ಗಣೇಶನ ಬೆಂಗ್ಳೂರ್ ಯಾತ್ರೆ

0
944

“ಅಮ್ಮ ಭೂಲೋಕಕ್ಕೆ ಹೋಗಿ ಬರ್ತೀನಮ್ಮ ನಾಳೆ ಚೌತಿ, ಭೂಲೋಕದಲ್ಲಿ ಎಲ್ಲರೂ ನನ್ನನ್ನು ಕಾಯುತ್ತಿರುತ್ತಾರೆ!” ಲೋ ಮಗು ಗಣೇಶ, ಹುಷಾರಾಗಿ ಹೋಗಿ ಬಾರಪ್ಪ ಜನ ಅದು ಇದು ನೈವೇದ್ಯಕ್ಕೆ ಇಡ್ತಾರೆ ಅಂತಾ ತಿನ್ನಕ್ಕೆ ಹೋಗಬೇಡ ಭೂಲೋಕದಲ್ಲಿ ಈಗ ಕಲಬೆರಕೆ ಆಹಾರನೇ ಜಾಸ್ತಿಯಂತೆ! ಹೊಟ್ಟೆ ಕೆಟ್ಟು ಹೋಗುತ್ತಪ್ಪ ಅದೂ ಅಲ್ಲದೇ ಈ ಬಾರಿ ಬೆಂಗ್ಳೂರ್‍ಗೆ ಬೇರೆ ಹೋಗುತ್ತೇನೆಂದು ಹೇಳುತ್ತಿದ್ದೆ. ಅಲ್ಲೇನೋ ಊ1ಓ1 ಹಾಗೂ ಚಿಕುನ್ ಗುನ್ಯಾ ಎಂಬ ಖಾಯಿಲೆ ಬೇರೆ ಬಂದಿದೆಯಂತೆ ಹುಷಾರಾಗಿರು.ಅಲ್ಲದೇ ಈಗೀಗ ಬೆಂಗ್ಳೂರ್ ನಲ್ಲೂ ಬಾಂಬ್ ದಾಳಿ ಮಾಡಿದ್ದಾರಂತೆ ! ಅದಕ್ಕೆ ನಾನು ಬೇಗ ಇವತ್ಥೆ ಬಂದುಬಿಟ್ಟೆ! ನೀನೂ ಜಾಸ್ತಿ ದಿನ ಇರಬೇಡ. ಆಗಾಗ ಫೋನ್ ಮಾಡುತ್ತಿರು ಮೊಬೈಲ್ ತೊಗೊಂಡಿದ್ದೀಯ ತಾನೆ?!ಜಾಸ್ತಿ ದಿನ ಇರಬೇಡಪ್ಪ ಬೇಗ ಬಂದುಬಿಡು” ಎಂದಳು ಪಾರ್ವತಿ.

parvati & baby ganesha

“ಆಗಲಿ” ಎಂದು ಗಣೇಶ ಅಮ್ಮನಿಗೆ “ಟಾಟಾ” ಹೇಳಿ, ತನ್ನ ವಾಹನವನ್ನೇರಿ ಭೂಲೋಕದೆಡೆಗೆ ಪ್ರಯಾಣ ಬೆಳೆಸಿದ. ಮಾರ್ಗಮಧ್ಯೆ ಮೂಷಿಕ ಉವಾಚ-“ಗುರುಗಳೆ, ಈ ಬಾರಿ ಭೂಲೋಕದಲ್ಲಿ ಯಾವ ಊರಿಗೆ ಹೋಗೋಣ ಪ್ರತಿ ಬಾರಿ ಮುಂಬಯಿಗೆ ಹೋಗಿ ಬೇಜಾರಾಗಿದೆ! ಈ ಬಾರಿ ಕರ್ನಾಟಕದ ಬೆಂಗಳೂರಿಗೆ ಹೋಗೋಣಾ. ಮೂಷಿಕ!ಬೆಂಗ್ಳೂರ್ ತುಂಬಾನೇ ಚೆನ್ನಾಗಿದೆಯಂತೆ ಕಣೋ! ಎಲ್ಲಿ ನೋಡಿದರೂ ಉದ್ಯಾನವನಗಳಂತೆ ಅದೇನೋ ಮಾಹಿತಿ ತಂತ್ರಜ್ಞಾನದಲ್ಲಿ ಬಾಳಾನೇ ಮುಂದುವರೆದಿದ್ದಾರಂತೆ ಕಣೋ ಚೌತಿಯಂದು ನನ್ನ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರಂತೆ ದಸರಾ ಹಬ್ಬದವರೆಗೂ ಆಚರಿಸುತ್ತಾನೆ ಇರುತ್ತಾರಂತೆ. ಅಲ್ಲದೇ ಕರ್ನಾಟಕದ ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ನನ್ನ ವಿಸರ್ಜನೆ ಸಮಯದಲ್ಲಿ ಗಲಾಟೇನೂ ಮಾಡ್ತಾರಂತೆ ನಡೀ ಕರ್ನಾಟಕದ ಕಡೆ ಪ್ರಯಾಣ ಬೆಳೆಸು ಒಮ್ಮೆ ನೋಡೇಬಿಡೋಣ ಬೆಂಗ್ಳೂರ್‍ನ ಎಂದ ಗಣೇಶ!

