ಉತ್ತಮ ಆರೋಗ್ಯಕ್ಕೆ ಬೇಕು ಉದಕ!!

0
2744

ಮನುಷ್ಯನ ದೇಹದ ಶೇಕಡಾ 70 ರಷ್ಟು ಭಾಗದಲ್ಲಿ ನೀರಿನಂಶ ಇದೆ. ಈ ಭೂಮಿಯ ಶೇಕಡಾ 70 ರಷ್ಟು ನೀರು ಇದೆ. ನೀರು ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ ಹಾಗಾಗಿ ನೀರು ಪೂಜನೀಯ ಜೀವಿಗಳ ದಾಹ ತಣಿಸಲು ನೀರಿಗಿಂತ ಉತ್ತಮ ಪಾನೀಯ ಮತ್ತೊಂದಿಲ್ಲ ಹಾಗಾಗಿ ಜೀವಜಲ ವೆಂದರೆ ತಪ್ಪೇನಿಲ್ಲ. ಕೆಲವರಿಗೆ ಹೆಚ್ಚು ನೀರು ಕುಡಿಯುವ ಅಭ್ಯಾಸವಿದ್ದರೆ ಕೆಲವರು ಬಾಯಾರಿಕೆ ಅನ್ನಿಸಿದಾಗ ಮಾತ್ರ ನೀರು ಕುಡಿಯುತ್ತಾರೆ.

ಕೆಲವರು ತಮ್ಮ ದೇಹಕ್ಕೆ ಅಗತ್ಯವಿರುವ ಕಾಲುಭಾಗದಷ್ಟು ಸಹ ನೀರು ಕುಡಿಯುವುದಿಲ್ಲ, ಪ್ರತಿಯೊಬ್ಬ ಮನುಷ್ಯರಿಗೂ ದಿನಕ್ಕೆ 8 ಲೋಟಗಳಷ್ಟು ನೀರು ಬೇಕೆಂದು ಗೊತ್ತು ಆದರೆ ಆಹಾರ ಶಾಸ್ತ್ರಜ್ಞರು ಹೇಳುವುದೇ ಬೇರೆ ಅವರ ಪ್ರಕಾರ ನಮ್ಮ ದೇಹ ಸುಸ್ಥಿತಿಯಲ್ಲಿರಬೇಕಾದರೆ 8 ಲೋಟಕ್ಕಿಂತ ಜಾಸ್ತಿ ನೀರು ಬೇಕು ಇದು ದೇಹಕ್ಕೆ ಅಗತ್ಯವಾಗಿದ್ದು ಆರೋಗ್ಯಕ್ಕೆ ಉತ್ತಮ ಕೂಡ. ದೇಹ ಆರೋಗ್ಯವಾಗಿರಬೇಕಾದರೆ ಹೆಚ್ಚು ನೀರನ್ನು ಕುಡಿಯಬೇಕು. ಕಡಿಮೆ ನೀರು ಕುಡಿಯುವ ಅಭ್ಯಾಸವಿರುವವರು 8 ಲೋಟಕ್ಕಿಂತ ಹೆಚ್ಚಾದ ನೀರನ್ನು ಕುಡಿಯಲು ಅಭ್ಯಾಸ ಮಾಡಿಕೊಳ್ಳಬೇಕು ಮೊದಮೊದಲು ಬಹಳ ಸಲ ಮೂತ್ರ ವಿಸರ್ಜನೆಗೆ ಹೋಗಬೇಕಾಗಬಹುದು ಆದರೆ ಅಭ್ಯಾಸವಾದಂತೆಲ್ಲ ಹೆಚ್ಚು ಮೂತ್ರವನ್ನು ಹಿಡಿದಿಟ್ಟುಕೊಳ್ಳಲು ಅಭ್ಯಾಸವಾಗುತ್ತದೆ.

ನೀವು ದಿನಕ್ಕೆ ಎಷ್ಟು ಸಾರಿ ನೀರು ಕುಡಿಯುತ್ತೀರಿ? ನೀವು ಕುಡಿಯುತ್ತಿರುವ ನೀರು ನಿಮ್ಮ ದೇಹಕ್ಕೆ ಸಾಕಾಗುತ್ತಿದೆಯೋ ಇಲ್ಲವೋ? ಎಂದು ನೀವೇ ಪರೀಕ್ಷಿಸಿಕೊಳ್ಳಬಹುದು, ಅದು ನಿಮ್ಮ ಮೂತ್ರದ ಬಣ್ಣದ ಮೂಲಕ, ನೀವು ಹಳದಿ ಬಣ್ಣದ ಮೂತ್ರ ವಿಸರ್ಜಿಸುತ್ತಿದ್ದರೆ ನೀವು ಕುಡಿಯುತ್ತಿರುವ ನೀರು ನಿಮ್ಮ ದೇಹಕ್ಕೆ ಸಾಕಾಗುತ್ತಿಲ್ಲವೆಂದೇ ತಿಳಿಯಬೇಕು. ಬೆಳಗ್ಗೆ ಎದ್ದಾಗ ಮೊದಲ ಸಲ ಮೂತ್ರ ವಿಸರ್ಜಿಸಿದಾಗ ಅದು ಶುದ್ಧ ಹಾಗೂ ತೆಳು ಹಳದಿ ಬಣ್ಣ ಅಥವಾ ಬಿಳಿಯ ಬಣ್ಣದ್ದಾಗಿರಬೇಕು ಹಾಗಿದ್ದರೆ ಮಾತ್ರ ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂದರ್ಥ. ಕೆಲವರು ನಾವುನೀರು ಜಾಸ್ತಿ ಕುಡಿಯುವುದಿಲ್ಲ ಆದರೆ ತಂಪು ಪಾನೀಯ ಸೋಡಾ ಮುಂತಾದವನ್ನು ಕುಡಿಯುತ್ತೇವಲ್ಲ ಅದು ಸಾಕಲ್ಲವೇ ಎನ್ನುವವರಿಗೇನೂ ಕಡಿಮೆಯಿಲ್ಲ. ಅದು ತಪ್ಪು, ತಂಪು ಪಾನೀಯವಾಗಲಿ ಮಧ್ಯವಾಗಲಿ ನಾವು ಕುಡಿಯುವ ನೀರಿಗೆ ಸರಿಸಾಟಿಯಾಗುವುದಿಲ್ಲ ಇವುಗಳು ನಮ್ಮ ದೇಹದಿಂದ ಹೆಚ್ಚು ನೀರು ಹೊರಹೋಗುವಂತೆ ಮಾಡುತ್ತದೆ.

ಅಧಿಕ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಅನೇಕ ಉಪಯೋಗಗಳಿವೆ, ಕಡಿಮೆ ನೀರು ಕುಡಿಯುವುದರಿಂದ ಅನಾರೋಗ್ಯಕ್ಕೆ ದಾರಿ ಮಾಡಕೊಡಬಹುದು ನೀರಿನ ಉಪಯೋಗಗಳೇನು ಕಡಿಮೆ ನೀರು ಕುಡಿದರೆ ಏನಾಗುತ್ತದೆ? ಎಂದು ಕೆಳಗೆ ಓದಿ ನೋಡಿ.

