇರಿದಂತೆ ಜಮ್ಮು ಹಾಗೂ ಲಡಾಖ್ ಪ್ರಾಂತ್ಯಗಳು ಭಾರತ ವ್ಯಾಪ್ತಿಗೆ ಒಳಪಟ್ಟವು. ಪಾಕಿಸ್ತಾನಕ್ಕೆ ಸ್ವತಂತ್ರ ಕಾಶ್ಮೀರ, ಗಿಲ್ಗಿಟ್ ಹಾಗೂ ಬಾಲ್ತಿಸ್ತಾನ್ ಪ್ರಾಂತ್ಯಗಳು ಲಭಿಸಿದವು.

1965ರಲ್ಲಿ ಪಾಕಿಸ್ತಾನವು ಜಮ್ಮು-ಕಾಶ್ಮೀರಕ್ಕೆ ಮತ್ತೆ 2ನೇ ಬಾರಿಗೆ ಯುದ್ಧ ನಡೆಸಿತು. `ಆಪರೇಷನ್ ಗಿಬ್ರಾಲ್ಟರ್’ ಹೆಸರಿನಲ್ಲಿ ಯುದ್ಧಕ್ಕೆ ಅಣಿಯಾಯಿತು. ಜಮ್ಮು-ಕಾಶ್ಮೀರದಲ್ಲಿ ಒಳನುಸುಳಿ ಅಲ್ಲಿರುವ ಭಾರತೀಯ ಸೈನ್ಯ ಹಿಮ್ಮೆಟ್ಟಿಸುವ `ಯುದ್ಧತಂತ್ರ’ ಪಾಕಿಸ್ತಾನ ಹೆಣೆದಿತ್ತು. ಪಾಕಿಸ್ತಾನದ ಕುತಂತ್ರ ಅರಿತ ಭಾರತವೂ ಪಾಕಿಸ್ತಾನದ ಪಶ್ಚಿಮ ದಿಕ್ಕಿನಲ್ಲಿ ಭಾರತೀಯ ಸೇನೆಯನ್ನು ಸಮರ್ಥವಾಗಿ ನಿಯೋಜಿಸಿ ಪ್ರತೀಕಾರ ತೀರಿಸಿಕೊಂಡಿತು. 17 ದಿನಗಳವರೆಗೆ ಯುದ್ಧ ನಡೆದು ಎರಡೂ ದೇಶಗಳ ಸಾವಿರಾರು ಯೋಧರು ಹುತಾತ್ಮರಾದರು. ಸೋವಿಯತ್ ಒಕ್ಕೂಟ, ಅಮೆರಿಕಾ ಸಲಹೆ ಮೇರೆಗೆ ತಾಷ್ಕೆಂಟ್ ಒಪ್ಪಂದ ಮಾಡಿಕೊಂಡು ಇಬ್ಬರೂ ಕದನ ವಿರಾಮ ಘೋಷಿಸಿದವು.

1971ರಲ್ಲಿ ಭಾರತ-ಪಾಕ್ ನಡುವೆ 3ನೇ ಯುದ್ಧ ನಡೆಯಿತು. ಆದರೆ, ಇದು ಜಮ್ಮ-ಕಾಶ್ಮೀರದ ವಿಚಾರವಾಗಿ ನಡೆದ ಯುದ್ಧವಲ್ಲ. ಇದು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಭಾರತ ನಡೆಸಿದ ಸಾಂದರ್ಭಿಕ ಯುದ್ಧ. ಈ ವೇಳೆಯಲ್ಲಿ ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಪೂರ್ವ ಪಾಕಿಸ್ತಾನದ ಮುಖಂಡ ಶೇಖ್ ಮುಜಿಬುರ್ ರೆಹಮಾನ್ ಹಾಗೂ ಪಶ್ಚಿಮ ಪಾಕಿಸ್ತಾನದ ಮುಖಂಡ ಯಾಹ್ಯಾ ಖಾನ್ ಮತ್ತು ಜುಲ್ಫಿಕರ್ ಅಲಿ ಭುಟ್ಟೋ ಇವರ ನಡುವೆ ನಾಯಕತ್ವದ ಪ್ರತಿಷ್ಠೆ ಆರಂಭಗೊಂಡಿತ್ತು. ಇವರ ತಿಕ್ಕಾಟವನ್ನೇ ಬಾಂಗ್ಲಾದೇಶವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯುವ ಅಸ್ತ್ರವನ್ನಾಗಿ ಮಾಡಿಕೊಂಡಿತು. ಬಾಂಗ್ಲಾದೇಶದ ಈ ನಡೆ ಸಹಿಸದ ಪಾಕಿಸ್ತಾನವು ಬಾಂಗಾಲಿಗರ ಮೇಲೆ ದೌರ್ಜನ್ಯ ಮಾಡತೊಡಗಿತು. ಹೀಗಾಗಿ ಪೂರ್ವ ಪಾಕಿಸ್ತಾನದ ಸುಮಾರು 10 ಬಿಲಿಯನ್‍ನಷ್ಟು ಬಾಂಗಾಲಿಗರು ಭಾರತದ ಆಶ್ರಯ ಪಡೆದರು. ಅಲ್ಲದೆ ಭಾರತವು, ಬಾಂಗ್ಲಾದೇಶಕ್ಕೆ ನೆರವು ನೀಡುವ ಭರವಸೆ ನೀಡಿತು. ಇದನ್ನು ಸಹಿಸದ ಪಾಕಿಸ್ತಾನ ಭಾರತದ ವಿರುದ್ಧ ಯುದ್ಧ ಸಾರಿತು.