ಸರಿ, ಬೆಂಗ್ಳೂರ್‍ಗೆ ಬಂದ ಮೂಷಿಕ ಕೇಳಿದ-“ಎಲ್ಲಿ ಲ್ಯಾಂಡ್ ಮಾಡಲಿ ಗುರೂ….?” “ ಜನರಿಗೆ ಗೊತ್ತಾಗದ ಹಾಗೆ ಎಲ್ಲಾದರೂ ಎತ್ತರದಲ್ಲಿ ಇಳಿಸು ಎಂದ ಮೂಷಿಕ ಸೀದಾ ಯುನಿಟಿ ಕಟ್ಟಡದ ಮೇಲೆ ಲ್ಯಾಂಡ್ ಮಾಡೋದೆ? ಅಯ್ಯೋ ಇಲ್ಲಿ ಬೇಡ ಮೂಷಿಕ ಎಂದ ಯಾಕೆ ಗುರೂ ಎಂದ ಮೂಷಿಕ ಅದಕ್ಕೆ ಗಣೇಶ ಮೂಷಿಕ ನಿನಗೆ ಅಮೇರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದು ಮರೆತುಹೋಯ್ತಾ? ಅದಕ್ಕೆ ನನಗೆ ಎತ್ತರದ ಕಟ್ಟಡದ ಮೇಲೆ ಕೂರಲು ಭಯ ಎಲ್ಲಾದರೂ ವಿಮಾನ ಬಂದು ಡಿಕ್ಕಿ ಹೊಡೆದರೆ? ಅಯ್ಯಯ್ಯೋ..ನೋಡಲ್ಲಿ ಒಂದು ವಿಮಾನ ಬರುತ್ತಿದೆ ಬೇಗ ನಡಿ ಮೂಷಿಕ ಯಾರಿಗೂ ಕಾಣದ ಹಾಗೆ ಒಂದು ಮರದ ಮೇಲೆ ಕುಳಿತುಕೊಳ್ಳೋಣ ಎಂದ ಸರಿ ಹಾಗಾದರೆ ಎಂದು ಮೂಷಿಕ ಲಾಲ್ ಬಾಗ್ ಕಡೆ ಪ್ರಯಾಣ ಬೆಳೆಸಿದ ನೋಡು ಆ ಆಲದ ಮರ ವಿಶಾಲವಾಗಿ ಪ್ರಶಸ್ತವಾಗಿದೆ ರಾತ್ರಿ ಅಲ್ಲೇ ಕಳೆದು ಬೆಳಗ್ಗೆ ಎದ್ದು ಸಂಚಾರ ಹೊರಟರಾಯಿತು ಎಂದು ಮರದ ಕಡೆ ಪ್ರಯಾಣ ಬೆಳೆಸಲು ಹೇಳಿದ ಗಣಪ.

