ಏರಿಯಲ್ ವೈಫೈನಿಂದ ತುಂಬಿ ತುಳುಕಲಿದೆ ಗಾರ್ಡೆನ್ city…

0
1005

ಏನ್ ಇದು ಹೊಸ ತಂತ್ರಜ್ಞಾನ ಅನ್ಕೊಂಡ್ರಾ…. ಹೌದು…

ಬೆಂಗಳೂರಿನಲ್ಲಿ ವೈಮಾನಿಕ ವೈಫೈ ಜಾಲ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ದೇಶದಲ್ಲೇ ಈ ಸೌಲಭ್ಯ ಹೊಂದಿದ ಮೊದಲ ನಗರ ಎಂಬ ಖ್ಯಾತಿ ಗಳಿಸಲಿದೆ.ಸಿಲಿಕಾನ್ ಸಿಟಿ ಇನ್ನು ಮುಂದೆ ವೈಫೈ ಸೌಲಭ್ಯ ಹೊಂದಿದ ನಗರವಾಗಲಿದೆ.

ಪ್ರಸಕ್ತ ನಗರ ಸೇರಿದಂತೆ ರಾಜ್ಯದ ಕೆಲವು ಕಡೆಗಳಲ್ಲಿ ಸರ್ಕಾರ, ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ವೈಫೈ ಸೌಲಭ್ಯ ಒದಗಿಸುತ್ತಿದೆ. ಇದರ ನಿರ್ವಹಣಾ ವೆಚ್ಚ ಬಹಳ ಅಧಿಕವಾಗಿದ್ದು, ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದ್ದರಿಂದ ಆಕಾಶದಲ್ಲಿ ಇಂಟರ್‌ನೆಟ್ ಸೇವೆ ಒದಗಿಸುವ ಚಿಂತನೆ ನಡೆದಿದೆ.ಅಂತರ್ಜಾಲ ಸೇವೆ ಒದಗಿಸುವ ಸಂಸ್ಥೆಗಳು ಕೇಬಲ್ ಮೂಲಕ ಸಂಪರ್ಕ ಕಲ್ಪಿಸುವುದರಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುವುದನ್ನು ಮನಗಂಡ ಸರ್ಕಾರ, ಆಕಾಶದಲ್ಲಿ ವೈಫೈ ಸೌಲಭ್ಯ ಒದಗಿಸಲು ಮುಂದಾಗಿದೆ. ಏರಿಯಲ್ ವೈಫೈ ಸೌಲಭ್ಯದ ಬಗ್ಗೆ ಈಗಾಗಲೇ ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಮಾತುಕತೆ ನಡೆಸಿದ್ದು, ಆಂಟೆನಾ ವ್ಯವಸ್ಥೆಯಿಂದ ಈ ಸೇವೆ ಸಿಗಲಿದೆ.

ನಗರದಲ್ಲಿ ಏರಿಯಲ್ ವೈಫೈ ಸೌಲಭ್ಯ ಒದಗಿಸುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಈ ಕುರಿತು ಮಾತುಕತೆ ನಡೆಸುತ್ತಿದ್ದೇವೆ. ದೇಶದ ಯಾವುದೇ ರಾಜ್ಯದಲ್ಲಿ ಇದುವರೆಗೆ ಏರಿಯಲ್ ವೈಫೈ ಸೌಲಭ್ಯ ಇಲ್ಲ. ಇದಕ್ಕೆ ಅಗತ್ಯವಿರುವ ಆಂಟೆನಾ, ಟವರ್‌ ಮತ್ತಿತರ ಮೂಲಸೌಕರ್ಯ ಒದಗಿಸುವ ಕೆಲಸ ನಡೆಯುತ್ತಿದೆ. ಶೀಘ್ರವೇ ಇದು ಅನುಷ್ಠಾನಗೊಳ್ಳಲಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಮಾಹಿತಿ ನೀಡಿದ್ದಾರೆ.

