ಗೈರು ಹಾಜರಾದ 104 ವೈದ್ಯರು, 1304 ಸಿಬ್ಬಂದಿ ವಜಾ

0
874

೧೨೦ಕ್ಕಿಂತ ಹೆಚ್ಚು ದಿನ ಉದ್ಯೋಗಕ್ಕೆ ಗೈರು ಹಾಜರಾದ ೧೦೪ ವೈದ್ಯರು ಹಾಗೂ ೧೩೦೪ ಸಿಬ್ಬಂದಿ ವಜಾ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಗಿಯ ಜೀವ ಉಳಿಸುವುದು ವೈದ್ಯರ ಕರ್ತವ್ಯ. ಇಲಾಖೆಯ ಎಲ್ಲರೂ ಈ ವಿಷಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ಆದರೆ ಬೇಕಾಬಿಟ್ಟಿ ರಜೆ ತೆಗೆದುಕೊಳ್ಳುತ್ತಿದ್ದ ಸಿಬ್ಬಂದಿ ವಜಾ ಮಾಡಲಾಗಿದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಹಲವಾರು ನ್ಯೂನ್ಯತೆಗಳಿದ್ದು ಅದನ್ನು ಸರಿಪಡಿಸಲು ಹಲವಾರು ಕ್ರಮಕೈಗೊಳ್ಳಲಾಗಿದೆ. ಎಬಿಎಲ್, ಬಿಪಿಎಲ್ ಕುಟುಂಬಗಳಿಗೂ ಅನ್ವಯವಾಗುವಂತೆ ಸಾರ್ವತ್ರಿಕ ಆರೋಗ್ಯ ಕಾರ್ಡ್‌ಗಳನ್ನು ನೀಡಲಾಗುವುದು. ಈ ಕಾರ್ಡ್ ಸಮೀಕರಣ ಮಾಡಿ ಇಂತಹ ಕಾರ್ಡ್‌ಗಳನ್ನು ನೀಡಲಾಗುವುದು. ಅಗತ್ಯವಿರುವ ಯಾವುದೇ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ. ಜೂನ್ ೨೦೧೭ರೊಳಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಗಣಕೀಕರಣ ಪೂರ್ಣಗೊಳಿಸಲಾಗುವುದು ಎಂದರು.

ಡೆಂಗ್ಯು, ಚಿಕೂನ್ ಗುನ್ಯ ರೋಗಿಗಳಿಗೆ ಪ್ಲೇಟ್ಲೆಟ್ಸ್ ಕಣಗಳ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಜ್ಞ, ಸಾಮಾನ್ಯ, ವೈದ್ಯರು, ದಂತ ವೈದ್ಯರು ಸೇರದಿಂತೆ ೬೨೫೯ ಹುದ್ದೆಗಳು ಮಂಜೂರಾಗಿದ್ದು, ೪೭೩೧ ಹುದ್ದೆಗಳಲ್ಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ೧೫೨೮ ಹುದ್ದೆಗಳು ಖಾಲಿ ಇವೆ ಎಂದು ಅವರು ಹೇಳಿದರು. ಕೆಪಿಎಸ್ಸಿ ಮೂಲಕ ೧೪೦೧ ವಿವಿಧ ವೈದ್ಯರ ಹುದ್ದೆಗಳಿಗೆ ನೇಮಕಾತಿ ನಡೆಸಿದ್ದು, ಕೇವಲ ೫೯೦ ಮಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದರು.ಸಿ ಗ್ರೂಪ್ ೪೩,೦೨೫ ಹುದ್ದೆಗಳು ಮಂಜೂರಾಗಿದ್ದು, ೩೦,೩೪೮ ಹುದ್ದೆಗಳ ಭರ್ತಿಯಾಗಿದ್ದು, ಇನ್ನೂ ೧೦,೦೯೭ ಹುದ್ದೆಗಳು ಖಾಲಿ ಇವೆ. ಅದೇ ರೀತಿ ಡಿ ಗ್ರೂಪ್ ೧೩,೯೬೫ ಹುದ್ದೆಗಳು ಮಂಜೂರಾಗಿದ್ದು, ೮೨೩೧ ಹುದ್ದೆಗಳು ಭರ್ತಿಯಾಗಿವೆ. ೫೭೩೪ ಹುದ್ದೆಗಳು ಖಾಲಿ ಉಳಿದಿವೆ ಎಂದು ಹೇಳಿದರು.