ಪೆಲೆಟ್ ಗನ್ ಬದಲಿಗೆ ಮೆಣಸಿನ ಪುಡಿ ತುಂಬಿದ ಗ್ರೇನೆಡ್ (ಪಾವಾ) ಬಳಕೆ

0
762

ನವದೆಹಲಿ ಹಿಂಸಾಚಾರಪೀಡಿತ ಕಾಶ್ಮೀರ ಕಣಿವೆಯಲ್ಲಿ ಗಲಭೆಕೋರರನ್ನು ನಿಯಂತ್ರಿಸಲು ಪೆಲೆಟ್ ಗನ್‍ಗಳ ಬದಲಾಗಿ ಮೆಣಸಿನ ಪುಡಿ ತುಂಬಿದ ಗ್ರೇನೆಡ್ (ಪಾವಾ) ಬಳಕೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಶನಿವಾರ ಸಮ್ಮತಿ ನೀಡಿದ್ದಾರೆ. ಪ್ರಕ್ಬುಬ್ಧಪೀಡಿತ ಕಾಶ್ಮೀರ ಪರಿಸ್ಥಿತಿ ಅರಿಯಲು ತಮ್ಮ ನೇತೃತ್ವದ ಸರ್ವ ಪಕ್ಷ ನಿಯೋಗ ಭಾನುವಾರ ಭೇಟಿ ನೀಡುವ ಮೊದಲೇ ಮೆಣಸಿನ ಪುಡಿಯ ಗ್ರೇನೆಡ್ ಬಳಕೆಗೆ ಒಪ್ಪಿಗೆ ಕೊಟ್ಟಿದ್ದಾರೆ.

© kannadaprabha
© kannadaprabha

ಪೆಲೆಟ್ ಗನ್‍ಗೆ ಪರ್ಯಾಯವಾಗಿ ನಾನಿವಾಮಿಡೆ ಎಂದು ಕರೆಯುವ ಪೆಲರ್ಗೊನಿಕ್ ಆಸಿಡ್ ವನ್ನಿಲ್ಲಿ ಬಳಸುವುದಕ್ಕೆ ಸಂಬಂಧಿಸಿದ ಕಡತಕ್ಕೆ ಗೃಹ ಸಚಿವರು ಅನುಮೋದನೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಂಥ ಸಾವಿರ ಶೆಲ್‍ಗಳು ಭಾನುವಾರ ಕಾಶ್ಮೀರ ಕಣಿವೆಗೆ ತಲುಪಲಿವೆ ಎಂದೂ ವಿವರಿಸಿವೆ. ಗೃಹಸಚಿವರು ಕಾಶ್ಮೀರಕ್ಕೆ ಆಗಸ್ಟ್ 24-25ರಂದು ಭೇಟಿ ನೀಡಿದ ಸಮಯದಲ್ಲಿ ಮುಂಬರುವ ದಿನಗಳಲ್ಲಿ ಪೆಲೆಟ್ ಗನ್ ಬದಲಾಗಿ ಬೇರೊಂದು ವಸ್ತುವನ್ನು ಭದ್ರತಾಪಡೆಗಳಿಗೆ ನೀಡಲಾಗುವುದೆಂದು ತಿಳಿಸಿದ್ದರು. ಆದರೆ, ಪೆಲೆಟ್ ಗನ್‍ಗಳಿಗೆ ಸಂಪೂರ್ಣ ನಿಷೇಧ ಹೇರುವುದಿಲ್ಲ. ಅತ್ಯಪೂರ್ವ ಪ್ರಕರಣಗಳಲ್ಲಿ ಪೆಲೆಟ್ ಗನ್‍ಗಳನ್ನು ಬಳಸಲಾಗುವುದೆಂದೂ ಸ್ಪಷ್ಟಪಡಿಸಿದ್ದರು. ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿ.ವಿ.ಎಸ್ ಪ್ರಸಾದ್ ನೇತೃತ್ವದ ಏಳು ಸದಸ್ಯರ ತಜ್ಞರ ಸಮಿತಿ ಆಗಸ್ಟ್ 29ರಂದು ಸಲ್ಲಿಸಿರುವ ವರದಿಯಲ್ಲಿ ಮೆಣಸಿನ ಪುಡಿ ಗ್ರೇನೆಡ್ ಬಳಕೆಗೆ ಶಿಫಾರಸು ಮಾಡಿತ್ತು. ಕಣಿವೆಯಲ್ಲಿ ಪೆಲೆಟ್ ಗನ್ ಬಳಕೆಯಿಂದ ಕುರುಡರಾಗುವ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಿದ ನಂತರ ಈ ಸಮಿತಿ ರಚಿಸಲಾಗಿತ್ತು. ಮೆಣಸಿನ ಪುಡಿಯ ಗ್ರೇನೆಡ್ ಮಾರಕವಲ್ಲದ ಸಾಧನವಾಗಿದ್ದು, ಜನರ ಗುಂಪನ್ನು ಚದುರಿಸಲು ಉಪಯೋಗಿಸುವ ತಾತ್ಕಾಲಿಕ ತಂತ್ರವಷ್ಟೇ ಆಗಿದೆ. ಲಖನೌ ನಗರದಲ್ಲಿರುವ ಭಾರತೀಯ ವಿಷಶಾಸ್ತ್ರ ಅಧ್ಯಯನ ಸಂಸ್ಥೆಯು ಮೆಣಸಿನಪುಡಿ ಗ್ರೇನೆಡ್ ಕುರಿತಾಗಿ ಕಳೆದೊಂದು ವರ್ಷ ಪ್ರಯೋಗ ನಡೆಸಿದೆ. ಕಾಶ್ಮೀರದ ಪರಿಸ್ಥಿತಿ ಉಲ್ಬಣಕ್ಕೇರುವ ಸಂದರ್ಭದಲ್ಲೇ ಈ ಗ್ರೇನೆಡ್ ಅಭಿವೃದ್ಧಿ ಕಂಡಿದೆ.