ಮನೆಗಳಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ (P.N.G) ಪೂರೈಕೆ

0
2067

ಬೆಂಗಳೂರು: ಭಾರತೀಯ ಅನಿಲ ಪ್ರಾಧಿಕಾರವು (ಗೇಲ್) ನಗರದ ಬಿಇಎಲ್ ಕಾಲೊನಿಯ 1,200 ಹಾಗೂ ಎಚ್‌ಎಸ್ ಆರ್ ಬಡಾವಣೆಯ 100 ಮನೆಗಳಿಗೆ ಪ್ರಾಯೋಗಿಕವಾಗಿ ಕೊಳವೆ ಮೂಲಕ ನೈಸರ್ಗಿಕ ಅನಿಲವನ್ನು (ಪಿಎನ್ಜಿ) ಪೂರೈಕೆ ಮಾಡುತ್ತಿದ್ದು, ಮತ್ತಷ್ಟು ಬಡಾವಣೆಗಳಿಗೆ ಪೂರೈಕೆ ಮಾಡಲು ಸಿದ್ಧತೆ ನಡೆಸಿದೆ.

pvec19july16nPNG

‘ನಗರದಲ್ಲಿ ಈಗಾಗಲೇ 320 ಕಿ.ಮೀ. ಪೈಪ್ಲೈನ್ ಅಳವಡಿಸಲಾಗಿದೆ. 2017ರ ಮಾರ್ಚ್ ವೇಳೆಗೆ 25 ಸಾವಿರ ಮನೆಗಳಿಗೆ ಪೈಪ್ಲೈನ್ ಅಳವಡಿಸುವ ಗುರಿ ಇದೆ’ ಎಂದು ಬೆಂಗಳೂರು ಗೇಲ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಜಾನಾ ಹೇಳಿದರು.

‘ಕೊಳವೆ ಮೂಲಕ ಸರಬರಾಜು ಮಾಡುವ ಅನಿಲ ಸುರಕ್ಷಿತವೇ ಎನ್ನುವ ಆತಂಕ ಬಡಾವಣೆಯ ನಿವಾಸಿಗಳದ್ದು. ಬೇರೆ ನಗರಗಳಲ್ಲಿ ಕೊಳವೆ ಮೂಲಕ ಅನಿಲ ಪೂರೈಕೆ ಮಾಡಿ ಯಶಸ್ವಿಯಾಗಿದ್ದೇವೆ. ಕೊಳವೆ ಮೂಲಕ ನಿರಂತರವಾಗಿ ಅನಿಲ ಪೂರೈಕೆ ಮಾಡುತ್ತೇವೆ ಎಂದು ಗೇಲ್ ಕಂಪೆನಿಯ ಅಧಿಕಾರಿಗಳು ಬಡಾವಣೆಯ ನಿವಾಸಿಗಳ ಮನವೊಲಿಸಿದ್ದಾರೆ’ ಎಂದು ಹೇಳಿದರು.

ಬಿಇಎಲ್ ಕಾಲೊನಿಯ ನಿವಾಸಿ ಮಂಜುನಾಥ ಕುಂದಗೋಳ್ ಅವರ ಮನೆಗೆ ಒಂದು ತಿಂಗಳಿಂದ ಕೊಳವೆ ಮೂಲಕ ನೈಸರ್ಗಿಕ ಅನಿಲವನ್ನು ಪೂರೈ ಸಲಾಗುತ್ತಿದೆ. ಅನಿಲ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಅವರು ಹೇಳುತ್ತಾರೆ.

‘ಗ್ಯಾಸ್ ಮುಗಿದು ಹೋಗಿದೆ, ಗ್ಯಾಸ್ ಬರುವವರೆಗೆ ಕಾಯಬೇಕು ಎನ್ನುವ ಉಸಾಬರಿ ಇಲ್ಲ. ಸಬ್ಸಿಡಿ ದರದಲ್ಲಿ ಸಿಗುವ ಎಲ್ಪಿಜಿಗೆ ಹೋಲಿಸಿದರೆ ಪಿಎನ್ಜಿ ಬೆಲೆ ಕಡಿಮೆ ಎಂದು ಗೇಲ್ ಕಂಪೆನಿ ಹೇಳಿದೆ. ದರ ವ್ಯತ್ಯಾಸವನ್ನು ತಿಳಿಯಲು ಬಿಲ್ಗಾಗಿ ಕಾಯುತ್ತಿದ್ದೇವೆ’ ಎಂದು ಹೇಳಿದರು.

ಕೈಗಾರಿಕೆಗಳಿಗೆ ಅನಿಲ ಪೂರೈಕೆ: ಗೇಲ್ ಕಂಪೆನಿಯು ಈಗಾಗಲೇ ಬಿಇಎಲ್, ಬಾಷ್, ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪೆನಿಗಳ ಕ್ಯಾಂಟೀನ್ ಗಳಿಗೆ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡುತ್ತಿದೆ. ಮತ್ತಷ್ಟು ಕಂಪೆನಿಗಳಿಗೆ ಪೂರೈಕೆ ಮಾಡಲು ಸಿದ್ಧತೆ ನಡೆಸಿದೆ.

