ನೋಟು ರದ್ದು ಮಾಡಿದ್ದಾಯ್ತು, ಈಗ ಚಿನ್ನ ಖರೀದಿಗೆ ಕಡಿವಾಣ?

0
770

500 ಮತ್ತು 1000 ಮುಖಬೆಲೆಯ ನೋಟು ಏಕಾಏಕಿ ರದ್ದು ಮಾಡಿ ದೇಶದ ಜನತೆಗೆ ಆಘಾತ ನೀಡಿದ ಪ್ರಧಾನಿ ನರೇಂದ್ರ ಮೋದಿ ಚಿನ್ನ ಖರೀದಿ ಮೇಲೂ ಕಡಿವಾಣ ಹಾಕಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಪ್ಪು ಹಣ ನಿಯಂತ್ರಣಕ್ಕಾಗಿ ನೋಟು ರದ್ದುಪಡಿಸಿದ್ದರಿಂದ ಚಿನ್ನ ಹಾಗೂ ರಿಯಲ್ ಎಸ್ಟೇಟ್ ಮೇಲೆ ಎಲ್ಲರೂ ಮುಗಿ ಬಿದ್ದಿದ್ದರು. ಇದೀಗ ಚಿನ್ನ ಖರೀದಿ ಅಥವಾ ಸಂಗ್ರಹದ ಮೇಲೆ ಮಿತಿ ಹೇರಲು ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ಸುಳಿವು ನೀಡಿದೆ.

ಚಿನ್ನ ಖರೀದಿ ಅಥವಾ ಸಂಗ್ರಹದ ಮೇಲೆ ನಿಯಂತ್ರಣ ಹೇರುವ ಕುರಿತು ಚಿಂತನೆ ನಡೆದಿದೆ ಎಂಬ ವರದಿಯನ್ನು ಕೇಂದ್ರ ಹಣಕಾಸು ಸಚಿವಾಲಯ ನಿರಾಕರಿಸಿದ್ದರೂ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಏಕಾಏಕಿ ರದ್ದು ಮಾಡಿದ ಸರಕಾರ ಈ ನಿರ್ಧಾರವನ್ನು ಯಾವಾಗ ಬೇಕಾದರೂ ಪ್ರಕಟಿಸಬಹುದು ಎಂದು ಲೆಕ್ಕಚಾರ ಹಾಕಲಾಗುತ್ತಿದೆ.

ನೋಟು ರದ್ದತಿಯಿಂದ ದೇಶದ ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಇದರ ಬೆನ್ನಲ್ಲೇ ಚಿನ್ನದ ದರ ಗಗನಮುಖಿಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 69ರ ಆಸುಪಾಸಿಗೆ ಬಂದು ನಿಂತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಚಿನ್ನದ ಮೇಲಿನ ನಿಯಂತ್ರಣಕ್ಕೆ ಮೀನಮೇಷ ಎಣಿಸುತ್ತಿದೆ.

ಚಿನ್ನ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದ ಮೂರನೇ ಒಂದು ಭಾಗದಷ್ಟು ಕಪ್ಪುಹಣ ಚಿನ್ನ ಖರೀದಿಗೆ ವೆಚ್ಚವಾಗುತ್ತಿದ್ದು, ಸುಮಾರು ಪ್ರತಿವರ್ಷ 1000 ಟನ್ ಮಾರಾಟವಾಗುತ್ತಿದೆ. ನೋಟು ರದ್ದು ಮಾಡಿದರೂ ಚಿನ್ನಕ್ಕೆ ಯಾವಾಗಲೂ ಬೆಲೆ ಇದೆ ಎಂಬ ಕಾರಣಕ್ಕೆ ಇದೀಗ ಚಿನ್ನದ ಮೇಲೆ ನಿಯಂತ್ರಣ ಹೇರಲು ಸರಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಹಳೇ ನೋಟು ರದ್ದು ಮಾಡಿದ್ದರಿಂದ ಚಿನ್ನದ ಕಳ್ಳಸಾಗಾಣೆಗೆ ಸ್ವಲ್ಪಮಟ್ಟಿನ ಕಡಿವಾಣ ಬಿದ್ದಿದೆ. ನೋಟು ರದ್ದು ಗದ್ಧಲ ಮುಗಿದ ನಂತರ ಚಿನ್ನದ ಖರೀದಿ ಹಾಗೂ ಸಂಗ್ರಹದ ಮೇಲೆ ನಿಯಂತ್ರಣ ಹೇರಲು ಸರಕಾರ ಚಿಂತಿಸಿದ್ದು ಇದಕ್ಕಾಗಿ ಸೂಕ್ತ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.