ಮೊದಲನೆಯದಾಗಿ ದೇಹದ ತೂಕವನ್ನು ಕಡಿಮೆ ಮಾಡಲು ಹಾಗೂ ಕಾಪಾಡಿಕೊಳ್ಳಲು ಈ ನೀರು ಹೆಚ್ಚು ಉಪಯುಕ್ತವಾಗಿದೆ. ಎಂದರೆ ಆಶ್ಚರ್ಯವಾಗಬಹುದು. 240 ಜನ ಅಧಿಕ ತೂಕವಿರುವ ಮಹಿಳೆಯರ ಮೇಲೆ ನಡೆಸಿದ ಅಧ್ಯಯನಗಳಿಂದ ಇದು ತಿಳಿದು ಬಂದಿದೆ. 25 ರಿಂದ 50 ವರ್ಷದೊಳಗಿನ ಮಹಿಳೆಯರು ಈ ಅಧ್ಯಯನಕ್ಕೆ ಒಳಗಾಗುವ ಮುಂಚೆ ಸುಮಾರು 2 ಕ್ಯಾನ್ ನಷ್ಟು ಸಾಫ್ಟ್ ಡ್ರಿಂಕ್ಸ್ ಗಳನ್ನು ಕುಡಿಯುತ್ತಿದ್ದರು ಸರಿಸುಮಾರು 200 ಕ್ಯಾಲೋರಿ ಇದರಲ್ಲಿ ಸೋಡಾ ಹಾಗೂ ಹಣ್ಣಿನ ರಸವೂ ಸೇರಿತ್ತು ಇದರ ಜಗದಲ್ಲಿ ಅವರಿಗೆ ನೀರನ್ನು ಕೊಡಲಾಯಿತು ಹೀಗೆ ಮಾಡಿದಾಗ ಈ ಮಹಿಳೆಯರು ವರ್ಷದಲ್ಲಿ 5 ಪೌಂಡ್ ಗಿಂತ ಅಧಿಕ ತೂಕವನ್ನು ಕಳೆದುಕೊಂಡರು ಇದರ ಜೊತೆಗೆ ಹೆಚ್ಚಾಗಿ 4 ಗ್ಲಾಸ್ ನೀರು ಕುಡಿಯುತ್ತಿದ್ದ ಮಹಿಳೆಯರು ಇನ್ನೂ 2 ಪೌಂಡ್ ಹೆಚ್ಚು ತೂಕವನ್ನು ಕಳೆದುಕೊಂಡಿದ್ದರು. ಜೊತೆಯಲ್ಲೇ ಪರೀಕ್ಷೆಗೊಳಪಟ್ಟ 200 ಕ್ಯಾಲೋರಿಗಳಿರುವ ತಂಪು ಪಾನೀಯ ಕುಡಿಯುತ್ತಿದ್ದ ಮಹಿಳೆಯರು ತೂಕದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ ಹೆಚ್ಚೆಚ್ಚು ನೀರು ಕುಡಿದಷ್ಟು ಹೆಚ್ಚೆಚ್ಚು ತೂಕವನ್ನು ಕಳೆದುಕೊಳ್ಳಬಹುದು ಎಂದು ಅಧ್ಯಯನಗಳು ಸಾಬೀತು ಮಾಡಿದೆ.

ನೀರಿನಿಂದ ನಮ್ಮ ದೇಹಕ್ಕೆ ಅನೇಕ ಉಪಯೋಗಗಳಿವೆ, ಅಲ್ಲದೇ ನೀರು ಅನೇಕ ರೋಗಗಳಿಗೆ ರಾಮಬಾಣ ಅದರಲ್ಲೂ ಬೇಸಿಗೆ ಕಾಲದಲ್ಲಿ ಎಷ್ಟು ಜಾಸ್ತಿ ನೀರು ಕುಡಿಯುತ್ತೀರೋ ಅಷ್ಟು ಒಳ್ಳೆಯದು. ಬೇಸಿಗೆಯಲ್ಲಿ ನೀರು, ಬೆವರು, ಮಲ ಮತ್ತು ಮೂತ್ರದ ಮೂಲಕ ಹೊರಹೋಗುತ್ತದೆ ಸುಮಾರು 2 ರಿಂದ 2.5 ಲೀನಷ್ಟು ನೀರು ಮಲ ಮೂತ್ರ ಬೆವರಿನ ಮೂಲಕ ಹೊರ ಹೋಗುತ್ತದೆ ಹಾಗಾಗಿ ಬೇಸಿಗೆಯಲ್ಲಿ ಪ್ರತಿಯೊಬ್ಬ ಮನುಷ್ಯನು ಅಧಿಕ ನೀರು ಸೇವಿಸಬೇಕು ಅಧಿಕ ನೀರು ದೇಹದ ಉಷ್ಣತೆ ಜಾಸ್ತಿಯಾಗದಂತೆ ನೋಡಿಕೊಳ್ಳುತ್ತದೆ.