ಪಾಕಿಸ್ತಾನವು ಭಾರತದ ಪಶ್ಚಿಮ ದಿಕ್ಕಿನಲ್ಲಿ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ಸೈನ್ಯವನ್ನು ಸಮರ್ಥವಾಗಿ ನಿಯೋಜಿಸಿತು. ಪಾಕ್ ಸೇನೆ ಹಿಮ್ಮೆಟ್ಟಿಸಿ ಪಶ್ಚಿಮ ದಿಕ್ಕಿನ 5.795 ಚ.ಮೀ. ಭೂಭಾಗ ವಶಪಡಿಸಿಕೊಂಡಿತು. ಪಾಕಿಸ್ತಾನದ ವಶದಲ್ಲಿದ್ದ ಕಾಶ್ಮೀರ, ಪಂಜಾಬ್ ಹಾಗೂ ಸಿಂಧ್ ಪ್ರಾಂತ್ಯಗಳು ಭಾರತದ ಪಾಲಾದವು. ಆದರೆ, 1972ರ ಶಿಮ್ಲಾ ಒಪ್ಪಂದದಂತೆ ಭಾರತವು ವಶಕ್ಕೆ ಪಡೆದ ಈ ಪ್ರದೇಶಗಳನ್ನೆಲ್ಲ ಮರಳಿ ಪಾಕಿಸ್ತಾನಕ್ಕೆ ನೀಡಿ `ಮಾನವೀಯತೆ’ ಮೆರದಿತ್ತು. ಈ ಘಟನೆ ನಡೆದ ಎರಡು ವಾರಗಳ ಬಳಿಕ ಪೂರ್ವ ಪಾಕಿಸ್ತಾನದ ಸೈನ್ಯವು ಬಾಂಗ್ಲಾ ಹಾಗೂ ಭಾರತೀಯ ಜಂಟಿ ಸೈನ್ಯಕ್ಕೆ ಶರಣಾದವು. ಬಳಿಕ ಬಾಂಗ್ಲಾ ಸ್ವತಂತ್ರ ದೇಶವಾಯಿತು.

