ಬ್ರೇಕಿಂಗ್ ನ್ಯೂಸ್ : ಶಾಸಕ ಸ್ಥಾನಕ್ಕೆ ಅಂಬರೀಷ್‌ ರಾಜೀನಾಮೆ

0
1885

ಬೆಂಗಳೂರು: ಸಚಿವ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ಅಸಮಾಧಾನಗೊಂಡು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕ ಅಂಬರೀಷ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಉಪ ಸಭಾಪತಿ ಶಿವಶಂಕರರೆಡ್ಡಿ ಅವರಿಗೆ ತಮ್ಮ ಆಪ್ತ  ಕಾರ್ಯದರ್ಶಿ ಎಸ್‌.ಶ್ರೀನಿವಾಸ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯ ವಿಧಾನಸಭಾ ಶಾಸಕನಾಗಿರುವ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಆದರೆ ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎನ್ನುವುದನ್ನು ಅವರು ಈ ಪತ್ರದಲ್ಲಿ ಉಲ್ಲೇಖಿಸಿಲ್ಲ.

ಸಿಎಂಗೆ ಪತ್ರಸಚಿವ ಸ್ಥಾನದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಸಿಎಂಗೆ ಪತ್ರ ಬರೆದ ಅಂಬರೀಷ್, ಸಂಪುಟದಿಂದ ಕೈಬಿಡುವ ಬಗ್ಗೆ ಕನಿಷ್ಟ ಸೌಜನ್ಯಕ್ಕೆ ತಿಳಿಸಬೇಕಿತ್ತು. ಹೀಗಾಗಿ ನಾನು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಮನಸ್ಸು ಒಪ್ಪುತ್ತಿಲ್ಲ ಎಂದು ತಮ್ಮ ಅಸಮಾಧಾನವನ್ನು ತಿಳಿಸಿದ್ದಾರೆ.

ರಾಜೀನಾಮೆ ಪತ್ರ ಸ್ವೀಕರಿಸಲು ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿ ನಿರಾಕರಿಸಿದ್ದಾರೆ. ಶಾಸಕರೇ ಖುದ್ದು ಆಗಮಿಸಿ ರಾಜೀನಾಮೆ ನೀಡಬೇಕು, ರಾಜೀನಾಮೆಗೆ ಸರಿಯಾದ ಕಾರಣ ಕೊಡಬೇಕು, ಆಪ್ತ ಸಹಾಯಕರ ಮೂಲಕ ಕಳುಹಿಸಿದರೆ ಅದು ಅಂಗೀಕರಿಸಲು ಆಗುವುದಿಲ್ಲ ಎಂದು ಅಂಬಿ ಆಪ್ತ ಸಹಾಯಕ ಶ್ರೀನಿವಾಸ್‍ಗೆ ಸೂಚನೆ ನೀಡಿದ್ದಾರೆ.