ಧಾರ್ಮಿಕ ಸಂಘರ್ಷ ದೇಶದ ದೊಡ್ಡ ಸಮಸ್ಯೆ

0
883

ಭ್ರಷ್ಟಾಚಾರಕ್ಕೆ ಸರ್ಕಾರ ಹೊಣೆ

ನೂತನ ಸಮೀಕ್ಷೆ ವರದಿ

ನವದೆಹಲಿ: ಭಾರತದಲ್ಲಿ ಬಡತನ, ಭ್ರಷ್ಟಾಚಾರದ ನಡುವೆ ಧಾರ್ಮಿಕ ಸಂಘರ್ಷವೂ ಗಹನ ಸಮಸ್ಯೆಯಾಗಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಶೇ 39ರಷ್ಟು ಜನರು ಬಡತನವೇ ಗಂಭೀರ ಸಮಸ್ಯೆ ಎಂದಿದ್ದರೆ, ಶೇ 32.7 ಮಂದಿ ಧಾರ್ಮಿಕ ಸಂಘರ್ಷ ಹಾಗೂ ಶೇ 31.1ರಷ್ಟು ಜನರು ಶೈಕ್ಷಣಿಕ ಕೊರತೆಯೇ ಸಮಸ್ಯೆಗೆ ಕಾರಣ ಎಂದಿದ್ದಾರೆ.

ಸಹಸ್ರಾರು ವರ್ಷಗಳಿಂದಲೂ ಭಾರತ ಧಾರ್ಮಿಕ ಸಂಘರ್ಷದ ಸಮಸ್ಯೆ ಎದುರಿಸುತ್ತಿದೆ. ಭ್ರಷ್ಟಾಚಾರದ ಸಮಸ್ಯೆ ಮತ್ತು ಪಾರದರ್ಶಕತೆ ಕೊರತೆಗೆ ಸರ್ಕಾರಗಳೇ ಕಾರಣ ಎಂದು ಶೇ 49.6ರಷ್ಟು ಜನರು ತಿಳಿಸಿರುವುದಾಗಿ ಡಬ್ಲ್ಯೂಇಎಫ್‍ನ ಗ್ಲೋಬಲ್ ಶೇಪರ್ಸ್ ವಾರ್ಷಿಕ ಸಮೀಕ್ಷೆ-2016 ವರದಿ ಮಾಡಿದೆ.

ಇಂತಹ ಸಮಸ್ಯೆಗಳನ್ನು ಯಾರು ಯಶಸ್ವಿಯಾಗಿ ಪರಿಹರಿಸಬಲ್ಲರು ಎಂಬ ಪ್ರಶ್ನೆಗೆ ಸ್ಥಳೀಯ ಸಮಸ್ಯಗಳನ್ನು ಸ್ವತಃ ಬಗೆಹರಿಸಿಕೊಳ್ಳಬಹುದು ಎಂದು ಶೇ 26, ಸರ್ಕಾರದ ಮೂಲಕ ಎಂದು ಶೇ 20 ಮಂದಿ ಉತ್ತರಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಾಡುವ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ಸಂಘಟನೆಗಳ ಮೂಲಕ ಬಗೆಹರಿಸಬಹುದು ಎಂದು ಶೇ. 26, ಸ್ವತಃ ಎಂದು ಶೇ 20ರಷ್ಟು ಜನರು ಅಭಿಪ್ರಾಯಪಟ್ಟಿರುವುದಾಗಿ ಸಮೀಕ್ಷೆ ಹೇಳಿದೆ.

181 ರಾಷ್ಟ್ರಗಳಲ್ಲಿ ಸರ್ವೆ

ಒಳನೋಟದ ಆಲೋಚನೆ, ಆದ್ಯತೆ, ಕಳವಳ ಕುರಿತು ಅಭಿಪ್ರಾಯ ಸಂಗ್ರಹಿಸಿಲು 181 ರಾಷ್ಟ್ರಗಳ 26 ಸಾವಿರ ಜನರನ್ನು ಸಂಪರ್ಕಿಸಲಾಗಿದೆ. ಕೇವಲ ಭಾರತ ಮಾತ್ರವಲ್ಲದೆ ಬಹುತೇಕ ರಾಷ್ಟ್ರಗಳಲ್ಲಿ ಬಡತನ ಹಾಗೂ ಧಾರ್ಮಿಕ ಸಂಘರ್ಷವೇ ದೊಡ್ಡ ಸಮಸ್ಯೆ ಎಂದು ಸಮೀಕ್ಷೆ ಹೇಳಿದೆ.

ಇನ್ನು ಉದ್ಯೋಗದ ವಿಷಯಕ್ಕೆ ಬಂದಾಗ ಶೇ 54ರಷ್ಟು ಮಂದಿ ಉತ್ತಮ ಸಂಬಳದ ಕೆಲಸ ಬಯಸುವುದಾಗಿ ಹೇಳಿದ್ದಾರೆ. ಶೇ 45ರಷ್ಟು ಜನರು ಬೆಳವಣಿಗೆ ದೃಷ್ಟಿಯಿಂದ, ಶೇ. 36 ಖಚಿತ ಉದ್ದೇಶಕ್ಕಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.