ಕಾವೇರಿ ವಿಚಾರಕ್ಕೆ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ

0
1056

ಚೆನ್ನೈ: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಿಂದ ತಿದ್ದುಪಡಿ ಆಜ್ಞೆ ಹೊರಬೀಳುತ್ತಿದ್ದಂತೆ ಪ್ರತಿಭಟನೆ ತೀವ್ರಗೊಳ್ಳುತ್ತಿದೆ.  ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಕನ್ನಡಿಗರಿಗೆ ಸೇರಿದ ಹೋಟೆಲ್, ವಾಹನಗಳ ಮೇಲೆ ದಾಳಿ ಮಾಡಲಾಗಿದೆ.

ರಾಮೇಶ್ವರಂನಲ್ಲಿ ಕಾವೇರಿ ವಿಚಾರಕ್ಕೆ ಬಂದ್ರೆ ಎಚ್ಚರಿಕೆ, ಕಾವೇರಿ ತಮಿಳುನಾಡಿಗೆ ಸೇರಿದ್ದು ಎಂದು 4-5 ಮಂದಿ ಕಿಡಿಗೇಡಿಗಳು ಹೇಳುತ್ತಾ, ಕನ್ನಡಿಗ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೈ ಮುಗಿದು ಬೇಡಿಕೊಂಡರೂ, ಕರುಣೆ ತೋರದೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ನೋಂದಣಿ ಸಂಖ್ಯೆಯ ವಾಹನಗಳ ಮೇಲೆ, ದುಷ್ಕರ್ಮಿಗಳು ಕಲ್ಲು ತೂರಿ ಗಾಜುಗಳನ್ನು ಹಾಳುಗೆಡವಿದ್ದಾರೆ. ಅಲ್ಲದೇ, ರಾಮೇಶ್ವರಂನಲ್ಲಿ ಕನ್ನಡಿಗರ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದ್ದು, ಕರ್ನಾಟಕದ ಪ್ರವಾಸಿ ವಾಹನಗಳನ್ನು ಅಡ್ಡಗಟ್ಟಿ ದಾಳಿ ನಡೆಸಲಾಗಿದೆ. ತಮಿಳು ನಾಡಿನ ಹಲವು ಕಡೆಗಳಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡಿರುವುದಾಗಿ ವರದಿಯಾಗಿದೆ. ಕಾವೇರಿ ತಮಿಳುನಾಡಿಗೆ ಸೇರಿದ್ದು ಎಂದು ಹೇಳುವಂತೆ ಕನ್ನಡಿಗರೊಬ್ಬರಿಗೆ ದೊಣ್ಣೆಯಿಂದ ಹೊಡೆಯಲಾಗಿದೆ.

ಸುಪ್ರೀಂಕೋರ್ಟ್ ವಿರೋಧಿಸಿ ಕರ್ನಾಟಕ ಬಂದ್ ಕರೆ ಕೊಟ್ಟಾಗಲು ಕೂಡ ಒಬ್ಬನೇ ಒಬ್ಬನ ತಮಿಳರ ವಿರುದ್ಧ ಯಾವುದೇ ರೀತಿಯ ಎಲ್ಲಿಯೇ ಆಗಲಿ ಒಂದು ಸಣ್ಣ ಹಲ್ಲೆಯೂ ನಡೆದಿರಲಿಲ್ಲ. ಆದರೆ ತಮಿಳುನಾಡಿನಲ್ಲಿ ಇಂತಹ ಪೈಶಾಚಿಕ ಕೃತ್ಯ ನಡೆದಿದೆ ಎಂದು ಕನ್ನಡಪರ ಸಂಘಟನೆಗಳು ವ್ಯಾಪಕವಾಗಿ ಖಂಡಿಸಿದ್ದಾರೆ. ಅಲ್ಲಿ ಇಂತಹ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಇದೇ ಸೆ.5 ರಂದು ನೀಡಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ಇಂದು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬರುವ ಬೆನ್ನಲ್ಲೆ ತಮಿಳುನಾಡಿನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕೆಲ ತಮಿಳು ಸಂಘಟನೆಗಳು ಕನ್ನಡಿಗರ ಹೊಟೇಲ್‍ವೊಂದರ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿ ರಿಸೆಪ್ಷನ್ ಕೌಂಟರ್ ಧ್ವಂಸಗೊಳಿಸಿರುವುದಲ್ಲದೆ, ಬಸ್, ಕಾರುಗಳ ಮೇಲೂ ಕಲ್ಲು ತೂರಾಟ ನಡೆಸಿ ಉದ್ಧಟತನ ಮೆರೆದಿದ್ದಾರೆ.

