ಗಾಂಧೀಜಿ ಸಂಚರಿಸಿದ್ದ ರೈಲು ಹಾದಿಯಲ್ಲಿ ಮೋದಿ ಪಯಣ

0
1381

ಪೀಟರ್ಮರಿಟ್ಸ್ಬರ್ಗ್ (ದಕ್ಷಿಣ ಆಫ್ರಿಕಾ) (ಪಿಟಿಐ): ಮೋಹನದಾಸ್ ಕರಮ್ಚಂದ್ ಗಾಂಧಿ (ಮಹಾತ್ಮ) ಅವರನ್ನು ಬಿಳಿಯರು ರೈಲಿನಿಂದ ತಳ್ಳಿ ಹಾಕಿದ್ದ ಅದೇ ರೈಲು ಹಾದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಂಟ್ರಿಚ್ನಿಂದ ಪೀಟರ್ಮೇರಿಟ್ಸ್ಬರ್ಗ್ವರೆಗೆ ಶನಿವಾರ ಪ್ರಯಾಣಿಸಿದರು.

1893ರಲ್ಲಿ ಪ್ರಥಮ ದರ್ಜೆ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗಾಂಧಿ ಅವರನ್ನು ಬಿಳಿಯರು ರೈಲಿನಿಂದ ಹೊರಗೆ ತಳ್ಳಿದ್ದರು.

ಬಿಳಿಯನಲ್ಲದ ವ್ಯಕ್ತಿ ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸಬಾರದು ಎಂಬುದು ಆಗ ಬಿಳಿಯರ ಭಾವನೆಯಾಗಿತ್ತು. ಆದರೆ ಈ ಘಟನೆ ವರ್ಣ ದ್ವೇಷದ ವಿರುದ್ಧ ಗಾಂಧಿ ಅವರ ಹೋರಾಟದ ದಿಕ್ಕನ್ನೇ ಬದಲಿಸಿತ್ತು.

‘ಮೋಹನದಾಸ (ಕರಮ್ಚಂದ್ ಗಾಂಧಿ), ಮಹಾತ್ಮ ಆಗುವ ಪ್ರಯಾಣ ಇಲ್ಲಿ ಆರಂಭವಾಯಿತು’ ಎಂದು ಪೀಟರ್ ಮರಿಟ್ಸ್ಬರ್ಗ್ನಲ್ಲಿ ಮೋದಿ ಹೇಳಿದರು.

ಪೆಂಟ್ರಿಚ್ನಿಂದ ಪೀಟರ್ಮರಿಟ್ಸ್ಬರ್ಗ್ ವರೆಗೆ 15 ಕಿಲೋಮೀಟರ್ ದೂರವನ್ನು ಮೋದಿ ಅವರು ರೈಲಿನಲ್ಲಿ ಕ್ರಮಿಸಿದರು. ಈ ಪ್ರಯಾಣಕ್ಕೆ, ಹಿಂದೆ ಗಾಂಧಿ ಅವರು ಪ್ರಯಾಣಿಸಿದ ಅದೇ ರೀತಿಯ ಮರದ ಬೋಗಿಗಳಿರುವ ರೈಲನ್ನು ಸಿದ್ಧಪಡಿಸಲಾಗಿತ್ತು.

ರೈಲಿನಿಂದ ಹೊರದಬ್ಬಿಸಿಕೊಂಡ ನಂತರ ಗಾಂಧಿ ಅವರು ಭಾರಿ ಚಳಿಯಲ್ಲಿ ಇಡೀ ರಾತ್ರಿಯನ್ನು ರೈಲು ನಿಲ್ದಾಣದಲ್ಲಿ ಕಳೆದಿದ್ದರು. ಅದೇ ಸ್ಥಳದಲ್ಲಿ ವಸ್ತುಸಂಗ್ರಹಾಲಯವೊಂದನ್ನು ಮೋದಿ ಅವರು ಉದ್ಘಾಟಿಸಿದರು.

(ಡರ್ಬನ್ ವರದಿ): ಭಾರತದ ಆರ್ಥಿಕ ಪ್ರಗತಿಯ ಲಾಭ ದಕ್ಷಿಣ ಆಫ್ರಿಕಾಕ್ಕೂ ಲಭಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

‘ಎರಡು ದೇಶಗಳ ಜನರ ನಡುವಣ ಬಾಂಧವ್ಯದ ಇತಿಹಾಸ ಬಲವಾದ ಆಧುನಿಕ ಸಹಭಾಗಿತ್ವಕ್ಕೆ ತಳಹದಿ ರೂಪಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಗೌರವಾರ್ಥ ಡರ್ಬನ್ ಮೇಯರ್ ಏರ್ಪಡಿಸಿದ್ದ ಔತಣಕೂಟದಲ್ಲಿ ಮೋದಿ ಮಾತನಾಡಿದರು.