ಜೂನ್ 14 ವಿಶ್ವ ರಕ್ತದಾನ ದಿನ

0
1004

ಮೊಟ್ಟ ಮೊದಲ ಬಾರಿ ವಿಶ್ವ ರಕ್ತದಾನ ದಿನ ಆಚರಿಸಿದ್ದು 2004ರಲ್ಲಿ. 2005ರಲ್ಲಿ ನಡೆದ 58ನೇ ವರ್ಲ್ಡ್ ಹೆಲ್ತ್ ಅಸೆಂಬ್ಲಿಯಲ್ಲಿಪ್ರತಿವರ್ಷ ಜೂನ್ 14ರಂದು ವಿಶ್ವ ರಕ್ತದಾನ ದಿನ ಆಚರಿಸಲು ತೀರ್ಮಾನಿಸಲಾಯಿತು. ಆಸ್ಟ್ರೇಲಿಯನ್ ಮೂಲದ ಜೀವಶಾಸ್ತ್ರಜ್ಞ ಹಾಗೂ ಫಿಸಿಷಿಯನ್ ಡಾ.ಕಾರ್ಲ್ ಲ್ಯಾಂಡ್ಸ್ಟೀನರ್(1868-1943) ಹುಟ್ಟಿದ್ದು ಇದೇ ದಿನ. ಅವರನ್ನು ಆಧುನಿಕ ರಕ್ತವರ್ಗಾವಣೆಯ ‘ಸಂಸ್ಥಾಪಕ’ ಎಂದು ಪರಿಗಣಿಸಲಾಗುತ್ತದೆ. ಅವರು 1901ರಲ್ಲಿ ಎಬಿಒ ರಕ್ತದ ಗುಂಪುಗಳ ವರ್ಗೀಕರಣ ಮಾಡುವಲ್ಲಿ ಸಫಲರಾಗಿದ್ದರು. 1937ರಲ್ಲಿ ಅಲೆಕ್ಸಾಂಡರ್ ವೈನರ್ ಜತೆ ಸೇರಿ ರಕ್ತದ ವರ್ಗೀಕರಣಕ್ಕೆ ಹಾಗೂ ಗುರುತಿಸುವಿಕೆಗೆ ಆಧುನಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಈ ಸಾಧನೆಯನ್ನು ಗೌರವಿಸುವ ಸಲುವಾಗಿ ವಿಶ್ವ ರಕ್ತದಾನ ದಿನ ಆಚರಿಸಲು ತೀರ್ಮಾನಿಸಲಾಯಿತು. ಈ ವರ್ಷದ ವಿಶ್ವ ರಕ್ತದಾನ ದಿನದ ಥೀಮ್ ‘ರಕ್ತ ನಮ್ಮನ್ನೆಲ್ಲ ಬೆಸೆಯುತ್ತದೆ’.ಅದು ಜೀವ ಉಳಿಸುವ ಮಹಾದಾನ ಎಂಬ ಅರಿವನ್ನು ಜನರಲ್ಲಿ ಮೂಡಿಸಲಾಗುತ್ತದೆ.

 ರಾಜ್ಯದ 12 ಜಿಲ್ಲೆಗಳಿಗೆ ಭಾರತೀಯ ರೆಡ್ ಕ್ರಾಸ್ ಸಹಭಾಗಿತ್ವದೊಂದಿಗೆ ರಕ್ತ ಪೂರೈಸುತ್ತಿದ್ದ ‘ರಕ್ತವಾಹಿನಿ’ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ರಕ್ತ ಸಂಗ್ರಹಿಸುವ ಹೊಣೆಗಾರಿಕೆಯನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ವಹಿಸಲಾಗಿದೆ. ಜಾಗತಿಕವಾಗಿ ಮೆಚ್ಚುಗೆ ಗಳಿಸಿದ್ದ ಯೋಜನೆಯನ್ನು ಸರ್ಕಾರ ಅನುದಾನ ಕೊರತೆಯ ನೆಪ ಹೇಳಿ ಏಕಾಏಕಿ ಕೈ ಬಿಟ್ಟಿದ್ದು, ರಕ್ತದ ಗುಣಮಟ್ಟ ಸೇರಿ ನಿಯಮಗಳು ಪಾಲನೆಯಾಗದ ಆರೋಪ ಕೇಳಿ ಬಂದಿದೆ.

