ನರಕಚತುರ್ದಶಿ ಯಂದು ಯಾರು ಅಭ್ಯಂಗ ಸ್ನಾನವನ್ನು ಮಾಡುವುದಿಲ್ಲವೋ, ಅವರಿಗೆ ನರಕ ಪ್ರಾಪ್ತಿಯಾಗುತ್ತದೆ

0
1524

ನರಕಚತುರ್ದಶಿ ಅಂದರೆ ಏನು?

killing-of-narakasura

ಶ್ರೀಕೃಷ್ಣನು ಈ ದಿನದಂದು ನರಕಾಸುರನನ್ನು ವಧಿಸಿದನು; ಆದುದರಿಂದ ಈ ದಿನವನ್ನು ನರಕಚತುರ್ದಶಿ ಎಂದು ಕರೆಯುತ್ತಾರೆ. ಇದರ ಅರ್ಥವು `ದುರ್ಜನ ಶಕ್ತಿಯ ಮೇಲೆ ಸಜ್ಜನ ಶಕ್ತಿಯ ವಿಜಯ’ ಎಂದಾಗುತ್ತದೆ. ಯಾವಾಗ ಸಜ್ಜನಶಕ್ತಿಯು ಜಾಗೃತಗೊಂಡು ಸಂಘಟಿತವಾಗಿ ಕಾರ್ಯ ಮಾಡುತ್ತದೆಯೋ ಆಗ ದುರ್ಜನ ಶಕ್ತಿಯ ಪ್ರಭಾವವು ಕಡಿಮೆಯಾಗುತ್ತದೆ. `ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿಯ ಅಸುರೀ ಪ್ರವೃತ್ತಿ ಹಾಗೂ ವಿಧ್ವಂಸಕ ಪ್ರವೃತ್ತಿಯನ್ನು ಕಡಿಮೆ ಮಾಡಿ ದೈವೀಪ್ರವೃತ್ತಿಯನ್ನು ಸ್ಥಾಪಿಸಬೇಕು. ಇದರಿಂದ ಮುಂದೆ ಸಮಾಜ ಹಾಗೂ ರಾಷ್ಟ್ರದ ಮೇಲೆ ಪರಿಣಾಮವಾಗುತ್ತದೆ.’ ಸಜ್ಜನವ್ಯಕ್ತಿಗಳು ಸಂಘಟಿತರಾಗಿ ತಮ್ಮ ಜ್ಞಾನದ ಲಾಭವನ್ನು ಸಮಾಜಕ್ಕೆ ನೀಡಬೇಕು. ಈ ವಿಷಯವೇ ನರಕ ಚರ್ತುದಶಿಯಿಂದ ಕಂಡುಬರುತ್ತದೆ.

ಶ್ರೀ ಪುರಾಣದಲ್ಲಿ ನರಕಚತುರ್ದಶಿಗೆ ಒಂದು ಕಥೆಯಿದೆ – ‘ಒಂದು ಕಾಲದಲ್ಲಿ ಪ್ರಾಗ್ಜ್ಯೋತಿಷಪುರದಲ್ಲಿ ನರಕಾಸುರ ಎಂಬ ಬಲಿಷ್ಠ ಅಸುರನು ರಾಜ್ಯವಾಳುತ್ತಿದ್ದನು. ಮಾನವರಿಗೆ ಮತ್ತು ದೇವತೆಗಳಿಗೆ ಇವನು ತುಂಬಾ ಕಾಟ ಕೊಡುತ್ತಿದ್ದನು. ಅದರಲ್ಲೂ ಈ ದುಷ್ಟನು ಸ್ತ್ರೀಯರಿಗೆ ತುಂಬಾ ಕಾಟ ಕೊಡಲಾರಂಭಿಸಿದ್ದನು. 15 ಸಾವಿರಕ್ಕೂ ಹೆಚ್ಚು ರಾಜ ಕನ್ಯೆಯರನ್ನು ಅಪಹರಿಸಿ ತಂದು, ಅವರನ್ನು ಸೆರೆಮನೆಯಲ್ಲಿ ಇಟ್ಟು, ಅವರನ್ನು ಮದುವೆಯಾಗಲು ಮುಂದಾದಾಗ. ಇದರಿಂದ ಎಲ್ಲೆಡೆ ಹಾಹಾಕಾರವಾಗತೊಡಗಿತು. ಶ್ರೀಕೃಷ್ಣನಿಗೆ ಈ ವಿಷಯ ತಿಳಿದಾಕ್ಷಣ ಸತ್ಯಭಾಮೆಯೊಂದಿಗೆ ಅಸುರನ ವಿರುದ್ಧ ಯುದ್ಧ ಸಾರಿದನು. ನರಕಾಸುರನನ್ನು ತನ್ನ ಸುವರ್ಣ ಚಕ್ರದಿಂದ ವಧಿಸಿ, ಅವನು ಬಂಧಿಸಿಟ್ಟ ರಾಜ ಕನ್ಯೆಯರನ್ನು ಬಂಧಮುಕ್ತಗೊಳಿಸಿದನು.

