ಕಂಬಿ ಎಣಿಸುತ್ತಿದ್ದಾರೆ ‘ಮಾಸ್ತಿಗುಡಿ’ ನಿರ್ಮಾಪಕ ಸುಂದರ್ ಪಿ. ಗೌಡ…

0
872

‘ಮಾಸ್ತಿಗುಡಿ’ ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ಅವರನ್ನು ರಾಮನಗರ ಜಿಲ್ಲೆ ತಾವರೆಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ‘ಮಾಸ್ತಿಗುಡಿ’ ಚಿತ್ರದ ಕಲಾವಿದರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕರನ್ನು ಬಂಧಿಸಲಾಗಿದೆ. ಸುಂದರ್ ಪಿ. ಗೌಡ ಈ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದಾರೆ. ಅವರನ್ನು ಬಂಧಿಸಿ, ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

5 ಜನರ ವಿರುದ್ಧ ಐ.ಪಿ.ಸಿ. ಸೆಕ್ಷನ್ 188, 304 ಹಾಗೂ ಸಹ ಕಲಂ 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರದ ಆದೇಶ ಉಲ್ಲಂಘನೆ, ಉದ್ದೇಶಪೂರ್ವಕವಲ್ಲದ ಮಾನವ ಹತ್ಯೆ ಮೊದಲಾದ ಪ್ರಕರಣ ದಾಖಲಿಸಿಕೊಂಡಿರುವ ತಾವರೆಕೆರೆ ಠಾಣೆ ಪೊಲೀಸರು, ನಿರ್ಮಾಪಕರನ್ನು ಬಂಧಿಸಿದ್ದಾರೆ.

ಸುಂದರ್ ಪಿ. ಗೌಡ ಅವರನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ‘ಮಾಸ್ತಿಗುಡಿ’ ನಿರ್ದೇಶಕ ನಾಗಶೇಖರ್ 2 ನೇ ಆರೋಪಿಯಾಗಿದ್ದಾರೆ. ಸಹ ನಿರ್ದೇಶಕ ಸಿದ್ದು 3 ನೇ, ಸಾಹಸ ನಿರ್ದೇಶಕ ರವಿವರ್ಮ 4 ನೇ, ಯುನಿಟ್ ಮ್ಯಾನೇಜರ್ ಎಸ್. ಭರತ್ 5 ನೇ ಆರೋಪಿಯಾಗಿದ್ದಾರೆ. ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಖಳನಟರಾದ ಉದಯ್ ಮತ್ತು ಅನಿಲ್ ಅವರು ಹೆಲಿಕಾಪ್ಟರ್ ನಿಂದ ನೀರಿಗೆ ಹಾರಿ ಮೃತಪಟ್ಟಿದ್ದು, ಅವರ ಪತ್ತೆ ಕಾರ್ಯಾಚರಣೆ ಮುಂದುವರೆದಿದೆ.

50 ಅಡಿ ಆಳದಲ್ಲಿ ಅನಿಲ್‌ ಶವ:

ಜಲಾಶಯದ 50 ಅಡಿ ಆಳದ ಹೂಳಿನಲ್ಲಿ ಅನಿಲ್‌ ಅವರ ಶವ ಹೂತು ಹೋಗಿರುವ ಸಾಧ್ಯತೆ ಇದೆ ಎಂದು ರೋಬೊಟ್‌ ತಜ್ಞ  ಮಂಜೇಗೌಡ ಅವರು ಪೊಲೀಸರಿಗೆ ಹೇಳಿದ್ದಾರೆ. ರೋಬೊಟ್‌ ನೀಡಿದ ಮಾಹಿತಿ ಆಧಾರದಲ್ಲಿ ಅವರು ಈ ಅಂದಾಜು ಮಾಡಿದ್ದಾರೆ. ಅದರಂತೆ ರಕ್ಷಣಾ ಸಿಬ್ಬಂದಿ, ಮಂಜೇಗೌಡ ತೋರಿಸಿರುವ ಜಾಗದಲ್ಲಿರುವ ಹೂಳು ತೆಗೆಯುವ ಕಾರ್ಯದಲ್ಲಿ ಮಂಗಳವಾರ ರಾತ್ರಿ ನಿರತರಾಗಿದ್ದರು.