ನೀರೂ ಬಿಡಿ, ಕಾವೇರಿ ನಿರ್ವಹಣಾ ಅಧಿಕಾರವನ್ನೂ ಬಿಡಿ ಎಂದ ಸುಪ್ರೀಂ

0
626

ನವದೆಹಲಿ: ಕಾವೇರಿ ನದಿ ಹಂಚಿಕೆ ವಿವಾದದಲ್ಲಿ ಏಟಿನ ಮೇಲೆ ಏಟು ತಿನ್ನುತ್ತಿರುವ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಛಡಿಯೇಟು ಬೀಸಿದೆ.

ಮಂಗಳವಾರ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳ ಗೊಂಡ ಸುಪ್ರೀಂಕೋರ್ಟ್ ವಿಭಾಗೀಯ ಪೀಠ, ಸೆಪ್ಟೆಂ ಬರ್ ೨೧ರಿಂದ ೨೭ರವರೆಗೆ ಪ್ರತಿದಿನ ೬ ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚಿಸಿದೆ.

ಇದರಿಂದ ಕಾವೇರಿ ಮೇಲುಸ್ತುವಾರಿ ಸಮಿತಿ ಸೋಮ ವಾರ ೧೦ ದಿನ ೩ ಸಾವಿರ ಕ್ಯೂಸೆಕ್ಸ್ ನಂತೆ ೩೦ ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸೂಚಿಸಿತ್ತು. ಇದೀಗ ಸುಪ್ರೀಂಕೋರ್ಟ್ ೭ ದಿನ ೬ ಸಾವಿರ ಕ್ಯೂಸೆಕ್ಸ್ ನಂತೆ 42 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗಿದೆ. ಅಂದರೆ ಒಟ್ಟಾರೆ ಹೆಚ್ಚುವರಿಯಾಗಿ 12 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗಿದೆ

ಇದೇ ವೇಳೆ ೪ ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಅಧಿಸೂಚನೆ ಹೊರಡಿಸುವಂತೆ ಆದೇಶಿಸಿದೆ.

ಏನಿದು ನಿರ್ವಹಣಾ ಮಂಡಳಿ?

ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಅಸ್ತಿತ್ವಕ್ಕೆ ಬರಲಿ ರುವ ಕಾವೇರಿ ನಿರ್ವಹಣಾ ಮಂಡಳಿ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ.
ನಿರ್ವಹಣಾ ಮಂಡಳಿ ರಚನೆಯಾದರೆ, ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳ ಉಸ್ತುವಾರಿ ಅಧಿಕಾರ ರಾಜ್ಯ ಸರಕಾರದ ಹಿಡಿತದಿಂದ ಜಾರಿ ಕೇಂದ್ರ ಸರಕಾರಕ್ಕೆ ಸಿಗಲಿದೆ.
ಈ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸದಸ್ಯರನ್ನೂ ಕೇಂದ್ರ ಸರಕಾರವೇ ನೇಮಿಸಲಿದೆ. ಇದರಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರು, ಮುಖ್ಯ ಕಾರ್ಯದರ್ಶಿ, ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ಸರಕಾರದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳು, ಪರಿಸರ ತಜ್ಞರು ಕಾರ್ಯ ನಿರ್ವಹಿಸಲಿದ್ದಾರೆ.