ನಿಯಮದಲ್ಲೂ ಕೆಲವು ಬದಲಾವಣೆ ತರಲು ಐಟಿ-ಬಿಟಿ ಇಲಾಖೆ ಮುಂದಾಗಿದೆ. ಯೋಜನೆಯ ಅನುಷ್ಠಾನಕ್ಕೆ ದೂರಸಂಪರ್ಕ ಕಂಪನಿಗಳಿಗೆ ಆಹ್ವಾನ ನೀಡಿ, ಈ ಮೂಲಕ ಅದರ ಲಾಭವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಕೂಡ ಇಲಾಖೆ ನಿರ್ಧರಿಸಿದೆ. ಬೆಂಗಳೂರಿನ ಎಂ.ಜಿ. ರಸ್ತೆ ಸೇರಿದಂತೆ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಸೌಲಭ್ಯ ಯಶಸ್ವಿಯಾಗಿರುವುದರಿಂದ ಇತರ ಕಡೆಗಳಲ್ಲೂ ಈ ಸೌಲಭ್ಯ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈಗಿರುವ ವ್ಯವಸ್ಥೆಯನ್ನು ಉನ್ನತೀಕರಿಸಲು ಹಾಗೂ ನಗರಾದ್ಯಂತ ಸೇವೆ ವಿಸ್ತರಿಸಲು ಒಟ್ಟು 500 ಕೋಟಿ ರೂ. ಅಂದಾಜು ಯೋಜನೆಯನ್ನು ಸಿದ್ಧಪಡಿಸಿತ್ತು. ಆದರೆ ಅದು ಹೆಚ್ಚಿನ ಹೊರೆಯಾಗುವುದರಿಂದ ಈ ವೈಮಾನಿಕ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ನೆಲ ಅಗೆಯುವ ಹಾಗೆ ಇಲ್ಲ :

ಈಗಿರುವ ಇಂಟರ್‌ನೆಟ್ ಸೇವೆ ಉತ್ತಮಪಡಿಸಬೇಕಾದರೆ ನಗರದ ರಸ್ತೆಗಳನ್ನು ಅಗೆಯಬೇಕಾಗುತ್ತದೆ ಎಂದು ಕಂಪನಿಗಳು ಹೇಳುತ್ತಿವೆ. ನಗರದಲ್ಲಿ 8 ವಿವಿಧ ಸೇವಾ ಕಂಪನಿಗಳು ಇಂಟರ್‌ನೆಟ್ ಸೇವೆ ಒದಗಿಸುತ್ತಿದೆ. ನಗರದಲ್ಲಿ ವೈಫೈ ಸೌಲಭ್ಯ ಉತ್ತಮಪಡಿಸಲು ಇಲ್ಲಿ ಒಟ್ಟು 2500 ಕಿ.ಮೀ.ನಷ್ಟು ರಸ್ತೆ ಅಗೆದು, ಆಪ್ಟಿಕಲ್ ಫೈಬರ್ ಕೇಬಲ್(ಒಎಫ್‌ಸಿ) ಅಳವಡಿಸಬೇಕಾಗಿದೆ ಎಂದು ಸೇವಾ ಕಂಪನಿಗಳು ಅಂದಾಜಿಸಿವೆ. ಇದು ದೊಡ್ಡ ಹೊರೆಯಾಗಲಿದ್ದು, ಅಲ್ಲದೆ ಈಗಾಗಲೇ ಹೊಸದಾಗಿ ನಿರ್ಮಿಸಿರುವ ರಸ್ತೆಯನ್ನು ಅಗೆಯಬೇಕಾಗುವುದರಿಂದ ಇದಕ್ಕೆ ಬದಲಾಗಿ ವೈಮಾನಿಕ ವೈಫೈ ಸೌಲಭ್ಯವನ್ನು ನಗರದಲ್ಲಿ ಅಳವಡಿಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.