ಸರಿ ಬೆಳಗಾಯಿತು ಏನೋ ಸರಪರ ಸದ್ದು ಮೂಷಿಕ ಎದ್ದು ನೋಡುತ್ತಾನೆ!ಲಾಲ್‍ಬಾಗ್ ತುಂಬಾ ಜನರೇ ಜನ! ಇದೇನು ಜಾತ್ರೇನೇ ಎಂದ ಮೂಷಿಕ ಗಣೇಶನನ್ನು ಎಚ್ಚರಿಸಿ ಕೇಳಿದ “ಗುರು ಇದೇನಿದು ಬೆಳಗ್ಗೆನೇ ಇಷ್ಟೊಂದು ಜನಜಾತ್ರೆ ಎಂದ ಓ ಅದಾ ಮೂಷಿಕ ಈಗೀಗ ಭೂಲೋಕದ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ ಸಣ್ಣ ವಯಸ್ಸಿನಲ್ಲೇ ಶುಗರ್ ಕಂಪ್ಲೆಂಟ್,ಬ್ಲೆಡ್‍ಪ್ರಶರ್ ಹೃದಯಸಂಬಂಧಿ ರೋಗವಂತೆ ಅದನ್ನೆಲ್ಲಾ ದೂರವಿಡಲು ಈ ಸರ್ಕಸ್ ದೇಹ ಚೆನ್ನಾಗಿರಲಿ ಎಂದು ಬೆಳಗ್ಗೆನೇ ಎದ್ದು ವ್ಯಾಯಾಮ ಮಾಡಲು ಇಲ್ಲಿಗೆ ಬರ್ತಾರಪ್ಪ ನೋಡಲ್ಲಿ ಹೇಗಿದ್ದಾನೆ ನನಗಿಂತ ದಪ್ಪ ಮೈ ಕರಗಿಸಲು ಹೇಗೆ ಓಡುತ್ತಿದ್ದಾನೆ ಎಂದು ದಢೂತಿ ಅಸಾಮಿಯನ್ನು ತೋರಿಸಿದ ಗಣಪ ನೋಡಲ್ಲಿ ಎಲ್ಲರೂ ಹೇಗೆ ನಗುತ್ತಿದ್ದಾರೆ ಅದು ಲಾಫಿಂಗ್ ಕ್ಲಬ್ ಕಣೋ,ನಡಿ ನಡಿ ಸಮಯವಾಗ್ತಾ ಇದೆ, ನಮ್ಮನ್ನು ಹೇಗೆ ಪೂಜೆ ಮಾಡ್ತಾರೋ ನೋಡೋಣಾ ಎಂದು ಮೂಷಿಕನನ್ನು ಹೊರಡಿಸಿದ ಗಣೇಶ.

5efa7037a9a216ada61f9ce1f8c9fefd

ಮೊದಲು ಗಣೇಶನ ಸವಾರಿ ಬಂದದ್ದು ಕತ್ತರಿಗುಪ್ಪೆ ಕೊಂಪೆಗೆ. ರಸ್ತೆಯ ಮಧ್ಯೆ ಒಂದು ದೊಡ್ಡ ಪೆಂಡಾಲು ಅದರೊಳಗೆ ವೇಷಧಾರಿ ಗಣಪ ಅದನ್ನು ನೋಡಿದ ಮೂಷಿಕ ಬಿದ್ದು ಬಿದ್ದು ನಗಲಾರಂಭಿಸಿದ ಗಣಪನಿಗೆ ಸಿಟ್ಟು ಬಂದಿತು ಅದ್ಯಾಕೆ ಹಾಗೆ ನಗ್ತೀಯ ಎಂದ ಗಣಪನಿಗೆ ಮತ್ತೇನು ಗುರು ನೋಡಲ್ಲಿ ನಿನಗೆ ಏನು ವೇಷ ಹಾಕಿದಾರೆ ಅಂತ.

