ಸಿ ವರ್ಗದ ಕಾರ್ಮಿಕರ ಕನಿಷ್ಠ ವೇತನ 350 ರೂ.ಗೆ ಏರಿಕೆ

0
1021

ಕೃಷಿಯೇತರ ಪರಿಣತರಲ್ಲದ ಕಾರ್ಮಿಕರ ಕನಿಷ್ಠ ದಿನಗೂಲಿಯನ್ನು 246 ರೂ.ಗಳಿಂದ 350 ರೂ.ಗಳಿಗೆ ಏರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ.

ನವದೆಹಲಿ: ದೇಶವ್ಯಾಪಿ ಶುಕ್ರವಾರ ಮುಷ್ಕರ ನಡೆಸುವ ಬೆದರಿಕೆ ಹಾಕಿರುವ ಕಾರ್ಮಿಕರ ಸಂಘಗಳ ಆಕ್ರೋಶ ತಣಿಸುವ ಸರ್ಕಾರ ಪ್ರಯತ್ನ ಮಾಡಿದೆ. ಸಿ ವರ್ಗದ ಕಾರ್ಮಿಕರಿಗೆ ಸಂಬಂಧಿಸಿದ ನಿಯಮಾವಳಿಯಂತೆ 350 ರೂ. ಗಳ ದಿನಗೂಲಿ ನಿಗದಿ ಮಾಡಲಾಗಿದೆ. ಪರಿಷ್ಕತ ನಿಯಮಾವಳಿಯಂತೆ ಕೇಂದ್ರ ಸರ್ಕಾರ ನೌಕರರ 2014-15 ಹಾಗೂ 2015-16ರ ಬೋನಸ್ ಪಾವತಿಸಲಾಗುವುದೆಂದೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪತ್ರಕರ್ತರಿಗೆ ತಿಳಿಸಿದರು.

jaitley3

ಬೋನಸ್ ತಿದ್ದುಪಡಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‍ಗಳಲ್ಲಿ ಬಾಕಿ ಉಳಿದಿರುವ ಬೋನಸ್ ಪಾವತಿಗೆ ಸಂಬಂಧಿಸಿದ ಪ್ರಕರಣಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಆವಶ್ಯಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು. ಬೋನಸ್ ಪಾವತಿಯಿಂದ ಸರ್ಕಾರಕ್ಕೆ ವಾರ್ಷಿಕ 1920 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಸಚಿವರುಗಳ ಸಮಿತಿಯು ಕಾರ್ಮಿಕ ಸಂಘಗಳೊಂದಿಗೆ ಹಲವಾರು ಬಾರಿ ಮಾತುಕತೆ ನಡೆಸಿದೆ. ಈ ಸಂಘಟನೆಗಳು ವಿವಿಧ ರೀತಿಯ ಬೇಡಿಕೆಗಳನ್ನು ಮುಂದಿಟ್ಟಿವೆ. ಇವುಗಳಲ್ಲಿ ಕೆಲವೊಂದು ಕಾರ್ಮಿಕರ ಸಮಸ್ಯೆಯಾದರೆ ಇತರ ಹಲವು ಆರ್ಥಿಕ ನೀತಿಗಳಿಗೆ ಸೇರಿದ್ದಾಗಿದೆ. ಸಮಿತಿಯ ಕೆಲವೊಂದು ಶಿಫಾರಸ್ಸುಗಳ ಆಧಾರದಲ್ಲಿ ಸರ್ಕಾರ ಹಲವು ತೀರ್ಮಾನಗಳನ್ನು ಕೈಗೊಂಡಿದ್ದೇವೆ ಎಂದು ಜೇಟ್ಲಿ ವಿವರಿಸಿದರು.