ಮೂತ್ರಕೋಶದ ಸೋಂಕಿನಿಂದ ಬಳಲುತ್ತಿರುವವರು ಹೆಚ್ಚೆಚ್ಚು ನೀರು ಕುಡಿಯಬೇಕು. ಇಲ್ಲದಿದ್ದರೆ ಸೋಂಕು ಉಲ್ಬಣವಾಗುತ್ತದೆ ಅಧಿಕ ನೀರು ಸೋಂಕನ್ನು ಮೂತ್ರದ ಮೂಲಕ ಹೊರಹಾಕುತ್ತದೆ. ನೀರು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕಲ್ಮಶಗಳನ್ನು ಹೊರಹಾಕುತ್ತದೆ.

ನಮ್ಮ ದೇಹಕ್ಕೆ ಬೇಕಾದ ಲವಣಾಂಶವನ್ನು ನಾವು ಕುಡಿಯುವ ನೀರಿನಿಂದಲೇ ಪಡೆಯಬೇಕು ಹಾಗಾಗಿ ಬೇಸಿಗೆಯಲ್ಲಿ ಬಾಯಾರಿಕೆಯೆಂದು ಕಾರ್ಬೊನೇಟೆಡ್ ವಾಟರ್ (ಸೋಡಾ) ತಂಪು ಪಾನೀಯಗಳ ಮೊರೆ ಹೋಗದೆ ಶುದ್ಧ ಜಲದ ಮೊರೆ ಹೋಗಿ.

ಬೆಳಗ್ಗೆ ಎದ್ದ ತಕ್ಷಣ ಎರಡು ಲೋಟ ನೀರು ಕುಡಿಯಿರಿ ಇದರಿಂದ ಮಲವಿಸರ್ಜನೆ ಸುಸೂತ್ರವಾಗಿ ಆಗುತ್ತದೆ. ಮಲಬದ್ಧತೆಯನ್ನು ತಡೆಗಟ್ಟಲು ಇದಕ್ಕಿಂತ ಉಪಾಯ ಮತ್ತೊಂದಿಲ್ಲ! ನಮ್ಮ ದೇಹದಲ್ಲಿ ರಕ್ತದ ಸರಬರಾಜು ಸುಸೂತ್ರವಾಗಿ ಆಗಲು ನೀರು ಅತಿ ಅವಶ್ಯಕ ಹಾಗಾಗಿ ಅಧಿಕ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ನೀವು ದೇಹದ ತೂಕ ಇಳಿಸಿಕೊಳ್ಳಲು ಜಿಮ್‍ಗೆ ಹೋಗುತಿದ್ದರೆ ಮೊದಲು 1 ಲೋಟ ಬಿಸಿ ನೀರು ಕುಡಿದು ಹೋಗಿ ಜಿಮ್ ಮಾಡಿ ಈ ರೀತಿ ಮಾಡಿದಾಗ ದೇಹ ಚೆನ್ನಾಗಿ ಬೆವರುತ್ತದೆ ಹಾಗೂ ಬೆವರಿನ ಜೊತೆ ಕೊಬ್ಬು ಸಹ ಕರಗುತ್ತದೆ ಅಲ್ಲದೇ ದೇಹದ ತೂಕ ಹೇಗೆ ಕಡಿಮೆಯಾಗುತ್ತದೆ ಎಂದು ನಿಮಗೆ ಗೊತ್ತಾಗುತ್ತದೆ ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ನಮ್ಮ ದೇಹಕ್ಕೆ ಬೇಕಾಗುವ ಲವಣಾಂಶಗಳು ನಮಗೆ ನಾವು ಕುಡಿಯುವ ನೀರಿನಿಂದ ದೊರೆಯುತ್ತದೆ ಹಾಗಾಗಿ ನಾವು ಹೆಚ್ಚು ನೀರನ್ನು ಕುಡಿಯಬೇಕು, ಅಷ್ಟೇ ಅಲ್ಲ ಕಡಿಮೆ ನೀರು ಕುಡಿಯುವುದರಿಂದ ನಾವು ತಿನ್ನುವ ಆಹಾರದ ಮೂಲಕ ಸೇರುವ ಕ್ಯಾಲ್ಸಿಯಂ ಫಾಸ್ಫರಸ್ ಮೆಗ್ನಿಷಿಯಂ ಮುಂತಾದ ಲವಣಗಳು ಮೂತ್ರದ ಮೂಲಕ ವಿಸರ್ಜನೆಯಾಗದೇ ಮೂತ್ರಕೋಶದಲ್ಲಿ ಕಲ್ಲುಗಳಾಗುವ ಸಂಭವ ಹೆಚ್ಚು, ಹಾಗಾಗಿ ಅಧಿಕ ನೀರು ಕುಡಿಯುವುದರಿಂದ ಮೂತ್ರಕೋಶದ ಕಲ್ಲನ್ನು ತಡೆಗಟ್ಟಬಹುದು.

