ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಮೂವರು ಸೈನಿಕರ ಸಾವು

0
604

ಜಮ್ಮು-ಕಾಶ್ಮೀರದ ನಗ್ರೊಟಾದ ಸೇನಾ ನೆಲೆ ಮೇಲೆ ಮಂಗಳವಾರ ನಸುಕಿನಲ್ಲಿ ಉಗ್ರರು ನಡೆಸಿದ ಭಾರೀ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದ್ದು ಮೂವರನ್ನು ಹತ್ಯೆಗೈದಿದ್ದು, ಇನ್ನಷ್ಟು ಉಗ್ರರು ಇರುವ ಶಂಕೆ ಇದೆ.

ಜಮ್ಮುವಿನಿಂದ ೨೦ ಕಿ.ಮೀ. ದೂರದಲ್ಲಿರುವ ನಗ್ರೊಟಾದಲ್ಲಿ ಸೇನೆಯ ೧೬ ಪಡೆಗಳ ಮುಖ್ಯಕಚೇರಿ ಇದ್ದು, ಮುಂಜಾನೆ ೫.೩೦ರ ಸುಮಾರಿಗೆ ಸೈನಿಕರ ಭೋಜನ ಶಾಲೆಯ ಕಟ್ಟಡಕ್ಕೆ ನುಗ್ಗಿದ ಉಗ್ರರು ಗ್ರೇನೆಡ್ ಎಸೆದಿದ್ದು, ಅದರ ಬೆನ್ನಲ್ಲೇ ಭಾರೀ ಪ್ರಮಾಣದಲ್ಲಿ ಗುಂಡು ಹಾರಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಘಟನೆಯನ್ನು ವಿವರಿಸಿದ್ದಾರೆ.

ಇಲ್ಲಿನ ಸೇನಾ ತಂಡ ಜಮ್ಮು ವಲಯದಲ್ಲಿ ಪ್ರಮುಖವಾಗಿ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಗಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಕಟ್ಟೆಚ್ಚರ ವಹಿಸುತ್ತಿದೆ. ಈ ಕಚೇರಿಯ ಸುತ್ತಲೂ ದಟ್ಟವಾದ ಕಾಡು ಇದ್ದು, ಹಿಂದೆ ನದಿ ಹರಿಯುತ್ತಿದೆ.

ಈ ಕಚೇರಿಗೆ ಸಾಕಷ್ಟು ಕಣ್ಗಾವಲು ಇದ್ದರೂ ನಾಲ್ವರು ಇದ್ದರು ಎಂದು ಶಂಕಿಸಲಾದ ಉಗ್ರರು ಆತ್ಮಾಹುತಿ ದಳದವರಾಗಿದ್ದು, ಭಾರೀ ಪ್ರಮಾಣದಲ್ಲಿ ಹಾನಿ ಮಾಡುವ ಏಕೈಕ ಗುರಿಯೊಂದಿಗೆ ದಾಳಿ ನಡೆಸಿದ್ದರು. ಅವರ ಯತ್ನ ಪೂರ್ಣ ಯಶಸ್ಸು ದೊರೆಯಲಿಲ್ಲವಾದರೂ ಮೂವರು ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬೆನ್ನಲ್ಲೇ ನಗರದಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಭಾರತೀಯ ಸೇನೆಗೆ ದೊಡ್ಡ ಮಟ್ಟದಲ್ಲಿ ಹಾನಿ ಉಂಟು ಮಾಡಿದ ಎರಡನೇ ದಾಳಿ ಇದಾಗಿದೆ.