ಕರ್ನಾಟಕದಲ್ಲಿ ಕಸ ಸುರಿಯಲು ಬಂದ ಕೇರಳದ ಲಾರಿಗಳು ವಶ

0
816

ಕೇರಳದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಅರಣ್ಯ ಅಥವಾ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗುವ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಗಡಿಭಾಗದಲ್ಲಿರುವ ತಪಾಸಣೆ ಕೇಂದ್ರಗಳಲ್ಲಿರುವ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

ವಿಷಕಾರಕ ಮತ್ತು ಅನುಪಯುಕ್ತ ಪದಾರ್ಥಗಳನ್ನು ಕೇರಳದಿಂದ ನಾಗರಹೊಳೆ ಅರಣ್ಯ ಭಾಗದ ಕಾಡಂಚಿನ ರಸ್ತೆ ಮಗ್ಗುಲಲ್ಲಿ ಸುರಿದು ಪರಾರಿಯಾಗುತ್ತಿದ್ದ ೫ ಲಾರಿಗಳನ್ನು ಎಚ್.ಡಿ. ಕೋಟೆಯ ಅಂತರಸಂತೆ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತ್ಯಾಜ್ಯ ವಸ್ತುಗಳನ್ನು ತುಂಬಿಕೊಂಡು ಮೈಸೂರು ಕಡೆಗೆ ಬರುತ್ತಿದ್ದ ಕೇರಳದ ೫ ಲಾರಿಗಳನ್ನು ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಹರೀಶ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಅಂತರಸಂತೆ ಬಳಿ ಲಾರಿ ಗಳನ್ನು ವಶಕ್ಕೆ ಪಡೆದು ಚಾಲಕರಾದ ಸಫೀರ್, ಸತ್ಯನ್, ಸಲೀಂ, ಸಂಶುದ್ದೀನ್ ಮತ್ತು ನಿಜಾಮುದ್ದೀನ್ ಅವರನ್ನು ಬಂಧಿಸಿದ್ದಾರೆ.

ಲಾರಿಗಳನ್ನು ಬೀಚನಹಳ್ಳಿ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ. ಸದ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡ ಳಿಗೆ ಲಾರಿಯಲ್ಲಿದ್ದ ತ್ಯಾಜ್ಯದ ಮಾದರಿಯನ್ನು ನೀಡಲಾಗಿದ್ದು ಅಲ್ಲಿಂದ ವರದಿ ಬಂದ ನಂತರ ಸೂಕ್ತ ಕ್ರಮ ಜರುಗಿಸಲಾ ಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ

ಅಪಾಯಕಾರಿ ಮತ್ತು ಸೋಂಕನ್ನು ಹರಡುವ ಆಸ್ಪತ್ರೆಯಲ್ಲಿ ಬಳಸುವ ಸಿರಂಜ್, ಔಷಧೀಯ ತ್ಯಾಜ್ಯಗಳು, ದನಗಳ ಮೂಳೆ, ಪ್ಲಾಸ್ಟಿಕ್ ತ್ಯಾಜ್ಯಗಳಿದ್ದು, ಇದನ್ನು ಕಾಡಂಚಿನ ಗ್ರಾಮಗಳ ಹಲವೆಡೆ ಸುರಿದು ಪರಾರಿಯಾಗಲು ಯತ್ನಿಸು ತ್ತಿದ್ದರು ಎನ್ನಲಾಗಿದೆ.

ಇದೇ ರೀತಿಯ ಘಟನೆ ಮೇ ತಿಂಗಳಲ್ಲಿ ನಡೆದಿತ್ತು. ಎರಡು ಲಾರಿಗಳನ್ನು ಮೈಸೂರು ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.

ಕಳೆದ ಮೂರು ವರ್ಷಗಳಿಂದ ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆ ಎರಡೂ ಪಕ್ಕದಲ್ಲಿ ಮತ್ತು ಕೆಲ ಗ್ರಾಮಗಳ ಬಳಿ ಇಂತಹ ತ್ಯಾಜ್ಯ ವಸ್ತುಗಳು ತುಂಬಿದ ಚೀಲಗಳು ಕಂಡು ಬರುತ್ತಿದ್ದವು.

ಕೇರಳದಿಂದ ಕರ್ನಾಟಕದತ್ತ ಬರುವ ಲಾರಿಗಳನ್ನು ತಪಾಸಣೆ ಮಾಡಿ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಕೇರಳಿಗರಿಗೆ ಕರ್ನಾಟಕ ಕಸದ ತೊಟ್ಟಿ ಆಗುವುದರಲ್ಲಿ ಸಂಶಯವಿಲ್ಲ.