ಪರ್ರೀಕರ್ ಗೆ ರಮ್ಯಾ ಟಾಂಗ್: ಪಾಕ್ ನರಕವಲ್ಲ, ಒಳ್ಳೆಯ ದೇಶ

0
907

ಮಂಡ್ಯ: ಪಾಕಿಸ್ತಾನಕ್ಕೆ ಹೋಗುವುದು ಎಂದರೆ ನರಕಕ್ಕೆ ಹೋದಂತೆ ಎಂಬುದಾಗಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಪಾಕಿಸ್ತಾನದ ಜನ ತುಂಬಾ ಒಳ್ಳೇಯವರು. ಪರ್ರೀಕರ್ ಹೇಳಿದ ರೀತಿ ಪಾಕ್ ನರಕ ಅಲ್ಲ ಎಂದು ನಟಿ, ಮಾಜಿ ಸಂಸದೆ ರಮ್ಯಾ ಟಾಂಗ್ ನೀಡಿದ್ದಾರೆ.

ಶನಿವಾರ ಮಂಡ್ಯದಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಾನು ಪಾಕಿಸ್ತಾನಕ್ಕೆ ಹೋಗಿದ್ದಾಗ ಅಲ್ಲಿನ ಜನ ನನ್ನ ಚೆನ್ನಾಗಿಯೇ ನೋಡಿಕೊಂಡರು. ಪಾಕ್ ನಲ್ಲಿ ಎಲ್ಲವೂ ಸರಿಯಿದೆ, ಎಲ್ಲರೂ ಸಹಕರಿಸುತ್ತಾರೆ ಎಂದು ಹೇಳಿದರು.

ಶಾಂತಿ ಮತ್ತು ಸೌಹಾರ್ದತೆ ಪ್ರಚುರಪಡಿಸುವ ಸಲುವಾಗಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆದ 2 ದಿನಗಳ ಸಾರ್ಕ್ ಯುವ ಸಂಸದರ ಸಮಾವೇಶದಲ್ಲಿ ಮಂಡ್ಯದ ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ ಇತ್ತೀಚೆಗೆ ಪಾಲ್ಗೊಂಡಿದ್ದರು.

ಸಾರ್ಕ್ನ 7 ದೇಶಗಳ 50 ಯುವ ಸಂಸದರು ಮತ್ತು 6 ಅಂತಾರಾಷ್ಟ್ರೀಯ ತಜ್ಞರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಪಾಕ್ ಸಂಸತ್ತು ಈ ಸಮಾವೇಶದ ಆತಿಥ್ಯ ವಹಿಸಿತ್ತು. ಸಮಾವೇಶದಲ್ಲಿ ಮಾತನಾಡಿದ ರಮ್ಯಾ, ಭಾರತ ಮತ್ತು ಪಾಕ್ ಸೇರಿದಂತೆ ಸಾರ್ಕ್ ರಾಷ್ಟ್ರಗಳು ಒಗ್ಗಟ್ಟು ಪ್ರದರ್ಶಿಸಬೇಕು. ಸಾಂಸ್ಕೃತಿಕ ವಿನಿಮಯಗಳು ಈ ಪ್ರದೇಶದ ಸ್ವರೂಪವನ್ನೇ ಬದಲಿಸುತ್ತವೆ. ಯಥಾಸ್ಥಿತಿ ಬದಲಿಸುವುದಕ್ಕೋಸ್ಕರ ನಮ್ಮ ಸ್ಥಾನಮಾನ ಬಳಕೆ ಮಾಡಿಕೊಳ್ಳಬೇಕು. ವ್ಯಾಪಾರ-ವಹಿವಾಟು ಅಭಿವೃದ್ಧಿಗೆ “ಸಿಲ್ಕ್ ರೋಡ್’ನಂಥ ಅಂತರ್ಸಂಪರ್ಕ ಹೆದ್ದಾರಿ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.

ಅಲ್ಲಿನ ಜನ ನಮ್ಮ ಹಾಗೆ ಇದ್ದಾರೆ, ಚೆನ್ನಾಗಿಯೇ ಮಾತನಾಡಿಸುತ್ತಾರೆ. ಆದರೆ ರಕ್ಷಣಾ ಸಚಿವ ಪರ್ರೀಕರ್ ಹೇಳಿದ ರೀತಿಯಲ್ಲಿ ಪಾಕ್ ನರಕ ಅಲ್ಲ ಎಂದು ಹೇಳುವ ಮೂಲಕ ಹೊಗಳಿಯ ಸುರಿಮಳೆಗೈದಿದ್ದಾರೆ.

ಎಬಿವಿಪಿಯಿಂದ ರಮ್ಯಾ ಪ್ರತಿಕೃತಿ ದಹನ: ಪಾಕನ್ನು ಹೊಗಳಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಶನಿ ವಾರ ಸಂಜೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿ ದರು. ರಮ್ಯಾ ಪ್ರತಿಕೃತಿಯನ್ನು ದಹಿಸಿದ ಪ್ರತಿಭಟನಕಾರರು, ಪಾಕ್ ಎಂಥ ದೇಶ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ರಮ್ಯಾ ಸರ್ಟಿಫಿಕೆಟ್ ನೀಡುವುದು ಬೇಕಾಗಿಲ್ಲ ಎಂದು ಕಿಡಿಕಾರಿದರು.