ಬ್ರೇಕಿಂಗ್ ನ್ಯೂಸ್ : ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ರಮ್ಯಾ?

0
1275

ಬೆಂಗಳೂರು, ಜೂನ್ 20 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಮಾಡಿ 13 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಸದ್ಯ, ಸಂಪುಟದಲ್ಲಿ ಒಂದು ಸಚಿವ ಸ್ಥಾನ ಖಾಲಿ ಇದೆ. ಒಕ್ಕಲಿಗ ಸಮುದಾಯಕ್ಕೆ ಈ ಹುದ್ದೆ ನೀಡಲಾಗುತ್ತದೆ ಎಂಬುದು ಸದ್ಯದ ಮಾಹಿತಿ.

ಒಕ್ಕಲಿಗ ಸಮುದಾಯದ ಕಿಮ್ಮನೆ ರತ್ನಾಕರ ಮತ್ತು ಅಂಬರೀಶ್ ಅವರನ್ನು ಸಂಪುಟದಿಂದ ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ. ಆದ್ದರಿಂದ, ಖಾಲಿ ಇರುವ ಒಂದು ಸಚಿವ ಸ್ಥಾನವನ್ನು ಈ ಸಮುದಾಯಕ್ಕೆ ನೀಡಲಾಗುತ್ತದೆ ಎಂಬುದು ಲೆಕ್ಕಾಚಾರ.

ಅಚ್ಚರಿ ಎಂದರೆ ಮಾಜಿ ಸಂಸದೆ ಮತ್ತು ನಟಿ ರಮ್ಯಾ ಅವರ ಹೆಸರು ಸ್ಥಾನಕ್ಕೆ ಕೇಳಿಬರುತ್ತಿದೆ.

ರಮ್ಯಾ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಸಂಪುಟ ಪುನಾರಚನೆ ಮಾಡುವ ಸಿದ್ದರಾಮಯ್ಯ ಅವರು ಅಸಮರ್ಥ ಸಚಿವರನ್ನು ಕೈ ಬಿಟ್ಟು ರಮ್ಯಾ ಅವರಿಗೆ ಅವಕಾಶ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಪ್ರಸ್ತಾಪಕ್ಕೆ ಹೈಕಮಾಂಡ್ ಒಪ್ಪಿಗೆ ಸಿಕ್ಕಿದಿಯೇ?

ವಿಧಾನಪರಿಷತ್ ನಾಮನಿರ್ದೇಶನದ ಬಗ್ಗೆ ಸಿದ್ದರಾಮಯ್ಯ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ರಮ್ಯಾ ಅವರನ್ನು ಪರಿಷತ್ತಿಗೆ ಕರೆತಂದು, ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಭಾನುವಾರ ಹಬ್ಬಿದೆ.

ವಿಧಾನಪರಿಷತ್ ಸದಸ್ಯರಾಗಿದ್ದ ಜಗ್ಗೇಶ್ ಮತ್ತು ಕೃಷ್ಣಭಟ್ ಅವರ ಅವಧಿ ಫೆಬ್ರವರಿ ಮೊದಲ ವಾರಕ್ಕೆ ಪೂರ್ಣಗೊಂಡಿದ್ದು, ಅವರು ನಿವೃತ್ತರಾಗಿದ್ದಾರೆ. ಅಂದಿನಿಂದಲೂ ಎರಡು ಸ್ಥಾನಗಳು ಖಾಲಿ ಇವೆ. ಈ ಸ್ಥಾನಗಳಿಗೆ ಇಬ್ಬರನ್ನು ನಾಮಕರಣ ಮಾಡುವ ಹೊಣೆ ಸಿದ್ದರಾಮಯ್ಯ ಅವರ ಹೆಗಲ ಮೇಲಿದೆ.

ಕೆಲವು ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ. ರಮ್ಯಾ ಅವರನ್ನು ಸಚಿವರನ್ನಾಗಿ ಮಾಡಿ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ಅವರಿಗೆ ನೀಡಲಾಗುತ್ತದೆ ಎಂಬುದು ಸದ್ಯದ ಮಾಹಿತಿ.

Source: kannada.oneindia