ದೇವರಿಗೆ ಪಂಗನಾಮ: ಪದ್ಮನಾಭ ಸ್ವಾಮಿಯ 776 ಕೆ.ಜಿ. ಚಿನ್ನ ಮಾಯ!

0
1473

ನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತ ದೇವರುಗಳ ಪೈಕಿ ಒಂದೆನಿಸಿರುವ ಕೇರಳದ ತಿರುವನಂತಪುರದ ಅನಂತಪದ್ಮನಾಭ ದೇವಾಲಯದಲ್ಲಿ 186 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಲಾಗಿದೆ. 1166 ಚಿನ್ನದ ಬಿಂದಿಗೆಗಳ ಪೈಕಿ 769 ಮಡಕೆಗಳಲ್ಲಿದ್ದ 776 ಕೆ.ಜಿ. ಚಿನ್ನಾಭರಣ ಕಳುವಾಗಿದೆ.

2015 ರಲ್ಲೇ ಅನಂತಪದ್ಮನಾಭ ಸ್ವಾಮಿ ದೇಗುಲದ ವ್ಯವಹಾರಗಳ ಕುರಿತು ವರದಿ ಸಲ್ಲಿಸಬೇಕೆಂದು ಮಾಜಿ ಮಹಾಲೇಖಪಾಲ ವಿನೋಧ್ ರೈ ಅವರ ಸಮಿತಿಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದೇಶದ ಅನ್ವಯ ತನಿಖೆ ನಡೆಸಿದ ಸಮಿತಿ ಹಲವು ಅವ್ಯವಹಾರಗಳನ್ನು ಬಯಲಿಗೆಳೆದಿತ್ತು.

ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಿ ಆಭರಣ ಮಾಡಿಸಲು ಗುತ್ತಿಗೆದಾರರಿಗೆ ಹಸ್ತಾಂತರ ಮಾಡುವ ಮುನ್ನ ಅವುಗಳ ಪರಿಶುದ್ಧತೆ ಎಷ್ಟಿತ್ತು, ತೂಕ ಎಷ್ಟಿತ್ತು ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ದೇವಸ್ಥಾನದಲ್ಲಿ ಇರಲಿಲ್ಲ ಎಂದು ರಾಯ್ ಸಮಿತಿ ಹೇಳಿದೆ. ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ಲೋಹದ ವಸ್ತುಗಳ ಪಟ್ಟಿಯನ್ನೂ ದೇವಸ್ಥಾನ ಹೊಂದಿರಲಿಲ್ಲ. ಭಾರಿ ಪ್ರಮಾಣದ ಸಂಪತ್ತಿನಿಂದಾಗಿ ಪ್ರಸಿದ್ಧಿ ಪಡೆದಿರುವ ಪದ್ಮನಾಭ ಸ್ವಾಮಿ ದೇವಸ್ಥಾನದ ಲೆಕ್ಕ ಪರಿಶೋಧನೆ ನಡೆಸುವಂತೆ ರಾಯ್ ಅವರಿಗೆ ಸುಪ್ರೀಂ ಕೋರ್ಟ್ 2014ರಲ್ಲಿ ಆದೇಶಿಸಿತ್ತು. ಕರಗಿಸಲು ಮತ್ತು ಶುದ್ಧೀಕರಿಸಲು ಕಳುಹಿಸಿದ್ದ ಚಿನ್ನದಲ್ಲಿ ಶೇಕಡ 30ರಷ್ಟು ಕಾಣೆಯಾಗಿದೆ ಎಂದು ರಾಯ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.ರಾಯ್ ಅವರು ವರದಿಯನ್ನು ಈ ವರ್ಷದ ಮಾರ್ಚ್ ನಲ್ಲೇ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ಇರುವ ಬೆಲೆಬಾಳುವ ವಸ್ತುಗಳನ್ನು ಕಾಲಕಾಲಕ್ಕೆ ಪರಿಶೀಲಿಸುವ ವ್ಯವಸ್ಥೆಯೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.’ದೇವಸ್ಥಾನದ ಈಗಿನ ಆಡಳಿತ ವ್ಯವಸ್ಥೆ ದುರ್ಬಲವಾಗಿದೆ. ಇದನ್ನು ತಾತ್ಕಾಲಿಕ ಅಗತ್ಯಗಳಿಗಾಗಿ ರೂಪಿಸಲಾಗಿದೆ. ಈ ವ್ಯವಸ್ಥೆ ಸಮಗ್ರವಾಗಿ, ಪರಿಣಾಮಕಾರಿಯಾಗಿ ಇಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ.ಕಾರ್ಯದರ್ಶಿ ಅಥವಾ ಅದಕ್ಕಿಂತ ದೊಡ್ಡ ಹುದ್ದೆ ನಿರ್ವಹಿಸಿದ, ಅಖಿಲ ಭಾರತ ನಾಗರಿಕ ಸೇವೆಗಳ ನಿವೃತ್ತ ಅಧಿಕಾರಿಯೊಬ್ಬರ ಅಧ್ಯಕ್ಷತೆಯಲ್ಲಿ ಏಳು ಜನರ ಆಡಳಿತ ಮಂಡಳಿಯನ್ನು ರಚಿಸಬೇಕು. ಈ ಸಮಿತಿಯಲ್ಲಿ ತಿರುವಾಂಕೂರು ರಾಜಮನೆತನದ ಪ್ರತಿನಿಧಿ ಹಾಗೂ ತಂತ್ರಿ (ಅರ್ಚಕ) ಕೂಡ ಇರಬೇಕು.

