ಈತನ ಬ್ಲ್ಯಾಕ್ ಅಂಡ್ ವೈಟ್ ಡ್ರೆಸ್‌ಗೆ ಅಡ್ವಾಣಿಯೇ ಫಿದಾ ಆದರು!

0
838

ಒಂದು ಕಡೆ ಕಪ್ಪು ಮತ್ತೊಂದು ಕಡೆ ಬಿಳಿ ಬಣ್ಣ ಇರುವ ಶರ್ಟ್.. ಕಪ್ಪು ಬಣ್ಣ ಇರುವ ಕಡೆ ಶ್ರೀಮಂತ ವ್ಯಕ್ತಿಯೊಬ್ಬ ನಗುತ್ತಿದ್ದರೆ, ಬಿಳಿ ಬಣ್ಣ ಇರುವ ಕಡೆ ಬಡವ ತಲೆ ಮೇಲೆ ಕೈ ಹೊತ್ತಿರುವ ಚಿತ್ರಗಳು ರಾರಾಜಿಸುತ್ತಿದ್ದವು.. ಪ್ಯಾಂಟ್ ಕಪ್ಪು ಬಣ್ಣದಾಗಿದ್ದರೆ, ಚಪ್ಪಳಿ ಬಿಳಿ ಬಣ್ಣದು…

ಇದೇನಿದು ಈ ತರಹ ವಸ್ತ್ರ ಯಾರಾದರೂ ಧರಿಸುತ್ತಾರಾ? ಎಂದು ಕೇಳಬೇಡಿ. ಯಾಕೆಂದರೆ ಮಂಗಳವಾರ ನಡೆದ ಲೋಕಸಭೆಯ ಕಲಾಪಕ್ಕೆ ತೆಲುಗು ದೇಶಂ ಪಕ್ಷದ ಸಂಸದ ಡಾ. ಶಿವಪ್ರಸಾದ್ ಈ ರೀತಿ ವಿಚಿತ್ರ ಧಿರಿಸು ಧರಿಸಿ ಬಂದಿದ್ದು ಎಲ್ಲರ ಗಮನ ಸೆಳೆಯಿತು.

ಕಲಾಪದಲ್ಲಿ ಭಾಗವಹಿಸಲು ಸದನದೊಳಗೆ ಪ್ರವೇಶಿಸುತ್ತಿದ್ದಂತೆ ಎಲ್ಲರ ದೃಷ್ಟಿ ಇವರ ಮೇಲೆ ಹರಿಯಿತು. ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಪಕ್ಷಗಳು ಕಪ್ಪುಹಣ ಹಾಗೂ ನೋಟು ರದ್ಧತಿ ಕುರಿತು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವಾಗ ಶಿವಪ್ರಸಾದ್ ಆಗಮನ ಚರ್ಚೆಯ ದಿಕ್ಕು ಕೆಲವು ನಿಮಿಷಗಳ ಕಾಲ ಬದಲಿಸಿತು.

ಸಚಿವರಾದ ಅನಂತ್‌ಕುಮಾರ್ ಸೇರಿದಂತೆ ಸಚಿವರು ಕೂಡ ಇವರ ಧಿರಿಸು ಕುರಿತು ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದರು. ಶಿವಪ್ರಸಾದ್ ಅವರ ಕಾಳಜಿ ಹಾಗೂ ಅವರ ಪ್ರತಿಭಟನೆಯ ಶೈಲಿ ಗಮನಿಸಿದ ಮಾಜಿ ಉಪರಾಷ್ಟ್ರಪತಿ ಎಲ್.ಕೆ. ಅಡ್ವಾಣಿ ಕೂಡ ಪ್ರಶಂಸೆ ವ್ಯಕ್ತಪಡಿಸಿದರು.