ಊಟಕ್ಕೆ ಅರ್ಧ ತಾಸು ಮೊದಲು ಅಥವಾ ಊಟವಾದ ನಂತರ ನೀರು ಕುಡಿಯಿರಿ ಊಟದ ಮಧ್ಯೆ ನೀರು ಕುಡಿಯುವುದರಿಂದ ಕಡಿಮೆ ಆಹಾರ ದೇಹವನ್ನು ಸೇರುತ್ತದೆ ಊಟದ ಮೊದಲು ಅಥವಾ ನಂತರ ನೀರು ಕುಡಿಯುವುದರಿಂದ ಪಚನಕ್ರಿಯೆಗೆ ಸಹಾಯವಾಗುತ್ತದೆ.

ಚೆನ್ನಾಗಿ ನೀರು ಕುಡಿಯುವುದರಿಂದ ಮಲಬದ್ಧತೆ ಕಾಡುವುದಿಲ್ಲ.

ದೇಹದಲ್ಲಿ ನೀರಿನಂಶ ಕಡಿಮೆಯಾದರೆ “ನಿರ್ಜಲತೆ” (DEHYDRATION) ಉಂಟಾಗುತ್ತದೆ ಹೀಗಿದ್ದಾಗ ಸುಸ್ತು ಕಣ್ಣುಗಳು, ಉರಿ, ಕಣ್ಣು ಗುಳಿ ಬೀಳುವುದು, ತುಟಿಗಳು ಒಣಗುವುದು, ಏಕಾಗ್ರತೆಯಲ್ಲಿ ಕೊರತೆ ನಾಲಗೆ ಚರ್ಮ ಒಣಗುವುದು ಮುಂತಾದ ಲಕ್ಷಣಗಳು ಕಾಣುತ್ತದೆ. ಹಾಗಾಗಿ ಅಧಿಕ ನೀರನ್ನು ಕುಡಿಯಬೇಕು ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಬಹುದು.

ಅಧಿಕ ನೀರಿನಂಶ ದೇಹದ ಕಾಂತಿಯನ್ನು ಹೆಚ್ಚಿಸುತ್ತದೆ. ಅತಿಬಿಸಿಯಾದ ನೀರಿನಿಂದ ಸ್ನಾನ ಮಾಡುವ ಅಭ್ಯಾಸವಿದ್ದರೆ ಖಂಡಿತಾ ಬಿಟ್ಟುಬಿಡಿ, ಕಾರಣ ಬಿಸಿನೀರು ಮುಖದ ಕಾಂತಿಯನ್ನು ಕಳೆಗುಂದುವಂತೆ ಮಾಡುತ್ತದೆ, ಬೆಚ್ಚಗಿನ ನೀರಿನಲ್ಲಿ ಸ್ನಾನ ಹಾಗೂ ಆಗಾಗ ತಣ್ಣೀರಿನಿಂದ ಮುಖ ತೊಳೆಯುತ್ತಿದ್ದರೆ ಮುಖದ ಕಾಂತಿ ಹೆಚ್ಚುತ್ತದೆ.