ಅರೆರೇ..ವೀರಪ್ಪನ್ ಗಣಪ ಏನಪ್ಪಾ ಈ ಭೂಲೋಕದ ಜನ ನನಗೆ ವೀರಪ್ಪನ್ ವೇಷ ಹಾಕುವುದೇ? ಎಂದು ಗಣೇಶ ಬೇಸರ ಪಡುತ್ತಿದ್ದರೆ..”ನೋಡು ಗುರು ನಿನಗೆ ದಂತಾನೇ ಇಲ್ಲ ಎಂದು ಮೂಷಿಕ ನಗಲಾರಂಭಿಸಿದ ಗಣಪನಿಗೆ ಕೋಪ ಬಂದಿತು ಸರಿ ಸರಿ ನಡಿ ಮುಂದಿನ ರಸ್ತೆಗೆ ಹೋಗೋಣ ಎಂದ. ಮುಂದಿನ ರಸ್ತೆಗೆ ಬಂದರು ಅಲ್ಲಿ ರಾಜಕಾರಣಿ ವೇಷ ನೋಡು ಗುರು ಎಂದು ಮತ್ತೆ ಜೋರಾಗಿ ನಗಲಾರಂಭಿಸಿದ, ಮೂಷಿಕ ಹೀಗೆ ಸಾಗಿತು ಇವರ ಪ್ರಯಾಣ ಗಲ್ಲಿಗಲ್ಲಿಯಲ್ಲಿ ವಿಚಿತ್ರ ವಿಚಿತ್ರ ಗಣಪಾವತಾರ ದರ್ಶನ ,ಬಿನ್ ಲಾಡೆನ್ ಜೊತೆ ಮಾತನಾಡುತ್ತಿರುವ ಗಣಪ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿರುವ ಗಣಪ, ಲಾಯರ್ ಗಣಪ, ಜಡ್ಜ್ ಗಣಪ ಎದುರಿಗೆ ಕಟಕಟೆಯಲ್ಲಿ ನಿಂತ ರಾಜಕಾರಣಿ, ಪೋಲೀಸ್ ಗಣಪ ಒಂದು ಕಡೆಯಂತೂ ಲಲನೆಯರ ನಡುವೆ ಕುಳಿತ ಕಾಲೇಜ್ ಗಣಪ ಹೀಗೆ ಗಣಪನ ನಾನಾ ಅವತಾರಗಳನ್ನು ನೋಡಿದ ಮೂಷಿಕ. ನಕ್ಕಿದ್ದೇ ನಕ್ಕಿದ್ದು ಗಣಪನಿಗೋ.. ಕೋಪ ನೆತ್ತಿಗೇರಿತ್ತು ಭೂಲೋಕದ ಜನರ ಬಗ್ಗೆ ಬಹಳ ಬೇಸರವಾಗಿತ್ತು. ಏನಪ್ಪಾ, ದೇವರನ್ನೇ ಇವರು ಏನೇನೋ ಮಾಡುತ್ತಾರಲ್ಲಪ್ಪಾ ಎಂದುಕೊಂಡ ಗಣಪ ಮೂಷಿಕನ ಕಡೆಗೆ ತಿರುಗಿ ನಕ್ಕಿದ್ದು ಸಾಕು ತುಂಬಾ ಹಸಿವು ಆಗುತ್ತಿದೆ ನಡಿ ತಿಂಡಿ ತಿನ್ನುತ್ತಾ ಎಲ್ಲಾದರೂ ಕುಳಿತು ರೆಸ್ಟ್ ತೆಗೆದುಕೊಳ್ಳೋಣ ಎಂದ.

ಗುರು ಬಸವನಗುಡಿಯಲ್ಲಿರುವ ವಿದ್ಯಾರ್ಥಿ ಭವನಕ್ಕೆ ಹೋಗೋಣವೇ? ಅಲ್ಲಿ ದೋಸ ಬಹಳ ರುಚಿಯಾಗಿರುತ್ತದಂತೆ. ಎಂದ ಮೂಷಿಕ ಸರಿ ಮೂಷಿಕನಿಗೆ ಏಕೆ ಬೇಸರ ಮಾಡೋದು ಎಂದು ಸರಿ ಎಂದ ಗಣಪ ವೇಷ ಮರೆಸಿಕೊಂಡು ಹೋಗೋಣವೇ ಎಂದು ಮೂಷಿಕ ಕೇಳಿದ್ದಕ್ಕೆ ಬೇಡ ಹೀಗೆ0ಯೇ ಹೋಗೋಣ ನಮ್ಮನ್ನು ನೋಡಿ ಅವರ ಪ್ರತಿಕ್ರಿಯೇ ಹೇಗೆ ಇರುತ್ತದೊ ನೋಡೋಣ ಎಂದು ಹೊರಟರು ವಿದ್ಯಾರ್ಥಿ ಭವನದ ಮುಂದೆ ಜನರ ಜಾತ್ರೆ ಇವರನ್ನೆಲ್ಲಾ ನೋಡಿದ

