ಬಾಡಿಗೆ ತಾಯ್ತನ ವ್ಯಾಪಾರವಲ್ಲ

0
1077

ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ನವದೆಹಲಿ: ಬಾಡಿಗೆ ತಾಯ್ತನ ಇನ್ನು ಮುಂದೆ ವ್ಯಾಪಾರವಲ್ಲ. ಬಾಡಿಗೆ ತಾಯಂದಿರ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕಾನೂನಿನ ಕರಡನ್ನು ಬುಧವಾರ ಅಂಗೀಕರಿಸಿದೆ. ಈ ಮೂಲಕ ಬಾಡಿಗೆ ತಾಯ್ತನದ ವಾಣಿಜ್ಯೀಕರಣಕ್ಕೆ ಕಡಿವಾಣ ಹಾಕಿದೆ.

ಸಂಪುಟ ಅಂಗೀಕರಿಸಿರುವ ನೂತನ ಕಾನೂನಿನ ಪ್ರಕಾರ, ಇನ್ನು ಮುಂದೆ ಬಾಡಿಗೆ ತಾಯ್ತನಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ. ಒಂದು ವೇಳೆ ಬಂಜೆತನ ಕಾಡಿದರೆ ಮಾತ್ರ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದು. ಇದಕ್ಕೂ ಕೆಲ ನಿಯಮಗಳನ್ನು ಅನುಸರಿಸಬೇಕಿದೆ. ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ದಂಪತಿ ತಮ್ಮ ಹತ್ತಿರದ ಸಂಬಂಧಿರಕನ್ನು ಮಾತ್ರ ಬಾಡಿಗೆ ತಾಯಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲದೆ ಮಗು ಪಡೆಯು ದಂಪತಿ ಆಕೆಯ ವೈದ್ಯಕೀಯ ಖರ್ಚು ವೆಚ್ಚ ಭರಿಸಬೇಕಾಗುತ್ತದೆ.

ಆದರೆ ಕರಡು ಮಸೂದೆಯಲ್ಲಿ ದಂಪತಿ ಆಯ್ಕೆ ಮಾಡಿಕೊಳ್ಳಬಹುದಾದ ಹತ್ತಿರದ ಸಂಬಂಧಿಸಕರು ಯಾರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಇದೇವೇಳೆ ಮಹಿಳೆಯ ಶೋಷಣೆ ತಡೆಯಲು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ಬುಡಕಟ್ಟು ಜನಾಂಗದ ಸ್ತ್ರೀಯರಿಗೆ ತೊಂದರೆಯಾಗುವುದನ್ನು ತಪ್ಪಿಸಲು ವಿದೇಶಿಗರು ನಮ್ಮ ದೇಶದಲ್ಲಿ ಬಾಡಿಗೆ ತಾಯಂದಿರಿಂದ ಮಗು ಪಡೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ

Picture1

ಬಾಡಿಗೆ ತಾಯಂದಿರ ಪ್ರಕರಣಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ಸ್ಥಾಪಿಸಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಕರಡು ಮಸೂದೆಯಲ್ಲಿ ಸಿಂಗಲ್ ಪೇರೆಂಟ್, ಅವಿವಾಹಿತರು, ಸಲಿಂಗಿಗಳಿಗೆ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ನಿರ್ಬಂಧ ವಿಧಿಸಲಾಘಿದೆ. ಬಾಡಿಗೆ ತಾಯಂದಿರ ಮೂಲಕ ಮಗು ಪಡೆಯಬೇಕಾದರೆ ಆ ದಂಪತಿಗಳು ವಿವಾಹವಾಗಿ ಕನಿಷ್ಠ 5 ವರ್ಷಗಳಾಗಿರಬೇಕು ಎಂಬ ನಿಯಮ ವಿಧಿಸಲಾಗಿದೆ. ಅಂಗೀಕಾರವಾಗಿರುವ ಕರಡು ಮಸೂದೆ ಸಂಸತ್‍ನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ.