ಇತರ ಜೀವಿಗಳ ಬದುಕನ್ನೇ ಕಸಿಯುತ್ತಿರುವ ದುಷ್ಟ ಮಾನವ…

0
873

ಆಧುನಿಕ ಬದುಕು ಸಾಗಿಸಬೇಕು ಎಂಬ ಹುಚ್ಚು ಹಂಬಲದಲ್ಲಿ ಗುಬ್ಬಚ್ಚಿ ಸೇರಿದಂತೆ ಇತರ ಜೀವಿಗಳ ಬದುಕನ್ನೇ ಕಸಿಯುತ್ತಿದ್ದಾನೆ ಮಾನವ. ಬೆಂಗಳೂರು ನಗರದ ಜನತೆಗೆ ಗುಬ್ಬಚ್ಚಿ ಪುಸ್ತಕಗಳಲ್ಲಿ ನೋಡುವ ಚಿತ್ರವಾಗಷ್ಟೇ ಉಳಿಯುವ ದಿನ ದೂರವಿಲ್ಲ.ಕಾಂಕ್ರೀಟ್ ಜಂಗಲ್‌ನಲ್ಲಿ ಗುಬ್ಬಚ್ಚಿಯಂಥ ಸಂವೇದನಾಶೀಲ ಪಕ್ಷಿ ಸಂಕುಲವಿಂದು ಅಳಿವಿನ ಅಂಚು ತಲುಪುವಂತಾಗಿದೆ. ಗೂಡು ಕಟ್ಟಿ ಕೊಳ್ಳಲು ಸ್ಥಳಾವಕಾಶವಿಲ್ಲದೇ ಸಣ್ಣ ಪಕ್ಷಿಯನ್ನು ನಾವೇ ಹೊರ ದಬ್ಬಿದಂತಾಗುತ್ತಿದೆ.

ಅವು ನೀರಿಗೂ ಪರದಾಡಬೇಕಾಗಿದೆ. ವಿಶಿಷ್ಟ ಧ್ವನಿಯಲ್ಲಿ, ಕ್ಷಣ ಹೊತ್ತೂ ಸುಮ್ಮನಿರದೆ ಚಿವ್‌ಗುಡುತ್ತ, ಜಿಗಿಯುತ್ತಾ, ಪುಟಿಯುತ್ತಿದ್ದ ಗುಬ್ಬಿ ಸಂಸಾರ ಸಮೇತ ನಾಪತ್ತೆಯಾಗಿದೆ. ಸದಾ ಚಿವ್‌ಚಿವ್ ಕಲರವದೊಂದಿಗೆ, ಜಿಗಿದಾಡುತ್ತಾ, ಹಾರಾಡುತ್ತಾ ಹುಲ್ಲಿನ ಎಳೆಗಳನ್ನು ತಂದು ಗೂಡು ಕಟ್ಟುತ್ತಾ, ಅಕ್ಕಿ-ಜೋಳ ಹಸನು ಮಾಡುತ್ತಿದ್ದ ಹೆಣ್ಮಕ್ಕಳ ಮುಂದೆ ಹಾರಿಬಂದು ಕುಳಿತು ಎಸೆಯುವ ಹರಳುಗಳ ನಡುವೆಯೇ ಬೀಳುವ ಕಾಳುಗಳನ್ನು ತಿನ್ನುತ್ತ ಕಲರವ ಮಾಡುತ್ತಿದ್ದ ಗುಬ್ಬಿಗಳ ಸಂಸಾರ ಇಂದು ನೇಪಥ್ಯ ಸೇರುತ್ತಿದೆ.