ತಿಂಡಿಪೋತ ಗಣಪ ನಿಜವಾಗಲೂ ಇಲ್ಲಿ ದೋಸೆ ಬಹಳ ರುಚಿ ಇರಬೇಕು ಎಂದು ಮನಸ್ಸಿನೊಳಗೆ ಯೋಚಿಸುತ್ತಿರುವಾಗಲೇ ಅಲ್ಲಿ ಸೇರಿದ ಜನರಲ್ಲಿ ಕೆಲವರು ಓಹೊಹೋ.. ನೋಡ್ರಪ್ಪಾ ಯಾವುದೋ ನಾಟಕ ಮಂಡಳಿಯವರಿರಬೇಕು ಗಣೇಶ ಚತುರ್ಥಿ ಅಂತಾ ಗಣೇಶನ ಥರಾನೇ ವೇಷ ಹಾಕಿಕೊಂಡು ಬಂದಿದಾರೆ ಎಂದರೆ ಮತ್ತೆ ಕೆಲವರು ಇನ್ನೂ ಮುಂದೆ ಹೋಗಿ ಭಿಕ್ಷೇನೂ ಹಾಕೋದೇ ಶಿವ ಶಿವ ಮೂಷಿಕ ಈ ಭೂಲೋಕದ ಜನಕ್ಕೆ ಏನಾಗಿದೆ? ಮಣ್ಣಿನ ಮೂರ್ತಿ ಮಾಡಿ ಕೂರಿಸಿ ತಿಂಗಳುಗಟ್ಟಲೇ ಪೂಜೆ ಮಾಡ್ತಾರೆ ನಿಜರೂಪದಲ್ಲಿ ಬಂದರೆ ಗುರುತಿಸದೇ ಇರುವಷ್ಟು ಮೂಢರಾಗಿದ್ದಾರಲ್ಲಪ್ಪಾ ನಡಿ ನಡಿ ಹೋಗೋಣಾ ದೋಸೇನೂ ಬೇಡ ಗೀಸೇನೂ ಬೇಡ ಎಂದು ಮೂಷಿಕನನ್ನು ಹೊರಡಿಸಿಕೊಂಡು ವಿಶ್ರಾಂತಿ ಪಡೆಯಲು ಕಬ್ಬನ್ ಪಾರ್ಕಿಗೆ ಹೋದ ಗಣೇಶ.

ಪಾರ್ಕಿಗೆ ಬಂದ ಮೇಲೆ ನೆನಪಾಯಿತು ಅಮ್ಮನಿಗೆ ಫೋನ್ ಮಾಡಲೇ ಇಲ್ಲವಲ್ಲ ಅಂತಾ ಸರಿ ಮೂಷಿಕನನ್ನು ಕರೆದು ಅಮ್ಮನಿಗೆ ಫೋನ್ ಮಾಡು ಎಂದ ತುಂಬಾ ಸಲ ಫೋನ್ ಮಾಡಲು ಪ್ರಯತ್ನಿಸಿದ ಮೂಷಿಕ ನಾಟ್ ರೀಚಬಲ್ ಎಂದ, ಅದಕ್ಕೆ ಗಣೇಶ ಹಾಳಾದ್ದು ಈ ಬಿಎಸ್ಸೆನ್ನೆಲ್ ಯಾವಾಗಲೂ ನೆಟ್‍ವರ್ಕ್ ಪ್ರಾಬ್ಲಮ್ ಅಮ್ಮನಿಗೆ ಎಷ್ಟು ಹೇಳಿದ್ದೇನೆ ಬೇರೆ ಕನೆಕ್ಷನ್ ತಗೋ ಅಂತಾ ಕೇಳುವುದೇ ಇಲ್ಲ ಆಮೇಲೆ ಟ್ರೈ ಮಾಡೋಣ ಎಂದು ಕುಳಿತರು.

