ಪೌಷ್ಟಿಕಾಂಶದ ಸಾಗರ ಗಿಣ್ಣು!!!

0
1968

ತಾಯಿಯ ಮೊದಲ ಹಾಲು ಮಗುವಿಗೆ ಎಷ್ಟು ಶ್ರೇಷ್ಠವೋ ಹಸು/ಎಮ್ಮೆಯ ಮೊದಲ ಹಾಲು ಕೂಡ ಅಷ್ಟೇ ಶ್ರೇಷ್ಠ. ಹಸುವಿನ ಹಾಲು ಹೆಚ್ಚು ಬಿಳುಪಾಗಿರುತ್ತದೆ. ಎಮ್ಮೆಯ ಹಾಲು ನಸುಹಳದಿ ಬಣ್ಣ ಹೊಂದಿರುತ್ತದೆ. ಎಳಗಂದಿ ಹಾಲು ಎಂದು ಕರೆಯಲ್ಪಡುವ ಈ ಹಾಲು ಹೆಚ್ಚು ಹಳದಿಬಣ್ಣದಿಂದ ಕೂಡಿದ್ದು ಆಧಿಕ ಪೌಷ್ಟಿಕಾಂಶ ಹೊಂದಿರುತ್ತದೆ. ಇದನ್ನು ಕಾಯಿಸಿ, ಹೆಪ್ಪು ಹಾಕಲು ಬಾರದ್ದರಿಂದ (ಕಾಯಿಸಿದರೆ ಒಡೆದುಹೋಗುತ್ತದೆ) ಬೆಲ್ಲ, ಮೇಲೆ ಇನ್ನಷ್ಟು ಹಾಲು, ರವೆ, ಅವಲಕ್ಕಿ , ಏಲಕ್ಕಿ ಮುಂತಾದುವನ್ನು ಸೇರಿಸಿ `ಗಿಣ್ಣು’ ಎಂಬ ರುಚಿಕರ ಖಾದ್ಯ ತಯಾರಿಸಲಾಗುತ್ತದೆ. ಪಲ್ಯದ ಹದ, ಹಲ್ವದ ಮಾದರಿಯಲ್ಲಿ (ಚಟ್ಟಿ ಗಿಣ್ಣು, ಉದುರು ಗಿಣ್ಣು) ತಯಾರಿಸಲ್ಪಡುವ ಗಿಣ್ಣನ್ನು ನೆನೆಸಿಕೊಂಡರೆ ಬಾಯಲ್ಲಿ ನೀರೂರುವಷ್ಟು ರುಚಿಕರವಾಗಿರುತ್ತದೆ.ಕನ್ನಡದಲ್ಲಿ ಗಿಣ್ಣು, ತೆಲುಗಿನಲ್ಲಿ ಜುನ್ನು, ಮರಾಠಿಯಲ್ಲಿ ಕರ್ವಸ್ ಎಂದು ಕರೆಯಲ್ಪಡುವ ಈ ಖಾದ್ಯವನ್ನು ಹಸುವಿನ ಮೊದಲ ಹಾಲಿನಿಂದ ತಯಾರು ಮಾಡುತ್ತಾರೆ.

ಕರು ಹಾಕಿದ ಐದು ದಿನಗಳಲ್ಲಿ ದೊರೆಯುವ ಹಾಲು ತುಂಬ ಪೌಷ್ಟಿಕವಾಗಿದ್ದು, ಆ ಹಾಲಿನಿಂದ ಗಿಣ್ಣು ತಯಾರಿಸುತ್ತಾರೆ. ಇದರಲ್ಲಿ ಪ್ರೋಟೀನು, ಕೊಬ್ಬು, ಖನಿಜಗಳ ಜೊತೆಗೆ ಅಪಾರ ರೋಗನಿರೋಧಕ ಅಂಶಗಳಿರುತ್ತವೆ.ಕರು ಹಾಕಿದ ಸುಮಾರು ಹತ್ತು ದಿವಸಗಳವರೆಗಿನ ಹಾಲನ್ನು ಗಿಣ್ಣು ಮಾಡಲಷ್ಟೇ ಬಳಸಲಾಗುತ್ತದೆ. ಆದರೆ ಈ ಹಾಲಿನ ಜೊತೆಗೆ ಮೊದಲ ಬಾರಿ ಕರೆದ ಹಾಲನ್ನು ಸೇರಿಸಿಯೇ ಗಿಣ್ಣು ತಯಾರಿಸಬೇಕು. `ಗೀಬು ಹಾಲು/ಗಿಣ್ಣು ಹಾಲು’ ಎಂದು ಕರೆಯಲ್ಪಡುವ ತುಂಬ ಗಟ್ಟಿ ಇರುವ ಮೊದಲ ಹಾಲನ್ನು ಇದೇ ಉದ್ದೇಶಕ್ಕೆ ಚೆನ್ನಾಗಿ ಒಣಗಿಸಿ ಇಟ್ಟುಕೊಳ್ಳಲಾಗುತ್ತದೆ, ಹತ್ತು ದಿನದ ನಂತರ ಹಾಲನ್ನು ಮೊಸರು, ಕಾಫಿಗೆ ಬಳಸಿದರೂ ಒಂದು ಆ ಹಾಲಿನ ಮೊಸರಿಗೆ ಉಪ್ಪು ಬಳಸುವುದಿಲ್ಲ.ಎಳಗಂದಿ ಹಾಲು ಎಂದು ಕರೆಯಲ್ಪಡುವ ಈ ಹಾಲು ಸೇವಿಸಿದರೆ ಶೀತವೆಂದು ಮಕ್ಕಳಿಗೆ ಕೊಡುವುದಿಲ್ಲ. ಎಮ್ಮೆಯ ಹಾಲಿನ ಗಿಣ್ಣು ಕೂಡ ಬೇಗ ಶೀತ ಆಗುವವರಿಗೆ ಒಗ್ಗುವುದಿಲ್ಲ. ದೇಸಿ ೀ ಖಾದ್ಯಗಳಲ್ಲಿ ಒಂದಾದ, ಅದ್ಭುತ ರುಚಿ ಇರುವ ಗಿಣ್ಣು ಸೇವಿಸುವ ಅವಕಾಶ ದೊರೆತರೆ, ರುಚಿ ನೋಡಿ ಮಜಾ ಮಾಡಿ.