ಕೋಲ್ಕತ್ತಾದವನು ಆದ್ರೇನು ಕನ್ನಡ ಕಲಿ…

0
1948

ಕೆಲಸ ಜಾಸ್ತಿ ಇದ್ದ ಕಾರಣ ಆಫೀಸ್ ಬಿಡೋವಾಗ ತಡರಾತ್ರಿಯಾಗಿತ್ತು.ಹೀಗಾದಾಗೆಲ್ಲಾ ಮನೆತನಕ ಡ್ರಾಪ್ ಇರುತ್ತೆ. ಕಾರಲ್ಲಿ ನಾನು ಮತ್ತಿನ್ನಿಬ್ಬರಿದ್ದರು.ಪರಸ್ಪರ ಮಾತಾಡುತ್ತಾ ಯಾವ ಪ್ರೊಸೆಸ್, ಯಾರು ಕ್ಲೈಂಟ್, ಯಾವ ಅಪ್ಲಿಕೇಷನ್ನಿಂದ ಮಾತು ಹಾಗೇ ಭಾಷೆಯ ಕಡೆ ತಿರುಗಿತು.

ಒಬ್ಬ ಮೂಲತಃ ಕೋಲ್ಕತ್ತಾದವನು. ಬೆಂಗಳೂರಿಗೆ ಬಂದು ಆರು ವರ್ಷ ಆಯ್ತು ಅಂದ. ಹೀಗೇ ಮಾತಿಗೆ ಕನ್ನಡ ಬರುತ್ತಾ ಅಂತ ಕೇಳ್ದೆ. ನೋ..ನೋ ಅಂದ. ಸರಿ ಅರ್ಥ ಆದ್ರು ಆಗತ್ತಲ್ವಾ..ಇಷ್ಟು ವರ್ಷದಲ್ಲಿ ಅಂದೆ..”ನೋ..Kannada is not an international language..ವೈ ಶುಡ್ ಐ ಲರ್ನ್ ” ಅಂದ..ಉರೀತು..ನಾನಂದೆ, ಜಯನಗರಾನೂ ಇಂಟರ್ನ್ಯಾಶನಲ್ ಸ್ಥಳ ಅಲ್ಲ ಇಲ್ಯಾಕಿದೀರಿ??
‘ Its none of your business’ ಅಂದ.
ಮಾತಿಗೆ ಮಾತು ಬೆಳೀತು. ಅವ ಇಳಿಯೋ ಜಾಗಾನೂ ಬಂತು.

ಆಗ ನಮ್ಮ ಡ್ರೈವರ್ ನಿಲ್ಲಿಸಲೇ ಇಲ್ಲ..ಈ ಆಸಾಮಿ ಓಯ್ ಸ್ಟಾಪ್ ಸ್ಟಾಪ್ ಅಂದ. ರೋಖೋ ಯಾರ್ ಅಂದ..ಡ್ರೈವರ್ ಕೈಸನ್ನೆಯಲ್ಲೇ ತಡಿ ಅಂತ ಅಂದು ಒಂದು ಕಿಲೋಮೀಟರ್ ಮುಂದೆ ನಿಲ್ಲಿಸಿ ಸ್ಪಷ್ಟ ಇಂಗ್ಲೀಷಲ್ಲಿ ” mine is local vehicle sir.. Please take any internation vehicle and reach your place ಅಂದ್ಬಿಟ್ರು. ನಂಗೆ ಒಂಥರಾ ವಿಕೃತ ಖುಷಿಯಾದರೂ ಮೆಲ್ಲಗೆ ಹೇಳಿದೆ ಸಾರ್ ನಿಮ್ ಕೆಲಸ ಹೋಗ್ಬಹುದು..ಬಿಟ್ಬಿಡಿ!

ಅವರಂದದ್ದು ಒಂದೇ ಮಾತು..”ನಮ್ಮತನಕ್ಕಿಂತ ನಾವು ಹೊಟ್ಟೆಪಾಡಿಗೆ ಮಾಡೋ ಕೆಲಸ ದೊಡ್ಡದಲ್ಲ ಮ್ಯಾಡಮ್. ಇದ್ ಹೋದ್ರೆ ಇನ್ನೊಂದು..ಎಲ್ಲೋ ಯಾರೋ ಏನೋ ಅಂದ್ರೇನೇ ಮೈ ಉರಿಯುತ್ತೆ. ಅಂಥಾದ್ರಲ್ಲಿ ಕಣ್ಮುಂದೆ ಹೀಗಾದ್ರೆ ತಡೆಯುತ್ತಾ ಜೀವ?”

ನಾ ಮಾತಿಲ್ಲದೇ ನಿಂತೆ.. ಗಾಡಿ ಹಿಂದಿನ ಗ್ಲಾಸಲ್ಲಿದ್ದ ಶಂಕರ್ ನಾಗ್ ಖುಷಿಯಲ್ಲಿ ನಕ್ಕಂಗಾಯ್ತು !

‪#‎ಬದುಕು‬ ಬರಹ ಬ್ಲಾಗ್ ಕಥನ!