ಸೆ.5ರಂದು ಸುಪ್ರೀಂಕೋರ್ಟ್ ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದ್ದು, ಸಂಕಷ್ಟ ಪರಿಸ್ಥಿತಿಯಲ್ಲೂ ಕರ್ನಾಟಕ ಸರ್ಕಾರ ನೀರು ಬಿಟ್ಟಿದ್ದು, ಇದನ್ನು ವಿರೋಧಿಸಿ ಇಡೀ ರಾಜ್ಯವೇ ಬಂದ್ ಆಚರಿಸಿ ಸ್ತಬ್ಧಗೊಂಡಿತ್ತು.

ಸುಪ್ರೀಂಕೋರ್ಟ್‍ನಲ್ಲಿ ಇಂದು ಆದೇಶ ಮಾರ್ಪಾಡು ಮಾಡುವಂತೆ ಕರ್ನಾಟಕ ಸರ್ಕಾರ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ತಮಿಳು ಸಂಘಟನೆಗಳು ದುರುದ್ದೇಶ ಪೂರ್ವಕವಾಗಿ ತಮಿಳುನಾಡಿನ ಚೆನ್ನೈ, ತಂಜಾವೂರ್, ನಾಗಪಟ್ಟಣ, ತಿರುಚ್ಚಿ ಮುಂತಾದೆಡೆ ಕನ್ನಡಿಗರು ನಡೆಸುತ್ತಿರುವ ಉದ್ಯಮದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಚೆನ್ನೈನಲ್ಲಿರುವ ಕನ್ನಡಿಗರ ಒಡೆತನದ ವುಡ್‍ಲ್ಯಾಂಡ್ ಹೊಟೇಲ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದು, ರಾಮನಾಥಪುರ, ನಾಗಪಟ್ಟಣ, ತಿರುಚ್ಚಿ, ತಂಜಾವೂರಿನಲ್ಲಿ ಎರಡು ಬಸ್‍ಗಳು, ಐದು ಕಾರುಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ತಮಿಳುನಾಡು ಸಾರಿಗೆ ಇಲಾಖೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಈ ಸಂಬಂಧ 50 ಜನರನ್ನು ಬಂಧಿಸಲಾಗಿದ್ದು, ಕನ್ನಡಿಗರು ನಡೆಸುತ್ತಿರುವ ಉದ್ದಿಮೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನಿಂದ ರಾಜ್ಯಕ್ಕೆ ಬರುವ ಬಸ್‍ಗಳನ್ನು ರಾಜ್ಯದಿಂದ ತಮಿಳುನಾಡಿಗೆ ಹೋಗುವ ಬಸ್‍ಗಳನ್ನು ನಿಲ್ಲಿಸಲಾಗಿದೆ. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕರ್ನಾಟಕದ ನೋಂದಣಿಯ ಹತ್ತಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.

ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ : ತಮಿಳಿಗರನ್ನು ಇಲ್ಲಿಂದ ಓಡಿಸಬೇಕಾಗುತ್ತದೆ ಎಚ್ಚರಿಕೆ ಎಂದು ವಾಟಾಳ್ ನಾಗರಜ್ ಎಚ್ಚರಿಸಿದ್ದಾರೆ.