ಏಕರೂಪ ನಾಗರಿಕ ಸಂಹಿತೆ ಜಾರಿಗೆ ವ್ಯಾಪಕ ಚರ್ಚೆ ಅಗತ್ಯ: ಸಿದ್ದರಾಮಯ್ಯ

0
880

ಬೆಂಗಳೂರು, ಜು.3: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರ ಸಿದ್ಧತೆ ನಡೆಸಿಡೆಸುತ್ತಿದ್ದು. ಈ ವಿಚಾರದ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಕಾನೂನು ಆಯೋಗದ ಅಭಿಪ್ರಾಯ ಕೋರಿದೆ. ಈ ವಿಚಾರವಾಗಿ ದೇಶದಲ್ಲಿ ಈಗಿರುವಂತಹ ಪರಿಸ್ಥಿತಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸಮಗ್ರವಾಗಿ ಚರ್ಚೆ ನಡೆಸದೆ, ಏಕಾಏಕಿ ಜಾರಿಗೊಳಿಸುವುದು ಕಷ್ಟಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ವಿಧಾನಸೌಧದ ಮುಂಭಾಗದಲ್ಲಿ ಪೊಲೀಸ್ ಇಲಾಖೆಯ 222 ಹೊಯ್ಸಳ ಗಸ್ತು ವಾಹನಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸರಕಾರವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಉದ್ದೇಶಿಸಿದೆ. ಆದರೆ, ಅದರ ಸಾಧಕ-ಬಾಧಕಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಾಕವಾಗಿ ಚರ್ಚೆ ನಡೆಸಬೇಕು. ಏಕಾಏಕಿ ಇದನ್ನು ಜಾರಿಗೊಳಿಸುವುದು ಸುಲಭದ ಕೆಲಸವಲ್ಲ ಎಂದು ಅವರು ಹೇಳಿದರು. ಏಕರೂಪ ನಾಗರಿಕ ಸಂಹಿತೆಯು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಕೇಂದ್ರ ಸರಕಾರ ಈ ಸಂಬಂಧ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸಂಸತ್ತು ಹಾಗೂ ವಿಧಾನಮಂಡಲಗಳಲ್ಲಿ ಚರ್ಚೆಗಳು ನಡೆಯಬೇಕು. ದೇಶಾದ್ಯಂತ ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳಬೇಕು. ಆನಂತರವಷ್ಟೆ ಮುಂದುವರೆಯ ಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.