ಸಮಿತಿ ಹೇಳಿದ ಮಾಹಿತಿಯ ಪ್ರಕಾರ ದೇಗುಲದಲ್ಲಿನ ಅಪಾರ ಪ್ರಮಾಣದ ಆಭರಣಗಳು ನಾಪತ್ತೆಯಾಗಿದ್ದವು. ಹಿಂದೆ 2012ರಲ್ಲಿ ಕೂಡ ಮಾಜಿ ಐಪಿಎಸ್ ಅಧಿಕಾರಿ ಟಿ.ಪಿ. ಸುಂದರ್ ರಾಜನ್ ಅವರು ಅನಂತಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿ ಇರುವ ಬೃಹತ್ ನಿಧಿಯನ್ನು ತೆರೆಸಿ ಲೆಕ್ಕಹಾಕಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

150 ವರ್ಷದ ನಂತರ 2012 ರಲ್ಲಿ ಅನಂತಪದ್ಮನಾಭಸ್ವಾಮಿ ದೇವಾಲಯದ ನೆಲಮಾಳಿಗೆಯನ್ನು ತೆರೆದು ಸಂಪತ್ತಿನ ದಾಖಲೀಕರಣ ಮಾಡಲಾಗಿತ್ತು. ಸಂಪತ್ತಿನ ದಾಖಲೀಕರಣ ವೇಳೆಯಲ್ಲಿ ಸುಮಾರು ಸಾವಿರಾರು ಕೋಟಿ ರೂ. ಗಳಿಗಿಂತಲೂ ಅಧಿಕ ಮೌಲ್ಯದ ಚಿನ್ನಾಭರಣಗಳಿವೆ ಎಂದು ಅಂದಾಜಿಸಲಾಗಿತ್ತು. ತಪಾಸಣೆಯ ನಂತರ ದೇಗುಲದ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿತ್ತು.

ಸಮಿತಿಯು ದೇವಸ್ಥಾನದ ವಾರ್ಷಿಕ ಬಜೆಟ್ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ನೋಡಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ. ದೇವಸ್ಥಾನದ ಲೆಕ್ಕಪತ್ರ ಇಡಲು ಪರಿಣಾಮಕಾರಿ ವ್ಯವಸ್ಥೆ ಬೇಕು. ಅದಿಲ್ಲದಿರುವುದು ಆಡಳಿತ ಲೋಪ. ಭಕ್ತರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ವರದಿ ಹೇಳಿದೆ.