ಕಡಿಮೆ ನೀರು ಕುಡಿಯುವ ಅಭ್ಯಾಸವಿರುವವರು ಹೆಚ್ಚಿಗೆ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಸಾಮಾನ್ಯ ಮನಷ್ಯನಿಗೆ ದಿನವೊಂದಕ್ಕೆ 8 ಔನ್ಸ್ ಗಳಷ್ಟು (8 OUNCE) ನೀರನ್ನು 8 ಸಲ ಕುಡಿಯಬೇಕೆಂದು ಸಮೀಕ್ಷೆಗಳು ಹೇಳುತ್ತದೆ ಅಂದರೆ ಸುಮಾರು 8 ಲೋಟಗಳಷ್ಟು ನೀರನ್ನು ಕುಡಿಯಬೇಕು. ನಿಮ್ಮ ದೇಹಕ್ಕೆ ಎಷ್ಟು ನೀರಿನ ಅಗತ್ಯವಿದೆ ಎಂದು ಕಂಡುಕೊಳ್ಳಲು ನಿಮ್ಮ ದೇಹದ ತೂಕವನ್ನು (ಪೌಂಡ್ಸ್ ಗಳಲ್ಲಿ) 2 ರಿಂದ ಭಾಗಿಸಿರಿ 2 ರಿಂದ ಭಾಗಿಸಿದಾಗ ಬರುವ ಸಂಖ್ಯೆಯ ಔನ್ಸ್ ಗಳಷ್ಟು ನೀರು ನಿಮ್ಮ ದೇಹಕ್ಕೆ ಬೇಕು.

ರಾತ್ರಿ ಮಲಗುವಾಗ ಒಂದು ಲೋಟ ನೀರಿನಲ್ಲಿ ತೊಳೆದ ಪುದೀನಾ ಎಲೆಗಳನ್ನು ಹಾಕಿಟ್ಟು ಬೆಳಗ್ಗೆ ಎದ್ದು ಆ ನೀರನ್ನು ಕುಡಿಯುವುದರಿಂದ ದೇಹದ ಪಚನ ಕ್ರಿಯೆ ಹೆಚ್ಚುತ್ತದೆ, ಹಾಗೆಯೇ ಈ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.

ಬೇಸಿಗೆಯಲ್ಲಿ ಅಧಿಕ ನೀರನ್ನು ಕುಡಿಯುವುದು ಒಳ್ಳೆಯದು, ನೀರು ಕುಡಿಯಲು ಬೇಸರವೆನಿಸಿದರೆ, ಅಧಿಕ ನೀರಿನಂಶವಿರುವ ಕಲ್ಲಂಗಡಿ ಹಣ್ಣನ್ನು ತಿನ್ನಿರಿ ಇದರಲ್ಲಿ ಶೇಕಡಾ 92 ರಷ್ಟು ನೀರಿನಂಶ ಇದೆ ಕಲ್ಲಂಗಡಿ ಹಣ್ಣನ್ನು ಮಿಕ್ಸಿಯಲ್ಲಿ 4 ಪುದೀನಾ ಎಲೆಗಳೊಂದಿಗೆ ಹಾಕಿ ಜ್ಯೂಸ್ ಮಾಡಿಕೊಂಡು ಕುಡಿದರೆ ಇದಕ್ಕಿಂತ ತಂಪು ಪೇಯ ಮತ್ತೊಂದಿಲ್ಲ. ಮೂತ್ರನಾಳದ ಸೋಕಿನಿಂದ ಬಳಲುತ್ತಿರುವವರು ಈ ಪೇಯವನ್ನು ಬೇಸಿಗೆಯಲ್ಲಿ ಕುಡಿಯುವುದರಿಂದ ಸೋಂಕು ಸ್ವಲ್ಪ ಮಟ್ಟಿಗೆ ನಿವಾರಣಯಾಗುತ್ತದೆ.

ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