Ganesha-Coloring-Pictures-300x298

ಮೂಷಿಕ ಇವತ್ತು ಸಂಜೇನೇ ಕೈಲಾಸಕ್ಕೆ ವಾಪಸ್ ಹೋಗೋಣ ಎಂದ ಗಣೇಶ ಇದೇನು ಗುರೂ ಇನ್ನೂ ಶಿವಮೊಗ್ಗ, ಹುಬ್ಬಳ್ಳಿಗೆ ಹೋಗೋದು ಬೇಡವೇ? ಕೇಳಿದ ಮೂಷಿಕ. ಗಣೇಶ “ಮೂಷಿಕ ಅಲ್ಲಿ ನನ್ನನ್ನು ವಿಸರ್ಜಿಸುವಾಗ ಹೋಗೋಣ ಅದು ಅನಂತ ಚತುರ್ದಶಿ ದಿನ ಅದಕ್ಕೆ ಇನ್ನೂ ಟೈಮ್ ಇದೆ. ಈ ಭೂಲೋಕದ ಜನರ ಸಹವಾಸ ಜಾಸ್ತಿ ಬೇಡ ಎಂದ ಹೋಗಲಿ ಗುರೂ ಅದೇನೋ ಬಡವರಿಗೆ ಸೇರಬೇಕಾದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಡ್ತಾ ಇರ್ತಾರಂತೆ ಒಂದು ಸಲ ಅದನ್ನು ನೋಡಿಕೊಂಡು ಹೋಗೋಣಾ ಗುರು ಕಣ್ತುಂಬ ರಾಶಿ ರಾಶಿ ಅಕ್ಕಿ ನೋಡುವ ಆಸೆ ಆಗಿದೆ ಎಂದ ಅದಕ್ಕೆ ಗಣೇಶ ಬೇಡ ಮೂಷಿಕ ನಮಗೇಕೆ ಅದರ ಉಸಾಬರಿ ಎಂದರೆ ಮೂಷಿಕ ಕೇಳಲೇ ಇಲ್ಲ ಸರಿ ಬೇಡವೆಂದರೆ ಇನ್ನೆಲ್ಲಿ ಹರತಾಳ ಪ್ರಾರಂಭಿಸುತ್ತಾನೋ ಎಂದು ನಡೆ ಹೋಗೋಣ ಎಂದು ಅಕ್ರಮವಾಗಿ ಸಂಗ್ರಹಿಸಿಟ್ಟ ಒಂದು ಅಕ್ಕಿ ಗೋದಾಮಿಗೆ ಹೊರಟ ಅಲ್ಲಿ ನೋಡಿ ಮೂಷಿಕ ಅಬ್ಬಾ ನೋಡಿದ್ಯಾ ಗುರು ಮೂಟೆ ಮೂಟೆ ಅಕ್ಕಿಯನ್ನು ಹೇಗೆ ಸಂಗ್ರಹಿಸಿದ್ದಾರೆ ನಿಜವಾಗಲೂ ಇವರು ಎರಡು ಕಾಲಿನ ಹೆಗ್ಗಣಗಳೇ ಗುರೂ ಎಂದ ಅವರು ಮಾತನಾಡುತ್ತಿರುವಾಗಲೇ ಗೋದಾಮಿನ ವೀಕ್ಷಣೆಗೆಂದು ಗುಂಪೊಂದು ಬಾಗಿಲು ತೆಗೆದು ಒಳಬಂತು ಒಳಗೆ ಗಣೇಶನನ್ನು ನೋಡಿದ ಅವರುಗಳು ವೇಷ ಮರೆಸಿಕೊಂಡು ಅಕ್ಕಿ ಕದಿಯಲು ಬಂದಿರಬೇಕೆಂದು ಹಿಡಿಯಿರಿ ಹಿಡಿಯಿರಿ ಎಂದು ಕೂಗಿದ್ದೇ ತಡ ಗಣೇಶ ಮೂಷಿಕ ಈ ಭೂಲೋಕದ ಜನರ ಸಹವಾಸವೇ ಬೇಡಪ್ಪ ಎಂದುಕೊಂಡು ಎದ್ದೆವೋ..ಬಿದ್ದೆವೋ.. ಅಂತ ಕೈಲಾಸದ ಕಡೆ ಕಾಲುಕಿತ್ತರು ಎಂಬಲ್ಲಿಗೆ ಗಣೇಶ ಪುರಾಣದಲ್ಲಿ ಬರುವ ಗಣೇಶನ ಬೆಂಗ್ಳೂರ್ ಯಾತ್ರೆ ಎಂಬ ಕಥಾನಕವು ಸಂಪೂರ್ಣವಾದುದು.

ಪ್ರಕಾಶ್ ಕೆ ನಾಡಿಗ್.