ಕನ್ನಡಿಗರಿಗೆ ಶೌರ್ಯ ಪ್ರಶಸ್ತಿ…

0
1046

ಸಂಭ್ರಮದ 70 ನೇ ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಸೇನಾ ಶೌರ್ಯ ಪದಕಗಳನ್ನು ಪ್ರಕಟಿಸಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ, ಕರ್ನಾ ಟಕದ ಮೂವರು ಹುತಾತ್ಮ ಯೋಧರಿಗೆ ಗೌರವ ದೊರೆತಿದೆ.

ಪ್ರಪಂಚದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಹಿಮರಾಶಿಯೊಳಗೆ ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಬದುಕಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಧಾರವಾಡ ಜಿಲ್ಲೆಯ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಹಾಗೂ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ವಿಜಯಪುರ ಜಿಲ್ಲೆಯ ಸಹದೇವ ಮಾರುತಿ ಮೋರೆ ಅವರಿಗೆ ಸೇನಾ ಪದಕ ದೊರೆತಿದೆ.ಪಠಾಣ್ಕೋಟ್ ವಾಯುನೆಲೆಯಲ್ಲಿ ಬಾಂಬ್ ಶೋಧ ನಿಷ್ಕ್ರಿಯಗೊಳಿಸುತ್ತಿದ್ದಾಗ ವೀರಮರಣವನ್ನಪ್ಪಿದ್ದ ಬೆಂಗಳೂರಿನ ಯೋಧ ಲೆಫ್ಟಿನೆಂಟ್ ಕರ್ನಲ್ ಇ.ಕೆ. ನಿರಂಜನ್ ಅವರಿಗೆ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ “ಶೌರ್ಯ ಚಕ್ರ’ ಲಭಿಸಿದೆ.

ಗನ್ನರ್ ಮೋರೆ ವಿಜಯಪುರ ಜಿಲ್ಲೆ ಸಾವಳಸಂಗ ಗ್ರಾಮದ ಸಹದೇವ ಮಾರುತಿ ಮೋರೆ ಅವರು ಸೇನೆಯಲ್ಲಿ ಗನ್ನರ್ ಆಗಿದ್ದರು. ಜಮ್ಮು-ಕಾಶ್ಮೀರದಲ್ಲಿ ಉಗ್ರರ ಜತೆ ಫೆಬ್ರವರಿ ಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅವರು ವೀರಮರಣವನ್ನಪ್ಪಿದ್ದರು.

ಜ.1 ಹಾಗೂ 2ರ ರಾತ್ರಿ ಪಠಾಣ್ಕೋಟ್ ವಾಯುನೆಲೆಗೆ ಭಯೋತ್ಪಾದಕರು ನುಗ್ಗಿದ್ದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ಕಾರ್ಯಾಚರಣೆಗೆಂದು ಕರ್ನಲ್ ನಿರಂಜನ್ ರನ್ನು ಬೆಂಗಳೂರಿನಿಂದ ಕರೆಸಿಕೊಳ್ಳಲಾಗಿತ್ತು. ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್ಜಿ)ದ ಬಾಂಬ್ ನಿಷ್ಕ್ರಿಯದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಅತ್ಯಂತ ಅನುಭವಿಯಾಗಿದ್ದರು. ಮೃತ ಉಗ್ರನ ದೇಹವನ್ನು ಪರಿಶೀಲಿಸುತ್ತಿದ್ದಾಗ ಆತನ ಜೇಬಿನಲ್ಲಿದ್ದ ಗ್ರೆನೇಡ್ ಸ್ಫೋಟಗೊಂಡು ನಿರಂಜನ್ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದರು. ಕಳೆದ ವಾರವಷ್ಟೇ ಬೆಂಗಳೂರು ಮಹಾನಗರ ಪಾಲಿಕೆ ನಿರಂಜನ್ ಅವರ ಮನೆಯ ಗೋಡೆಯನ್ನು ಕೆಡವಲು ಮುಂದಾಗುವ ಮೂಲಕ ಸುದ್ದಿಯಾಗಿತ್ತು.

ಸತತ 5 ದಿನಗಳ ಕಾಲ ಹೋರಾಡಿ ಸಾವನ್ನು ಗೆದ್ದು ಸೋತ ಹನುಮಂತಪ್ಪ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸಹಿತ 10 ಯೋಧರು ಸಿಯಾಚಿನ್ನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದಾಗ ಹಿಮಬಂಡೆ ಕುಸಿದಿತ್ತು. ಈ ವೇಳೆ ಎಲ್ಲ ಹತ್ತೂ ಯೋಧರು ಮೈನಸ್ 45 ಡಿಗ್ರಿ ಸೆ. ಉಷ್ಣಾಂಶದ ಹಿಮದೊಳಗೆ ಹೂತುಹೋಗಿದ್ದರು. ಇವರನ್ನು ರಕ್ಷಿಸಲು ಸೇನೆ ಕಾರ್ಯಾಚರಣೆ ಆರಂಭಿಸಿತಾದರೂ ಸಾಕಷ್ಟು ತೊಂದರೆಗಳು ಎದುರಾಗಿದ್ದವು. ಕೊಪ್ಪದ್ ಅವರನ್ನು ಹೊರತುಪಡಿಸಿ ಉಳಿದೆಲ್ಲ ಯೋಧರು ಮೃತಪಟ್ಟಿದ್ದರು. ಆರು ದಿನಗಳ ಕಾಲ ಹಿಮದಡಿ ಇದ್ದರೂ ಕೊಪ್ಪದ್ ಪವಾಡ ಸದೃಶರಾಗಿ ಬದುಕಿದ್ದರು. ಅನಂತರ ಅವರನ್ನು ದಿಲ್ಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.


ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಗಳ ‘ವಿಶಿಷ್ಟ’ ಹಾಗೂ ‘ಶ್ಲಾಘನೀಯ ಸೇವಾ’ ಪ್ರಶಸ್ತಿಗೆ ರಾಜ್ಯದ 19 ಪೊಲೀಸರು ಭಾಜನರಾಗಿದ್ದಾರೆ. ಅವರ ವಿವರ ಈ ಕೆಳಗಿನಂತಿದೆ.

ವಿಶಿಷ್ಟ ಸೇವಾ ಪದಕ

*ಎ.ಎಸ್.ಎನ್ ಮೂರ್ತಿ, ಐಜಿಪಿ, ಆಂತರಿಕ ಭದ್ರತಾ ವಿಭಾಗ

*ವಿಜಯ ಕುಮಾರ್ ಜಿ.ಡಂಬಳ, ಹೆಚ್ಚುವರಿ ಎಸ್ಪಿ, ಬಳ್ಳಾರಿ

ಶ್ಲಾಘನೀಯ ಸೇವಾ ಪದಕ

*ಸಿ.ಎ.ಸಿದ್ದಲಿಂಗಯ್ಯ, ಇನ್ಸ್ಪೆಕ್ಟರ್, ಕೋಲಾರ

*ಪ್ರಮೋದ್ ಎಸ್.ಧಾಗೆ, ಇನ್ಸ್ಪೆಕ್ಟರ್, ಬೆಂಗಳೂರು ಗ್ರಾಮಾಂತರ

*ಶ್ರೀಧರ್ ದೊಡ್ಡಿ, ಇನ್ಸ್ಪೆಕ್ಟರ್, ಹೊಸಪೇಟೆ

*ಎಂ.ಶಾಂತರಾಜ್, ಇನ್ಸ್ಪೆಕ್ಟರ್, ಬೆಂಗಳೂರು

*ಕೆ.ಎಸ್.ಪ್ರಾಣೇಶ್ ಮೂರ್ತಿ, ಎಸ್‌ಐ, ಗುಪ್ತದಳ

*ಪಿ.ನಾಗರಾಜ್, ಎಎಸ್‌ಐ, ಹಾಸನ

*ಟಿ.ಎಲ್.ಮುದ್ದುರಾಜು ಅರಸ್, ಎಆರ್‌ಎಸ್‌ಐ, ಡಿಎಆರ್, ಚಿಕ್ಕಮಗಳೂರು

*ಸಿ.ಕೆ.ಪದ್ಮನಾಭ, ಎಎಸ್‌ಐ, ಚಿಕ್ಕಮಗಳೂರು

*ಎ.ಎಂ.ಪಳಂಗಪ್ಪ, ಎಆರ್‌ಎಸ್‌ಐ, ಕೆಎಸ್‌ಆರ್ಪಿ, ಬೆಂಗಳೂರು

*ಕೆ.ಇ.ಮ್ಯಾಥ್ಯು, ಎಎಚ್ಸಿ, ಡಿಎಆರ್, ಶಿವಮೊಗ್ಗ

*ಸಿ. ಹಿರಿಯಣ್ಣಯ್ಯ, ಎಎಚ್ಸಿ, ಡಿಎಆರ್, ಚಿಕ್ಕಮಗಳೂರು

*ಎಂ.ಎನ್.ನಾಗರಾಜ್, ಎಸ್ಪಿ, ಬಾಗಲಕೋಟೆ

*ಮಂಜುನಾಥ್ ಅಣ್ಣಿಗೇರಿ, ಎಸ್ಪಿ, ಲೋಕಾಯುಕ್ತ

*ಎಸ್.ಬದ್ರಿನಾಥ್, ಎಸಿಪಿ, ಬೆಂಗಳೂರು

*ವಿನಯ್ ಎ.ಗಾಂವ್ಕರ್, ಎಸಿಪಿ, ಬೆಂಗಳೂರು

*ವಿ.ಮರಿಯಪ್ಪ, ಎಸಿಪಿ, ಬೆಂಗಳೂರು

*ಸೋಮಲಿಂಗಪ್ಪ ಬಿ.ಛಬ್ಬಿ, ಎಸಿಪಿ, ಹುಬ್ಬಳ್ಳಿ