ಕೊನೆಗೊಳ್ಳಲಿ ಕಾವೇರಿ ಕರಾಳತೆ

0
1287

ಕಾವೇರಿ ವಿಚಾರದಲ್ಲಿ ಕರ್ನಾಟಕವು ಕೋರ್ಟ್ ಮೆಟ್ಟಿಲೇರಿ ದೊಣ್ಣೆ ಕೊಟ್ಟು ಬಡಿಸಿಕೊಂಡಂತಾಯಿತು! ರಾಜ್ಯದ ಜನತೆಯಲ್ಲಿ ಭಾವನೆಗಳ ಕಟ್ಟೆಯೊಡೆದಿದೆ. ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಯಾಗಿದೆ. ಮಿಗಿಲಾಗಿ ಇಬ್ಬರು ಅಮಾಯಕರು ಪೊಲೀಸ್ ಗುಂಡೇಟಿಗೆ ಬಲಿಯಾಗುವಂತಾಗಿದ್ದು ದುರದೃಷ್ಡಕರ.

ಸುಪ್ರೀಂಕೋರ್ಟ್‍ನಿಂದ ರಾಜ್ಯಕ್ಕೆ ಪರಿಹಾರ ದೊರಕುವುದು ಅಷ್ಟು ಸುಲಭವಲ್ಲ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲದೆ ಏನಿಲ್ಲ. ಸೆ. 5 ರಂದು ನೀಡಲಾದ ಮಧ್ಯಂತರ ಆದೇಶ ಬದಲಾಗುವುದೆಂದು ಸರ್ಕಾರಕ್ಕೂ ನಂಬಿಕೆ ಇರಲಿಲ್ಲ. ಕೋರ್ಟ್ ಆದೇಶದ ಪ್ರಕಾರ ನೀರು ಬಿಡಲೇಬೇಕೆಂದು ಖುದ್ದು ಮುಖ್ಯಮಂತ್ರಿ ಅವರೇ ಮಾಧ್ಯಮಗಳಿಗೆ ಹೇಳಿದ್ದು ಗಮನಾರ್ಹ. ಅನಿವಾರ್ಯವೋ, ಕೋರ್ಟ್ ವಿಧಿಸಿದ ಕಟ್ಟುಪಾಡೋ. ಅದೇನೆ ಇರಲಿ. ಹತ್ತು ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಯುವುದರಿಂದ ಕನ್ನಡಿಗರ ಭಾವನೆಗಳು ಉಗ್ರ ಸ್ವರೂಪ ಪಡೆಯವುದೆಂಬುದನ್ನು ಸರ್ಕಾರ ಮೊದಲೇ ಊಹಿಸಬೇಕಿತ್ತು. ಮುಖ್ಯಮಂತ್ರಿಗಳ ಸುಪರ್ದಿನಲ್ಲಿರುವ ಬೇಹುಗಾರಿಕೆ ಇಲಾಖೆ ಈ ದಿಸೆಯಲ್ಲಿ ಸರ್ಕಾರದ ಗಮನಸೆಳೆಯಲು ವಿಫಲವಾಯಿತು. ಅಲ್ಲದೆ ಸೆ. 5ರ ನಂತರ ತಲೆದೋರಿದ ಕಾವೇರಿ ಸಂಬಂಧಿತ ಪ್ರತಿಯೊಂದು ಸಂಗತಿಯನ್ನು ಇಂಟೆಲಿಜನ್ಸ್ ಸೂಕ್ಷ್ಮವಾಗಿ ಪರಾಮರ್ಶಿಸಿಲ್ಲ. ಇದೊಂದು ಗಂಭೀರ ಲೋಪ. ಅಲ್ಲದೆ ಸೆ.12 ರಂದು ಸು. ಕೋರ್ಟ್ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಮುಖ್ಯಮಂತ್ರಿಗಳೇ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಆಯಕಟ್ಟಿನ ಪ್ರದೇಶಗಳಿಗೆ ಹೆಚ್ಚುವರಿ ಭದ್ರತೆ ಕಲ್ಪಿಸಬೇಕಿತ್ತು.

ಕಿಡಿಗೇಡಿಗಳು 35 ಬಸ್‍ಗಳಿಗೆ ಬೆಂಕಿ ಹಚ್ಚಿ ಅವುಗಳನ್ನು ಭಸ್ಮ ಮಾಡಿದ್ದು ಅಕ್ಷಮ್ಯ. ಇಂತಹ ಘಟನೆಗಳಿಂದ ರಾಜ್ಯಕ್ಕೆ ಕಳಂಕ ಹಚ್ಚಿದಂತಾಗುತ್ತೆ. ಆವೇಶದಿಂದ ಜನತೆ ಕಾನೂನು ಕೈಗೆ ತೆಗೆದುಕೊಂಡರೆ ಅದರಿಂದಾಗುವ ನಷ್ಟ ಅಪಾರ. ಸಣ್ಣ ಪುಟ್ಟ ಘಟನೆಯನ್ನೂ ವೈಭವೀಕರಿಸಿ ವರದಿ ಮಾಡುವ ಟಿವಿ ಮಾಧ್ಯಮಗಳ ಧೋರಣೆ ಸಮಾಜಪೂರಕವಂತೂ ಅಲ್ಲ. ಸಾಮಾಜಿಕ ತಾಣಗಳ ಬೇಕಾಬಿಟ್ಟಿ ವರ್ತನೆಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು ಸತ್ಯಕ್ಕೆ ದೂರವಾದ ಸಂಗತಿಯೇನಲ್ಲ. ತಮಿಳರ ಮೇಲೆ ಕನ್ನಡಿಗರು ಮತ್ತು ಕನ್ನಡಿಗರ ಮೇಲೆ ತಮಿಳರು ಪರಸ್ಪರ ಕಚ್ಚಾಡಿ ಬಡಿದಾಡಿದರೆ ಅದರಿಂದ ವೈರತ್ವ ಮತ್ತಷ್ಟು ವಿಷಕಾರಿಯಾಗುತ್ತೆ. ಈ ಹಗೆತನ ಆಜನ್ಮವಾಗಬಾರದು. ನಾವಿರುವುದು ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ. ತಮಿಳುನಾಡು ಎಂದೂ ಕರ್ನಾಟಕಕ್ಕೆ ಹಗೆ ಸಾಧಿಸುವ ರಾಜ್ಯ ಆಗಬಾರದು. ಕಾವೇರಿ ಎರಡೂ ರಾಜ್ಯಗಳ ಜೀವ. ಇದುವರೆಗೆ ನಾವು ಬಡಿದಾಡಿ ನಷ್ಟ ಅನುಭವಿಸಿದ್ದು ಸಾಕು. ಮನಸ್ಸಿದ್ದರೆ ಮಾರ್ಗ ಉಂಟು. ಜಯಲಲಿತ ಬೆಂಗಳೂರಿಗೆ ಬಂದು ಮಾತುಕತೆ ಮಾಡಲು ಅಡ್ಡಿಯೇನಿಲ್ಲ. ಕರಾಳ ಇತಿಹಾಸದ ಪುಟಗಳನ್ನು ಅಳಿಸಲು ತಮಿಳುನಾಡಿಗೆ ವಿಶಾಲ ಹೃದಯವೂ ಬೇಕು.