ಮೊದಲಬಾರಿ ಈ ಮೂವರ ಜೊತೆ ಬಾಹ್ಯಾಕಾಶಕ್ಕೆ ಜಿಗಿದ ಗಗನನೌಕೆ

0
1806

ಬೈಕನೂರ್, ಕಜಕಸ್ತಾನ (ಪಿಟಿಐ): ಮೇಲ್ದರ್ಜೆಗೇರಿಸಿದ ರಷ್ಯಾದ ಸೊಯುಜ್ ಗಗನನೌಕೆಯು ಮೂವರು ಬಾಹ್ಯಾಕಾಶ ಯಾತ್ರಿಗಳನ್ನು ಹೊತ್ತು ಗುರುವಾರ ಬೆಳಿಗ್ಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಚಿಮ್ಮಿತು.

ಈಗಾಗಲೇ ಎರಡು ಬಾರಿ ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದ ರಷ್ಯಾ ಬಾಹ್ಯಾಕಾಶ ಸಂಸ್ಥೆಯ ಅನಾಟೊಲಿ ಇವಾನಿಶಿನ್ ಅವರ ಜತೆ ನಾಸಾದ ಕ್ಯಾಥಲೀನ್ ರೂಬಿನ್ಸ್ ಹಾಗೂ ಜಪಾನ್ ಬಾಹ್ಯಾಕಾಶ ಸಂಸ್ಥೆಯ ಟಕುಯಾ ಒನಿಷಿ ಮೊದಲ ಬಾರಿ ಬಾಹ್ಯಾಕಾಶ ಪ್ರಯಾಣ ಕೈಗೊಂಡರು.ಇವರು ನಾಲ್ಕು ತಿಂಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸಲಿದ್ದಾರೆ.

ರಷ್ಯಾ ಬಾಹ್ಯಾಕಾಶ ಸಂಸ್ಥೆಯ ಸಾಫ್ಟ್ ವೇರ್ ಪರೀಕ್ಷೆ ಬಾಕಿಯಿದ್ದ ಕಾರಣ ಇವರ ಪ್ರಯಾಣ ಎರಡು ವಾರ ವಿಳಂಬವಾಗಿತ್ತು. ಹೊಸ ಸೊಯುಜ್ ನೌಕೆಯ ಬೂಸ್ಟರ್ಗಳನ್ನು ಈ ಬಾರಿ ಮೇಲ್ದರ್ಜೆಗೇರಿಸಲಾಗಿದೆ. ಜತೆಗೆ ಪಥದರ್ಶಕ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಪಡಿಸಲಾಗಿದೆ. ನೌಕೆಯ ಸೌರ ಫಲಕದ ಕೋಶಗಳ ಶಕ್ತಿಯನ್ನು ಹೆಚ್ಚಿಸಲಾಗಿದೆ.

ಅಣುಜೀವವಿಜ್ಞಾನ ತಜ್ಞೆಯೂ ಆಗಿರುವ ರೂಬಿನ್ಸ್ ಅವರು 2009ರಲ್ಲಿ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದರು. ಬಾಹ್ಯಾಕಾಶದಲ್ಲಿದ್ದುಕೊಂಡು ಡಿಎನ್‌ಎ ಅಧ್ಯಯನ ಕೈಗೊಳ್ಳಲಿರುವ ಮೊದಲ ಮಹಿಳೆ ಎಂಬ ಶ್ರೇಯವೂ ರೂಬಿನ್ಸ್ ಅವರಿಗೆ ಸಲ್ಲಲಿದೆ. ಜಪಾನ್ನ 11ನೇ ಬಾಹ್ಯಾಕಾಶ ಗಗನಯಾನಿಯಾಗಿ ತೆರಳಿರುವ ಒನಿಶಿ ಅವರು, ಪೈಲಟ್ ತರಬೇತಿಯನ್ನು ಪಡೆದಿದ್ದಾರೆ. ಜಪಾನ್ ಬಾಹ್ಯಾಕಾಶ ಸಂಸ್ಥೆಯ ಕಿಬೊ ಯೋಜನೆಯ ಪ್ರಯೋಗಗಳಲ್ಲಿ ಇವರು ಭಾಗಿಯಾಗಲಿದ್ದಾರೆ.

ಫ್ಲೈಟ್ ಎಂಜಿನಿಯರ್ ಇವಾನಿಶಿನ್ ಅವರು 2011 ಮತ್ತು 2012ರಲ್ಲಿ 165 ದಿನಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು 1998ರಿಂದಲೂ ಭೂಮಿಯನ್ನು ಗಂಟೆಗೆ 28 ಸಾವಿರ ಕಿಲೋಮೀಟರ್ ವೇಗದಲ್ಲಿ ಸುತ್ತುಹಾಕುತ್ತಿದೆ.