ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ

0
1617

ಕೋಲ್ಕತ: ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಹೆಸರು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಹುದ್ದೆಗೆ ಬಹುತೇಕ ಅಂತಿಮವಾಗಿದೆ ಎಂದು ವರದಿಯಾಗಿದೆ. ಕನ್ನಡಿಗ ಕುಂಬ್ಳೆ, ರವಿಶಾಸ್ತ್ರಿ ಸೇರಿದಂತೆ 10 ಮಂದಿ ಬಿಸಿಸಿಐನ ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಮುಂದೆ ಮಂಗಳವಾರ ನಡೆದ ಸಂದರ್ಶನಕ್ಕೆ ಹಾಜರಾದರು. ಮುಖ್ಯಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ರನ್ನು ಸಮಿತಿ ಸಂದರ್ಶನಕ್ಕೆ ಆಹ್ವಾನಿಸದಿರುವುದು ಅಚ್ಚರಿ ಮೂಡಿಸಿದೆ. ಇನ್ನೊಂದೆಡೆ ಅನಿಲ್ ಕುಂಬ್ಳೆಗೆ ಟೀಮ್ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ಕಠಿಣ ಪೈಪೋಟಿ ನೀಡುತ್ತಿದ್ದಾರೆ ಎನ್ನಲಾಗಿದೆ.

ಖಾಸಗಿ ಹೋಟೆಲ್ನಲ್ಲಿ ನಡೆದ ಸಂದರ್ಶನದಲ್ಲಿ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಒಳಗೊಂಡ ಸಮಿತಿ 10 ಅಭ್ಯರ್ಥಿಗಳಿಂದ ಮಾಹಿತಿ ಕಲೆಹಾಕಿತು.

ಜೂನ್ 24 (ಶುಕ್ರವಾರ) ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಮುಖ್ಯ ಕೋಚ್ ಹೆಸರನ್ನು ಘೊಷಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಭಾರತ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ 57 ಅರ್ಜಿಗಳು ಸಲ್ಲಿಕೆಯಾಗಿದ್ದವು, ಈ ಸಂಖ್ಯೆಯನ್ನು ಬಿಸಿಸಿಐ 21ಕ್ಕೆ ಇಳಿಸಿ ಕೇವಲ 10 ಮಂದಿಯನ್ನಷ್ಟೆ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಅಭ್ಯರ್ಥಿಗಳ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಮೂಲಕ ಅಧ್ಯಕ್ಷ ಅನುರಾಗ್ ಠಾಕೂರ್ಗೆ ಸಮಿತಿ ವರದಿ ಸಲ್ಲಿಸಲಿದೆ. ’10 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಎಲ್ಲರೂ ತಮ್ಮದೇ ಆದ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ. ಸಂದರ್ಶನದ ಪ್ರಕ್ರಿಯೆ ಇಂದಿಗೆ ಮುಕ್ತಾಯಗೊಂಡಿದೆ’ ಎಂದು ಸಿಎಸಿ ಸದಸ್ಯ ಸೌರವ್ ಗಂಗೂಲಿ ತಿಳಿಸಿದ್ದಾರೆ. ಮಂಗಳವಾರ ಸಂದರ್ಶನಕ್ಕೆ ಹಾಜರಾದವರ ಪೈಕಿ ಅನಿಲ್ ಕುಂಬ್ಳೆ ಹಾಗೂ ರವಿಶಾಸ್ತ್ರಿ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ 45 ವರ್ಷದ ಕುಂಬ್ಳೆ ಒಟ್ಟು 956 ವಿಕೆಟ್ ಕಬಳಿಸಿದ್ದಾರೆ.

‘ಒಂದು ಕಾಲದಲ್ಲಿ ನನಗೆ ಕೋಚ್ ಆಯ್ಕೆ ಮಾಡುವ ಅವಕಾಶ ಇತ್ತು. ಇಂತಹ ಅವಕಾಶ ಮತ್ತೆ ಸಿಕ್ಕಿದೆ. ಸಂದರ್ಶನದಲ್ಲಿ ಚಾಪೆಲ್ರನ್ನು ಆಯ್ಕೆ ಮಾಡಿ ತಪ್ಪುಮಾಡಿದ್ದೆ’ ಎಂದರು.

ಮುಂದೊಂದು ದಿನ ಟೀಮ್ ಇಂಡಿಯಾ ಕೋಚ್ ಆಗುವೆ: ಎರಡೂವರೆ ವರ್ಷಗಳ ಹಿಂದೆಯೆ ಭಾರತ ತಂಡಕ್ಕೆ ಕೋಚ್ ಆಗಬೇಕು ಎಂದುಕೊಂಡಿದ್ದೆ. ಆದರೆ, ಇಂದು ಅದೇ ಹುದ್ದೆಗೆ ಸಂದರ್ಶನ ನಡೆಸುತ್ತಿದ್ದೇನೆ. ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಸೌರವ್ ಗಂಗೂಲಿ ತಿಳಿಸಿದರು. ‘ಮುಂದೊಂದು ದಿನ ನಾನು ಕೂಡ ಕೋಚ್ ಹುದ್ದೆಯ ಸಂದರ್ಶನಕ್ಕೆ ಹಾಜರಾಗಬಹುದು. ಇದು ಸಾಧ್ಯವಾಗಬಹುದು, ಏಕೆಂದರೆ, ನಾಳೆಯ ಬಗ್ಗೆ ಯಾರಲ್ಲೂ ಖಾತ್ರಿ ಇಲ್ಲ ಅಲ್ಲವೇ’ ಎಂದರು. ‘ನಾನು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷನಾಗುತ್ತೇನೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಅದರೀಗ ಅದು ಸಾಧ್ಯವಾಗಿದೆ. ನಾಳೆಯ ಬಗ್ಗೆ ನಂಬಿಕೆ ಇಡಬೇಕು’ ಎಂದು ಗಂಗೂಲಿ ಹೇಳಿದರು.