ಡಬ್ಲ್ಯುಎಚ್ ಶಿಫಾರಸು

  • ಸುರಕ್ಷಿತ, ಗುಣಮಟ್ಟದ ರಕ್ತದ ಲಭ್ಯತೆ ಹಾಗೂ ಅದು ಅಗತ್ಯ ಸಮಯದಲ್ಲಿ ಲಭಿಸುತ್ತಿದೆ ಎಂಬುದನ್ನು ಪ್ರತಿರಾಷ್ಟ್ರವೂ ಖಾತರಿಪಡಿಸಬೇಕು.
  • ರಕ್ತ ಹಾಗೂ ರಕ್ತದ ಉತ್ಪನ್ನಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಏಕರೂಪದ ನೀತಿಗಳನ್ನು ಜಾರಿಗೊಳಿಸಬೇಕು.
  • ರಕ್ತದ ಸಂಗ್ರಹ, ಪರೀಕ್ಷೆ, ಸಂಸ್ಕರಣೆ, ದಾಸ್ತಾನು ಮತ್ತು ವಿತರಣೆಯ ಕಾರ್ಯವನ್ನು ನಿರ್ವಹಿಸುವುದಕ್ಕೆ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು ಮಟ್ಟಗಳಲ್ಲಿ ಪರಿಣಾಮಕಾರಿ ವ್ಯವಸ್ಥೆಯನ್ನು ಪರಿಚಯಿಸಬೇಕು.
  • ರಕ್ತನಿಧಿಗಳ ವ್ಯವಸ್ಥೆಯನ್ನು ಪರಿಶೀಲನೆ ಹಾಗೂ ನಿಗಾಕ್ಕೆ ಕೇಂದ್ರೀಕೃತ ವ್ಯವಸ್ಥೆಯನ್ನು ರೂಪಿಸಬೇಕು.

ದಿನಾಚರಣೆಯ ಉದ್ದೇಶ

  • ರಕ್ತ ನಮ್ಮನ್ನೆಲ್ಲ ಬೆಸೆಯುವುದೆಂಬ ಸಂದೇಶವನ್ನು ರವಾನಿಸುವುದು ಹಾಗೂ ರಕ್ತದಾನ ಮಾಡಿ ಜೀವ ಉಳಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಈ ಆಚರಣೆಯೊಂದು ನೆಪವಾಗಬೇಕು.
  • ಹಣಪಡೆಯದೆ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಾಗಬೇಕು ಎಂಬ ಕುರಿತು ಜನಜಾಗೃತಿ ಮೂಡಿಸಬೇಕು. ಇದುವರೆಗೆ ರಕ್ತದಾನ ಮಾಡದವರೂ ಈ ಬಾರಿ ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು. ವಿಶೇಷವಾಗಿ ಯುವ ಜನರನ್ನು ಈ ಕಾರ್ಯಕ್ಕೆ ಪ್ರೇರೇಪಿಸಿದಷ್ಟೂ ಒಳ್ಳೆಯದು.
  • ರಕ್ತದಾನ ಮಾಡಿ ಬದುಕು ಹಂಚಿಕೊಳ್ಳಿ ಎಂಬ ಸಂದೇಶ ರವಾನಿಸಿ, ರಕ್ತದಾನವನ್ನು ಸಮುದಾಯ ಸೇವೆ ಎಂಬಂತೆ ಬಿಂಬಿಸಬೇಕು. ಸಮುದಾಯದ ಪಾಲ್ಗೊಳ್ಳುವಿಕೆಯಿಂದಷ್ಟೇ ಸುರಕ್ಷಿತ ಹಾಗೂ ಅಗತ್ಯ ಪ್ರಮಾಣದ ರಕ್ತದ ಪೂರೈಕೆಯನ್ನು ಖಾತರಿಪಡಿಸಬಹುದು.
  • ಆರೋಗ್ಯ ಸಚಿವಾಲಯಗಳು, ಇಲಾಖೆಗಳು ನಿಯತವಾಗಿ ಯಾವುದೇ ಹಣಪಡೆಯದೆ ರಕ್ತದಾನ ಮಾಡುವವರನ್ನು ಗುರುತಿಸಿ ಗೌರವಿಸಬೇಕು. ಅವರ ಬದ್ಧತೆ ಇತರರಿಗೆ ಪ್ರೇರಣೆಯಾಗುವಂತೆ ಮಾಡಬೇಕು.

“ರಕ್ತದಾನ  ಜೀವದಾನ, ಮಾನವೀಯತೆಯ  ಸಂಕೇತ “