ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಕೆ.ಜೆ. ಜಾರ್ಜ್ ವಿಚಾರಣೆ

0
622

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ನಾಲ್ಕು ತಾಸು ವಿಚಾರಣೆ ನಡೆಸಿದರು.

ಮಧ್ಯಾಹ್ನ 3.00 ಕ್ಕೆ ಚಾಲುಕ್ಯ ವೃತ್ತದಲ್ಲಿರುವ ಸಿಐಡಿ ಕಚೇರಿಗೆ ಆಗಮಿಸಿದ ಜಾರ್ಜ್ ಅವರನ್ನು ಎಡಿಜಿಪಿ ಪ್ರತಾಪರೆಡ್ಡಿ ಹಾಗೂ ಡಿಐಜಿ ಸೋನಿಯಾ ನಾರಂಗ್ ಅವರು ಸಂಜೆ 7 ರ ವರೆಗೆ ವಿಚಾರಣೆ ನಡೆಸಿದರು. ಹಿಂದೆ ಗಣಪತಿ ಅವರು ಸೇವೆಯಲ್ಲಿದ್ದಾಗಿನ ಸಂದರ್ಭ, ಹಾಗೂ ಆತ್ಮಹತ್ಯೆಗೂ ಮುನ್ನ ಅವರು ನೀಡಿದ ಹೇಳಿಕೆ ಎಲ್ಲವನ್ನೂ ಆಧರಿಸಿ ಜಾರ್ಜ್ ಅವರನ್ನು ವಿಚಾರಣೆ ನಡೆಸಿದರು.

ಮಡಿಕೇರಿಯಲ್ಲಿ ಜುಲೈ 7 ರಂದು ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಗಣಪತಿ ಅವರು ನಾನು ಸೇವೆಯಲ್ಲಿದ್ದಾಗ ಮಾಜಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡಿದ್ದರು. ನನಗೇನಾದರೂ ಆದರೆ ಅವರೇ ಕಾರಣ ಎಂದು ಖಾಸಗಿ ವಾಹಿನಿಯಲ್ಲಿ ಹೇಳಿಕೆ ನೀಡಿದ್ದರು.

ನಂತರ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಜಾರ್ಜ್ ರಾಜಿನಾಮೆಗೆ ಆಗ್ರಹಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆದಿತ್ತು. ಏತನ್ಮಧ್ಯೆ ಮಡಿಕೇರಿಯ ನ್ಯಾಯಾಲಯ ಕೆ.ಜೆ. ಜಾರ್ಜ್ ಹಾಗೂ ಇತರೆ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆದೇಶ ನೀಡಿತ್ತು. ನಂತರ ಕೆ.ಜೆ. ಜಾರ್ಜ್ ರಾಜಿನಾಮೆ ಸಲ್ಲಿಸಿದ್ದರು. ಈ ಹಿಂದೆ ಸಿಐಡಿ ಅಧಿಕಾರಿಗಳು ಜಾರ್ಜ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಾರ್ಜ್ ಅವರು ಶುಕ್ರವಾರ ಸಿಐಡಿ ಕಚೇರಿಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.