ತನ್ನ ಕೊನೆಯುಸಿರು ಎಳೆಯುವಾಗ ನರಕಾಸುರನು ಶ್ರೀ ಕೃಷ್ಣನಲ್ಲಿ ಒಂದು ವರವನ್ನು ಕೇಳಿ ಪಡೆದುಕೊಂಡನು. ‘ಈ ದಿನ (ತಿಥಿಯಂದು) ಯಾರು ಅಭ್ಯಂಗ(ಎಣ್ಣೆಹಚ್ಚಿ) ಸ್ನಾನವನ್ನು ಮಾಡುವರೋ, ಅವರಿಗೆ ನರಕ ಪ್ರಾಪ್ತಿಯಾಗಬಾರದು’ ಎಂಬುವುದು ಆ ವರವಾಗಿತ್ತು. ಚತುರ್ದಶಿಯಂದು ನರಕಾಸುರನನ್ನು ವಧಿಸಿ, ಆವನ ರಕ್ತವನ್ನು ತನ್ನ ಹಣೆಗೆ ಹಚ್ಚಿಕೊಂಡು ಮನೆಗೆ ಮರಳಿದ ಶ್ರೀಕೃಷ್ಣನಿಗೆ ನಂದನು ಅಭ್ಯಂಗ ಸ್ನಾನ ಮಾಡಿಸಿದನು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ, ಜನರು ಈ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.

ನರಕಚತುರ್ದಶಿ ಎಂದರೆ ನರಕರೂಪೀ ವಾಸನೆಗಳನ್ನು ಹಾಗೂ ಅಹಂಕಾರದ ಉಚ್ಚಾಟನೆಯನ್ನು ಮಾಡಿ ಆತ್ಮಜ್ಯೋತಿಯನ್ನು ಪ್ರಕಾಶಿಸುವ ದಿನವೂ ಆಗಿದೆ. ನರಕ ಚತುರ್ದಶಿಯಂದು ಮಧ್ಯರಾತ್ರಿ ಅಲಕ್ಷ್ಮೀಯನ್ನು ತೊಲಗಿಸಿ ನಮ್ಮಲ್ಲಿರುವ ನರಕರೂಪೀ ಪಾಪವಾಸನೆಗಳ ನಾಶ ಹಾಗೂ ಅಹಂಕಾರದ ಉಚ್ಚಾಟನೆ ಮಾಡುವುದಿರುತ್ತದೆ. ಆಗಲೇ ಆತ್ಮದ ಮೇಲಿನ ಅಹಂಭಾವದ ಪರದೆಯು ದೂರವಾಗಿ ಆತ್ಮಜ್ಯೋತಿಯು ಪ್ರಕಾಶಮಾನಾಗಿ ಬೆಳಗುತ್ತದೆ.