ಹೆಚ್ಚು ಸುರಕ್ಷಿತ: ಎಲ್ಪಿಜಿಗೆ (ದ್ರವೀಕೃತ ಪೆಟ್ರೋಲಿಯಂ ಅನಿಲ) ಹೋಲಿಸಿದರೆ ಪಿಎನ್ಜಿ ಹೆಚ್ಚು ಸುರಕ್ಷಿತ. ಇದು ಗಾಳಿಗಿಂತ ಹಗುರ. ಪಿಎನ್ಜಿ ಸೋರಿಕೆ ಆದರೂ ಎಲ್ಪಿಜಿಯಂತೆ ತಳದಲ್ಲಿ ಸಂಗ್ರಹವಾಗುವುದಿಲ್ಲ. ಜನರು ಸುರಕ್ಷತೆ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ ಎಂದು ಗೇಲ್ ಕಂಪೆನಿ ಹೇಳಿದೆ. ಶೇ 15ರಷ್ಟು ಹಣ ಉಳಿತಾಯ:ಮನೆಗೆ ನೀರು ಪೂರೈಕೆ ಆಗುವ ರೀತಿಯಲ್ಲಿಯೇ ಪಿಎನ್ಜಿಯೂ ಪೂರೈಕೆ ಆಗಲಿದೆ. ಇದರಿಂದ ಸಿಲಿಂಡರ್ ಬದಲಾಯಿಸುವ ಕಿರಿಕಿರಿಯಿಂದ ಗ್ರಾಹಕರಿಗೆ ಮುಕ್ತಿ ಸಿಗಲಿದೆ.

ಸಬ್ಸಿಡಿ ದರದಲ್ಲಿ ಸಿಗುವ ಎಲ್ಪಿಜಿಗೆ ಹೋಲಿಸಿದರೆ ಪಿಎನ್ಜಿ ಬಳಕೆಯಿಂದ ಶೇ 15ರಷ್ಟು ಹಣ ಉಳಿತಾಯ ಆಗಲಿದೆ. ಸಬ್ಸಿಡಿರಹಿತ ಎಲ್ಪಿಜಿಗೆ ಹೋಲಿಸಿದರೆ ಪಿಎನ್ಜಿ ಬಳಕೆಯಿಂದ ಶೇ 42ರಷ್ಟು ಹಣ ಉಳಿತಾಯ ಆಗಲಿದೆ.

ಉತ್ತರ ಭಾರತದಲ್ಲಿ 30 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ದೆಹಲಿಯಲ್ಲಿ ಶೇ 60ರಷ್ಟು ಮನೆಗಳಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ.

ಆನ್ಲೈನ್ ಮೂಲಕ ನೋಂದಣಿ ಅನಿಲ ಸಂಪರ್ಕ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಗುರುತಿನ ಚೀಟಿ, ವಿಳಾಸದ ದಾಖಲೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಗೇಲ್ ಸಂಸ್ಥೆಯ ತಾಂತ್ರಿಕ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಧಕ-ಬಾಧಕಗಳನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತಾರೆ. ಸಂಪರ್ಕ ಕಲ್ಪಿಸಲು ಯೋಗ್ಯವಾಗಿದ್ದರೆ ಮಾತ್ರ ಅನುಮತಿ ದೊರೆ ಯುತ್ತದೆ.

ಬಳಿಕ ಕಂಪೆನಿಯಿಂದ ಗ್ರಾಹಕರಿಗೆ ಸಂದೇಶ ರವಾನಿಸಿ, ನಿರ್ದಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಗ್ರಾಹಕರು ಶುಲ್ಕ ಪಾವತಿಸಿ ಸಂಪರ್ಕ ಪಡೆಯಬಹುದು. ಈಗಾಗಲೇ 250ಕ್ಕಿಂತ ಹೆಚ್ಚು ಗ್ರಾಹಕರು ಆನ್ಲೈನ್ ಮೂಲಕ ಮನವಿ ಸಲ್ಲಿಸಿದ್ದಾರೆ. ಮಾಹಿತಿಗೆ www.gailgas.com ಸಂಪರ್ಕಿಸಬಹುದು.

ಪಿಎನ್ಜಿ ಸಂಪರ್ಕಕ್ಕೆ ಆರಂಭದಲ್ಲಿ Rs 5,800 ಪಾವತಿಸಬೇಕು. ಇದರಲ್ಲಿ Rs 5 ಸಾವಿರ ಮರುಪಾವತಿ ಮಾಡಲಾಗುತ್ತದೆ.