ತಮಿಳುನಾಡಿಗೆ ನಿತ್ಯ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಆದೇಶ

0
523

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದ್ದು, ಅಕ್ಟೋಬರ್ 7ರಿಂದ 18ರವರೆಗೆ ನಿತ್ಯ 2 ಸಾವಿರ ಕ್ಯೂಸೆಕ್ ಕಾವೇರಿ ನೀರು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ಸೆಪ್ಟೆಂಬರ್ 30ರ ಆದೇಶದ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಅ.7ರಿಂದ 18ರವರೆಗೆ ನಿತ್ಯ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೆ ಸೆ.20ರ ಹಾಗೂ ಸೆ.30ರಂದು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಆದೇಶಕ್ಕೆ ಸದ್ಯ ತಡೆ ನೀಡಿ ವಿಚಾರಣೆಯನ್ನು ಅ.18ಕ್ಕೆ ಮುಂಡೂಡಿದೆ.

ಇದೇ ವೇಳೆ ಕಾವೇರಿ ಕೊಳ್ಳದ ಜಲಾಶಯಗಳ ವಾಸ್ತವ ಸ್ಥಿತಿ ತಿಳಿಯಲು ಕರ್ನಾಟಕ ಹಾಗೂ ತಮಿಳುನಾಡಿಗೆ ಭೇಟಿ ನೀಡಿ ಅ.17ರಂದು ವರದಿ ನೀಡುವಂತೆ ತಜ್ಞರ ತಂಡಕ್ಕೆ ಸೂಚಿಸಿದೆ. ಈ ತಜ್ಞರ ತಂಡದಲ್ಲಿ ನಾಲ್ಕು ರಾಜ್ಯಗಳ ಮುಖ್ಯ ಇಂಜಿನಿಯರ್ ಗಳು ಇರುತ್ತಾರೆ.

ಇದಕ್ಕೂ ಮುನ್ನ ಕರ್ನಾಟಕ ಸೆ.30ರ ಆದೇಶ ಪಾಲಿಸುವುದಾಗಿ ಕೋರ್ಟ್ ಗೆ ತಿಳಿಸಿದ ರಾಜ್ಯದ ಪರ ವಕೀಲ ಫಾಲಿ ಎಸ್. ನಾರಿಮನ್ ಅವರು, ತಮಿಳುನಾಡಿಗೆ 6 ದಿನಗಳ ಕಾಲ ನೀರು ಹರಿಸುತ್ತೇವೆ. 6 ದಿನಗಳಲ್ಲಿ ಒಟ್ಟು 36,000 ಕ್ಯೂಸೆಕ್ಸ್ ನೀರು ಹರಿಸಲಾಗುವುದು ಎಂದು ಕೋರ್ಟ್ ಗೆ ಮಾಹಿತಿ ನೀಡಿದ್ದರು. ಈ ವೇಳೆ ಅ.7ರಿಂದ 18ರವರೆಗೆ ಏನು ಮಾಡುತ್ತೀರಿ? ನಿಮ್ಮಿಂದ ಎಷ್ಟು ನೀರು ಬಿಡಲು ಸಾಧ್ಯ ಎಂದು ಕೋರ್ಟ್ ಮತ್ತೆ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ನಾರಿಮನ್ ಅವರು ಅ.7ರಿಂದ 18ರವರೆಗೆ ನಿತ್ಯ 1,500 ಕ್ಯೂಸೆಕ್ ನೀರು ಬಿಡಲು ಒಪ್ಪಿಗೆ ಸೂಚಿಸಿದರು. ಅಂತಿಮವಾಗಿ ಕೋರ್ಟ್ ನಿತ್ಯ 2 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದೆ.

ಇನ್ನು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಸದ್ಯ ಅದಕ್ಕೆ ತಡೆ ನೀಡಿದೆ.

ಈ ಹಿಂದೆ ನಾಲ್ಕು ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಇದಕ್ಕೆ ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಕೂಡಾ ಒಪ್ಪಿಗೆ ಸೂಚಿಸಿದ್ದರು. ಆದರೆ ನಂತರ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸಿದ ರೊಹ್ಟಗಿ ಅವರು, ಮಂಡಳಿ ರಚನೆ ಆದೇಶ ಹಿಂಪಡೆಯುವಂತೆ ಮನವಿ ಮಾಡಿದ್ದರು.

ತಾಂತ್ರಿಕ ಉನ್ನತಾಧಿಕಾರ ತಂಡಕ್ಕೆ ಅಸ್ತು ತಾಂತ್ರಿಕ ಉನ್ನತಾಧಿಕಾರ ತಂಡ ರಚಿಸುವ ಕೇಂದ್ರದ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಜಿ.ಎಸ್.ಝಾ ಅಧ್ಯಕ್ಷತೆಯಲ್ಲಿ ತಾಂತ್ರಿಕ ಉನ್ನತಾಧಿಕಾರ ತಂಡವನ್ನು ರಚಿಸಿದೆ. ರಾಜ್ಯಕ್ಕೆ ಅಧ್ಯಯನ ತಂಡ ಕಳುಹಿಸುವಂತೆ ಕರ್ನಾಟಕ ಪರ ವಕೀಲರಾದ ಫಾಲಿ ನಾರಿಮನ್ ವಾದ ಮಂಡಿಸಿದ್ದರು. ಏತನ್ಮಧ್ಯೆ ಮಂಡಳಿ ರಚನೆ ಆದೇಶ ನೀಡುವಂತೆ ತಮಿಳುನಾಡು ಪರ ವಕೀಲ ಶೇಖರ ನಾಫ್ಡೆ ಪ್ರತಿವಾದ ಮಂಡಿಸಿದರು. ಆದರೆ ಸುಪ್ರೀಂ ಪೀಠ ಕರ್ನಾಟಕದ ವಾದಕ್ಕೆ ಮನ್ನಣೆ ನೀಡಿ ರಾಜ್ಯಕ್ಕೆ ಅಧ್ಯಯನ ತಂಡ ಕಳುಹಿಸಲು ಆದೇಶ ನೀಡಿದೆ.