ದಸರಾ ರಜೆ ಕಡಿತ: ಇನ್ನೂ ತೀರ್ಮಾನ ಆಗಿಲ್ಲ

0
727

ಬೆಂಗಳೂರು: ವಿದ್ಯಾರ್ಥಿಗಳ ಹಿತಕಾಯುವ ಉದ್ದೇಶದಿಂದ ಕೆಲ ಸರ್ಕಾರಿ ರಜಾ ದಿನಗಳಂದು ಕೂಡ ಶಾಲಾ– ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಇದಲ್ಲದೆ ದಸರಾ ರಜಾ ಅವಧಿಯನ್ನು 3 ರಿಂದ 5 ದಿನ ಮೊಟಕು ಮಾಡಲು ಅದು ಮುಂದಾಗಿದೆ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಇದಕ್ಕೆ ಸಹಮತ ಸೂಚಿಸಿವೆ.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಸರಾ ರಜೆ ಮೊಟಕುಗೊಳಿಸುವ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ ಸ್ಪಷ್ಟಪಡಿಸಿದ್ದಾರೆ. ಸತತ ಬಂದ್‌ ಹಿನ್ನೆಲೆಯಲ್ಲಿ ಪಾಠ-ಪ್ರವಚನಗಳಿಗೆ ಅಡ್ಡಿಯಾಗಿರುವುದರಿಂದ ಶಾಲೆಗಳಿಗೆ ದಸರಾ ರಜೆ ಮೊಟಕುಗೊಳಿಸುವ ಪ್ರಸ್ತಾವದ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ”ಈ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ” ಎಂದು ಪ್ರತಿಕ್ರಿಯಿಸಿದರು.

ಈ ನಡುವೆ, ಪದವಿ ಪೂರ್ವ ಕಾಲೇಜುಗಳಿಗೆ ಅಕ್ಟೋಬರ್‌ 8ರಿಂದ 28ರವರೆಗೆ ದಸರಾ ರಜೆ ನಿಗದಿಯಾಗಿತ್ತು. ಆದರೆ, ಅ. 23ರಿಂದಲೇ ತರಗತಿಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪದವಿ ಕಾಲೇಜುಗಳಲ್ಲಿ ಶನಿವಾರ ಪೂರ್ತಿ ದಿನ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಉಳಿಕೆ ಪಾಠ-ಪ್ರವಚನಗಳನ್ನು ಸರಿದೂಗಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಈಗಾಗಲೇ ಸುತ್ತೋಲೆ ಹೊರಡಿಸಿದ್ದಾರೆ.