1999ರಲ್ಲಿ ಇಂಡೋ-ಪಾಕ್ ನಡುವೆ ನಾಲ್ಕನೇ ಯುದ್ಧ ನಡೆಯಿತು. ಇದು `ಕಾರ್ಗಿಲ್ ಯುದ್ಧ’ ಎಂದೇ ಖ್ಯಾತಿ ಪಡೆದಿದೆ. ಪದೇಪದೇ ಪಾಕಿಸ್ತಾನವು ಗಡಿರೇಖೆ ನಿಯಂತ್ರಣ (ಲೈನ್ ಆಫ್ ಕಂಟ್ರೋಲ್) ಒಪ್ಪಂದವನ್ನು ಮುರಿಯುತ್ತಲಿತ್ತು. ಅಕ್ರಮವಾಗಿ ಭಾರತದ ಕಾರ್ಗಿಲ್ ಗಡಿಯೊಳಗೆ ನುಸುಳಿತ್ತು. ಭಾರತವು ಕಾರ್ಗಿಲ್ ಭಾಗಕ್ಕೆ ಸೈನ್ಯ ನಿಯೋಜಿಸಿ ಪಾಕಿಸ್ತಾನದೊಂದಿಗೆ ಯುದ್ಧ ಸಾರಿತು. ಸುಮಾರು ಎರಡು ತಿಂಗಳ ಕಾಲ ಯುದ್ಧ ನಡೆಯಿತು. ಅಲ್ಲದೆ, ಭಾರತವು ಪಾಕ್ ಆಕ್ರಮಿತ ಕಾರ್ಗಿಲ್ ಪ್ರಾಂತ್ಯದ ಅನೇಕ ಶಿಖರವನ್ನು ಮತ್ತೆ ಪಡೆಯುವಲ್ಲಿ ಯಶಸ್ವಿಯಾಯಿತು. ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿತು. 4 ಸಾವಿರಕ್ಕೂ ಹೆಚ್ಚು ಪಾಕ್ ಸೈನಿಕರು ಮೃತಪಟ್ಟಿದ್ದರು. ಹೀಗಾಗಿ ಪಾಕ್‍ನ ಉಳಿದ ಸೈನಿಕರು ಯುದ್ಧ ಮಾಡಲು ನಿರಾಕರಿಸಿದರು. ಅಂತಾರಾಷ್ಟ್ರೀಯ ಸಮುದಾಯಗಳು ಇರುವ ಸೈನ್ಯ ಹಿಂಪಡೆಯುವಂತೆ ಪಾಕ್ ಮೇಲೆ ಒತ್ತಡ ಹಾಕಿದವು. ಈ ವೇಳೆಗಾಗಲೇ ಪಾಕಿಸ್ತಾನ ಆರ್ಥಿಕ ದಿವಾಳಿತನ ಎದುರಿಸಿತ್ತು. ಇನ್ನಷ್ಟು ಆರ್ಥಿಕ ನಷ್ಟವಾಗುವ ಹಿನ್ನೆಲೆಯಲ್ಲಿ ಹಾಗೂ ವಿಶ್ವದಲ್ಲಿ ಏಕಾಂಗಿಯಾಗುವ ಭೀತಿಯಿಂದ ಸೈನ್ಯ ಹಿಂಪಡೆಯಿತು. 99ರ ಜುಲೈನಲ್ಲಿ ಭಾರತ ವಿಜಯೋತ್ಸವ ಆಚರಿಸಿತು. ಇದು ಪಾಕ್-ಭಾರತದ ನಡುವಿನ ಯುದ್ಧದ ಇತಿಹಾಸ.

`ಮುಕ್ಕರಿಸಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಮಾತಿನಂತೆ ಮತ್ತೆ ಪಾಕಿಸ್ತಾನ ತಂಟೆ ಮಾಡುತ್ತಿದೆ. ಭಾರತಕ್ಕಂತೂ ಪಾಕಿಸ್ತಾನದ ಭಯೋತ್ಪಾದಕ ಕೃತ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೇ ತಿಂಗಳಲ್ಲಿ `ಉರಿ’ಯಲ್ಲಿ ಉಗ್ರರು ನಡೆಸಿದ ದಾಳಿಗೆ 18 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಯುದ್ಧ ನಡೆಸಿ ಅಪಾರ ಪ್ರಮಾಣದ ಸಾವು-ನೋವು ನಡೆಸಲು ಭಾರತಕ್ಕೆ ಮನಸ್ಸಿಲ್ಲ. `ಇನ್ನಾದರೂ ಬದಲಾಗಿ’ ಎಂಬ ಸಲಹೆ ನೀಡುತ್ತಿದೆ. ಸಹನೆಗೂ ಒಂದು ಮಿತಿಯಿದೆ. `ಉರಿ’ ಘಟನೆಯಿಂದ ಭಾರತಕ್ಕೆ ತುಂಬಾ ಉರಿಯಾಗಿದೆ. ಹೀಗಾಗಿ ಇದೇ ಉರಿಯನ್ನು ಪಾಕಿಸ್ತಾನಕ್ಕೂ ಮುಟ್ಟಿಸಲು ಭಾರತ ಮುಂದಾಗಬಹುದಾಗಿದೆ. ಪಾಕಿಸ್ತಾನದ ಉಗ್ರರ `ಉರಿ ದಾಳಿ’ಯು ಇಂಡೋ-ಪಾಕ್ ನಡುವೆ ಐದನೇ ಯುದ್ಧ ನಡೆಯಲು ವೇದಿಕೆಯಾದರೂ ಅಚ್ಚರಿಯಿಲ್ಲ. `ವಿನಾಶಕಾಲೇ ವಿಪರೀತ ಬುದ್ಧಿ’ ಎನ್ನುವಂತೆ ಪಾಕಿಸ್ತಾನಕ್ಕೆ ಅದ್ಯಾವ ಕೆಟ್ಟ ಘಳಿಗೆ ಕಾದಿದೆಯೋ ಏನೋ?