ಮೊಬೈಲ್ ಟವರ್‌ಗಳ ಹಾವಳಿಯಿಂದ ಗುಬ್ಬಚ್ಚಿಗಳು ಹೊರಟುಹೋದವು ಎಂಬುದು ಒಂದು ವಾದವಾದರೆ, ಪುಟ್ಟ ಶ್ವಾಸಕೋಶದ ಈ ಹಕ್ಕಿಗಳಿಗೆ ನಗರದಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯವನ್ನು ಸಹಿಸಲಾಗದೆ ದೂರ ಓಡುತ್ತಿವೆ ಎನ್ನುವವರಿದ್ದಾರೆ.ಗುಬ್ಬಚ್ಚಿಯನ್ನು ಮನುಷ್ಯರು ಮುಟ್ಟಿದರೆ, ಅದನ್ನು ಬೇರೆ ಗುಬ್ಬಚ್ಚಿಗಳು ಮತ್ತೆ ತಮ್ಮ ಬಳಿ ಸೇರಿಸುವುದಿಲ್ಲ ಎಂಬ ನಂಬಿಕೆಯೊಂದಿದೆ. ಆದರೆ ಮನುಷ್ಯರಂತೆ ಗುಬ್ಬಚ್ಚಿಗಳೂ ಅಸ್ಪೃಶ್ಯತೆ ಆಚರಿಸುತ್ತವೆಂದರೆ, ಏಕೋ ನಂಬಿಕೆ ಬಾರದು.

ಭಾರತದ ನೇಚರ್ ಫಾರ್ ಎವರ್ ಸೊಸೈಟಿ, ಬುರಹಾನಿ ಫೌಂಡೇಷನ್ ಜೊತೆಗೂಡಿ, ಗುಬ್ಬಚ್ಚಿಗಳನ್ನು ಉಳಿಸಿ ಎಂಬ ಆಂದೋಲನವನ್ನು 2010 ರಿಂದ ಶುರು ಮಾಡಿ ವಿಶ್ವದಾದ್ಯಂತ 52 ಸಾವಿರ ಮೇವುಣಿಕೆಗಳನ್ನು ಹಂಚುವ ವ್ಯವಸ್ಥೆ ಮಾಡಲಾಗಿದೆ.ಭಾರತೀಯ ಅಂಚೆ ಇಲಾಖೆ 2010 ಮಾರ್ಚ್ 20 ರಂದು ಗುಬ್ಬಚ್ಚಿ ಯೊಂದಿಗೆ ಪಾರಿವಾಳವಿರುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಹೀಗೆ, ಗುಬ್ಬಚ್ಚಿ ಸಂಕುಲ ಸಂರಕ್ಷಣೆಗೆ ಹಲವು ಪ್ರಯತ್ನಗಳು ನಡೆದಿವೆಯಾದರೂ ಇನ್ನೂ ನಿರೀಕ್ಷಿತ ಫಲ ದೊರೆತಿಲ್ಲ.

ರಣ ಬಿಸಿಲಿನಲ್ಲಿ ಬಾಯಾರಿಕೆಯಾಗಿ ನೀರು ಕುಡಿಯೋಣವೆಂದರೆ ಒಂದು ಕೆರೆ ಕೂಡ ಸಿಗುತ್ತಿಲ್ಲ, ಬಾವಿಗಳು ಬತ್ತಿವೆ.ಸಿಕ್ಕ ಹೊಲಗಳಿಗೆ ಹಾರಿ ಅಲ್ಲಿ ಸಿಗುವ ಹುಳು-ಹುಪ್ಪಟೆಗಳನ್ನೇ ತಮ್ಮ ಮರಿಗಳಿಗೆ ಉಣಿಸೋಣವೆಂದರೆ, ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಅವೂ ಸತ್ತಿವೆ.

ಮೊಬೈಲ್ ಟವರ್‌ಗಳಿಂದ ಹೊರಹೋಗುವ ತರಂಗಗಳು ಗುಬ್ಬಚ್ಚಿಗಳ ಜೀವಕ್ಕೆ ಮಾರಕ ಎಂದು ಪರಿಸರ ತಜ್ಞರು ಬೊಬ್ಬೆ ಹೊಡೆಯುತ್ತಿದ್ದರೂ ಅವರ ಮಾತುಗಳಿಗೆ ಇಂದು ಬೆಲೆ ಇಲ್ಲದಂತಾಗಿದೆ. ಭೂಮಿಯ ಬದುಕನ್ನು ಹಾಳು ಮಾಡಿದ ಅಪರಾಧಕ್ಕಾಗಿ ಮನುಷ್ಯನಿಗೆ ತನ್ನಷ್ಟಕ್ಕೆ ತಾನೆ ನೇಣುಗಂಬದ ಶಿಕ್ಷೆ ದೊರೆಯುತ್ತದೆ.