ಈ ಸಂದರ್ಭದಲ್ಲಿ ವಿದ್ಯುತ್ ಹಾಗೂ ಕಲ್ಲಿದ್ದಲು ಸಚಿವ ಪಿಯೂಷ್ ಗೋಯೆಲ್, ಕಾರ್ಮಿಕ ಹಾಗೂ ಉದ್ಯೋಗ ಸಚಿವ ಬಂಡಾರು ದತ್ತಾತ್ರೇಯ ಅವರೂ ಉಪಸ್ಥಿತರಿದ್ದರು. ಕೇಂದ್ರ ಸರ್ಕಾರಿ ಮಟ್ಟದಲ್ಲಿ ಕನಿಷ್ಟ ವೇತನ ಪರಿಷ್ಕರಿಸುವ ಕುರಿತಂತೆ ಕಾರ್ಮಿಕ ಸಚಿವರ ಅಧ್ಯಕ್ಷತೆಯ ಕನಿಷ್ಟ ವೇತನ ಸಲಹಾ ಮಂಡಳಿ ಸಭೆಯಲ್ಲಿ ಸಮಾಲೋಚನೆ ನಡೆದ ನಂತರ ಪರಿಷ್ಕøತ ವೇತನ ಘೋಷಣೆ ಮಾಡಲಾಗಿದೆ. ಆದರೆ, ಗುತ್ತಿಗೆ ಕಾರ್ಮಿಕರು ಮತ್ತವರ ಸಿಬ್ಬಂದಿ ಸಂಸ್ಥೆಯ ನೋಂದಣಿ ಕಡ್ಡಾಯವಾಗಿದೆ. ರಾಜ್ಯಗಳೂ ಈ ರೀತಿಯ ನಿಯಮಾವಳಿಗಳನ್ನು ಪಾಲಿಸಬೇಕಾಗಿದೆ ಎಂದು ಜೇಟ್ಲಿ ತಿಳಿಸಿದರು. ಈ ನಿಯಮಾವಳಿಗಳನ್ನು ಉಲ್ಲಂಘಿಸಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದವರು ಎಚ್ಚರಿಕೆ ನೀಡಿದರು. ಅಂಗನವಾಡಿ, ಮಧ್ಯಾಹ್ನದೂಟ, ಆಶಾ ಕಾರ್ಯಕರ್ತೆಯರಂತಹ ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತಾ ಪ್ರಯೋಜನ ಒದಗಿಸುವ ವಿಚಾರವನ್ನೂ ಸದ್ಯದಲ್ಲೇ ಸಮಿತಿ ಪರಿಶೀಲಿಸಿ ವರದಿ ಒಪ್ಪಿಸಲಿದೆ ಎಂದವರು ತಿಳಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಅಂಗ ಬ್ಯಾಂಕುಗಳ ವಿಲಯನಗೊಳಿಸುವ ಸರ್ಕಾರದ ಯೋಜನೆಗೆ ಕಾರ್ಮಿಕ ಸಂಘಗಳ ವಿರೋಧ ಕುರಿತಾಗಿ ಕೇಳಿದಾಗ, ಬ್ಯಾಂಕುಗಳ ವಿಲಯನ ಕಾರ್ಮಿಕ ಸಂಘಗಳಿಗೆ ಸಂಬಂಧಿಸಿದ ವಿಷಯವಲ್ಲ. ಇದರಿಂದ ಯಾರೇ ಸಿಬ್ಬಂದಿಯ ಸೇವಾ ಪರಿಸ್ಥಿತಿ ಮೇಲೆ ಇಂಥ ವಿಲಯನದಿಂದ ಬಾಧಕವಾಗುವುದಿಲ್ಲ. ಬ್ಯಾಂಕುಗಳು ಬಲಗೊಳ್ಳಬೇಕೆಂದು ಸರ್ಕಾರ ಅಪೇಕ್ಷಿಸಿರುವುದರಿಂದ ಈ ಸಮಗ್ರ ವಿಚಾರದಲ್ಲಿ ಕಾರ್ಮಿಕ ಸಂಘಗಳು ತಮ್ಮ ಧೋರಣೆ ಬದಲಾಯಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.