ಗ್ರಾಮಾಭಿವೃದ್ಧಿಯ ಯೋಜನೆಯಲ್ಲಿ ಕರ್ನಾಟಕವೇ ದೇಶದ ಮೊದಲ ರಾಜ್ಯ

0
1841

ಬೆಂಗಳೂರು: ಕರ್ನಾಟಕ ರಾಜ್ಯವು ಸಮಗ್ರ ಪಂಚಾಯತಿ ರಾಜ್ ಕಾಯಿದೆಯನ್ನು ಮೊದಲು ಜಾರಿಗೆ ತಂದ ಹೆಗ್ಗಳಿಕೆಯನ್ನು ಹೊಂದಿದೆ.  ಗ್ರಾಮಾಭಿವೃದ್ಧಿಯ ಯೋಜನೆಗಳನ್ನು ಗ್ರಾಮದ ಹಂತದಿಂದಲೇ ಸಿದ್ಧಪಡಿಸುವ ಐದು ವರ್ಷಗಳ ವಿಷನ್ ಡಾಕ್ಯುಮೆಂಟ್ (ಅಭಿವೃದ್ಧಿಯ ಮುನ್ನೋಟ) ಯೋಜನೆಯಾದ ”ನಮ್ಮ ಗ್ರಾಮ ನಮ್ಮ ಯೋಜನೆ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ 14ನೇ ಹಣಕಾಸು ಆಯೋಗದ ಶಿಫಾರಸನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ರಾಜ್ಯ ಹೊರಹೊಮ್ಮಿದೆ.

  • ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ ದಿನಾಂಕ: 10.05.1993ರಿಂದ ಜಾರಿಗೆ ಬಂದಿದ್ದು,
  •  ಅದರಂತೆ ರಾಜ್ಯದಲ್ಲಿ 3 ಹಂತದ ಪಂಚಾಯತ್ ರಾಜ್ ಸಂಸ್ಥೆಗಳಾದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ
  •  ಪಂಚಾಯತಿಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಒಟ್ಟು 5629 ಗ್ರಾಮ ಪಂಚಾಯಿತಿಗಳು, 176 ತಾಲ್ಲೂಕು
  •  ಪಂಚಾಯಿತಿ ಹಾಗೂ 30 ಜಿಲ್ಲಾ ಪಂಚಾಯಿತಿಗಳು ಅಸ್ತಿತ್ವದಲ್ಲಿದೆ.

ಶನಿವಾರ ವಿಧಾನಸೌಧದಲ್ಲಿ ರಾಜ್ಯದ 4,800 ಗ್ರಾಮ ಪಂಚಾಯಿತಿಗಳು ತಯಾರಿಸಿದ ”ವಿಷನ್ ಡಾಕ್ಯುಮೆಂಟ್” ಮಾದರಿಗಳನ್ನು ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಈ ವಿಷಯ ತಿಳಿಸಿದರು. ಯಾವುದೇ ಒಂದು ದೇಶದ ಯೋಜನೆ ಗ್ರಾಮಮಟ್ಟದಿಂದಲೇ ರೂಪುಗೊಳ್ಳಬೇಕು.

ಇಂತಹ ಆಶಯದೊಂದಿಗೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳಿಸಲು ರಾಜೀವ್ ಗಾಂಧಿ ಅವರ ಜನ್ಮದಿನದಂದು ರಾಜ್ಯ ಸರ್ಕಾರ ಮಹತ್ವದ ಘಟ್ಟತಲುಪಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿಯನ್ವಯ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮವು ಪ್ರತಿಯೊಂದು ಗ್ರಾಮದ ಅಭಿವೃದ್ಧಿ ಯೋಜನೆಯು ಗ್ರಾಮಸಭೆಯಿಂದಲೇ ತೀರ್ಮಾನಗೊಂಡು ಗ್ರಾಮ ಪಂಚಾಯಿತಿಗೆ ಸಲ್ಲಿಕೆಯಾಗಬೇಕು ಎಂಬ ಹೊಸ ನಿಯಮಕ್ಕೆ ಅವಕಾಶ ಕಲ್ಪಿಸಿದೆ. ಐದು ವರ್ಷಗಳ ಅವಧಿಗೆ ಸಿದ್ಧಗೊಳ್ಳುವ ಅಭಿವೃದ್ಧಿ ಮುನ್ನೋಟದ ವರದಿಯ ಆಧಾರದಲ್ಲೇ ಪ್ರತಿವರ್ಷದ ಕ್ರಿಯಾಯೋಜನೆ ರೂಪುಗೊಳ್ಳಬೇಕು. ಹಣಕಾಸು ಯೋಜನೆಯಡಿ ಲಭ್ಯವಾಗುವ ಅನುದಾನದ ಶೇ.40ರಷ್ಟುಅನುದಾನವನ್ನು ಮುನ್ನೋಟ ವರದಿಯ ಆಧಾರದಲ್ಲೇ ಕೈಗೊಳ್ಳಬೇಕು ಎಂದರು.

ಇದಲ್ಲದೇ ವಾಸ್ತವ ಸ್ಥಿತಿ ವಿಶ್ಲೇಷಣೆಯ 65ಕ್ಕೂ ಹೆಚ್ಚು ಚಟುವಟಿಕೆಗಳನ್ನು ಒಳಗೊಂಡ ಅಭಿವೃದ್ಧಿ ಮುನ್ನೋಟದ ವರದಿ ಗ್ರಾಮಸಭೆಯಲ್ಲೇ ನಿರ್ಧಾರವಾಗಬೇಕು ಎಂಬುದು ನಮ್ಮ ಗ್ರಾಮ ನಮ್ಮ ಯೋಜನೆಯ ಉದ್ದೇಶ. ಈ ಉದ್ದೇಶ ರಾಜ್ಯದ 6021 ಗ್ರಾಪಂಗಳ ಪೈಕಿ 4,800 ಗ್ರಾಪಂಗಳಲ್ಲಿ ಆ.9ರಂದೇ ಅನುಷ್ಠಾನಗೊಂಡು ಶನಿವಾರದ ವೇಳೆಗೆ ವೆಬ್ಸೈಟ್ನ ಪಂಚತಂತ್ರ ತಂತ್ರಾಂಶದಲ್ಲೂ ಕೂಡ ಪ್ರತಿ ಗ್ರಾಮ ಪಂಚಾಯಿತಿಯ ಮುನ್ನೋಟದ ವರದಿ ಬಿತ್ತರಗೊಂಡಿದೆ. ಇಂತಹ ಕ್ರಾಂತಿಕಾರಿ ಕಾರ್ಯಕ್ರಮ ದೇಶದಲ್ಲೇ ಮೊದಲು ಎಂದು ಬಣ್ಣಿಸಿದರು.

ಗ್ರಾಪಂ ಮಟ್ಟದಲ್ಲಿ ಮಾನವ ಅಭಿವೃದ್ಧಿ

ಇದೇ ವೇಳೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಕೆಳ ಹಂತದಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ಕೂಡ ಸಿದ್ಧಪಡಿಸಲಾಗಿದೆ. ಈವರೆಗೆ ದೇಶದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಮಾತ್ರ ಮಾನವ ಅಭಿವೃದ್ಧಿ ಸೂಚ್ಯಂಕ ಸಿದ್ಧಪಡಿಸಲಾಗುತ್ತಿತ್ತು. ಆದರೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸಿದ್ಧಪಡಿಸುತ್ತಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಆಧುನಿಕ ಅಡುಗೆ ಅನಿಲ ಹೊಂದಿರುವ ಗ್ರಾಮಗಳ ಕುಟುಂಬ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್, ಸ್ವಂತ ಮನೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರು, ಆರೋಗ್ಯ ಹಾಗೂ ಶಿಕ್ಷಣ ಅಂಶಗಳನ್ನು ಒಳಗೊಂಡು ಮಾನವ ಅಭಿವೃದ್ಧಿ ಸೂಚ್ಯಂಕ ಸಿದ್ಧಪಡಿಸಲಾಗುವುದು. ಬೆಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಗ್ರಾಪಂಗಳು ರಾಜ್ಯಮಟ್ಟದ ಗ್ರಾಪಂ ಮಾನವ ಅಭಿವೃದ್ಧಿ ಸರಾಸರಿ ಸೂಚ್ಯಂಕದಲ್ಲಿ ಶೇ.100ರಷ್ಟುಸಾಧನೆ ಮಾಡಿವೆ. ಉಳಿದ ಜಿಲ್ಲೆಗಳ ತಳಮಟ್ಟದ ಅಭಿವೃದ್ಧಿಗೆ ಈ ಸೂಚ್ಯಂಕ ಮಾರ್ಗಸೂಚಿಯಾಗಲಿದೆ ಎಂದು ಹೇಳಿದರು.

ಏನಿದು ವಿಷನ್ ಡಾಕ್ಯುಮೆಂಟ್?

ಯೋಜನೆಯ ಪ್ರಾಥಮಿಕ ದತ್ತಾಂಶ, ದ್ವಿತಿಯ ದತ್ತಾಂಶ, ಸಾಮಾಜಿಕ ನಕ್ಷೆ, ಸಂಪನ್ಮೂಲ ನಕ್ಷೆ, ವಾಸ್ತವ ಸ್ಥಿತಿಯ ವಿಶ್ಲೇಷಣೆ ಆಧರಿಸಿ ಅಭಿವೃದ್ಧಿಯ ಮುನ್ನೋಟ ವರದಿ ಸಿದ್ಧಪಡಿಸುವುದು. ಜನವಸತಿ ಸಭೆ, ವಾರ್ಡ್ ಸಭೆ ಹಾಗೂ ಗ್ರಾಮ ಸಭೆಯಲ್ಲಿ ಈ ಪ್ರಕ್ರಿಯೆ ಆರಂಭಗೊಂಡು ಗ್ರಾಮ ಪಂಚಾಯತಿಯ ಯೋಜನಾ ಸಹಾಯಕ ಸಮಿತಿಗೆ ಸಲ್ಲಿಸುವುದು, ಅಲ್ಲಿಂದ ಗ್ರಾಪಂ ಸಭೆ, ತಾಪಂ ಸಭೆ, ಜಿಪಂ ಸಭೆ ಮುಖಾಂತರ ರಾಜ್ಯ ವಲಯಕ್ಕೆ ವಿಷನ್ ಡಾಕ್ಯುಮೆಂಟ್ ಸಲ್ಲಿಕೆಯಾಗುವುದು. ಇದರಿಂದ ಒಂದು ಗ್ರಾಮದ ಮೂಲ ಅಗತ್ಯ ಆಧರಿಸಿ, ಜನರ ಬೇಡಿಕೆ ಒಳಗೊಂಡು ವಿಷನ್ ಡಾಕ್ಯುಮೆಂಟ್ ಸಿದ್ಧಗೊಳ್ಳುವುದು. ಈ ಮಾದರಿಯ ವ್ಯವಸ್ಥೆ ಇದೇ ಮೊದಲು.