ರಸ್ತೆ ಗುಂಡಿ ಮುಚ್ಚಿದ ಮಹಿಳಾ ಹೋಂಗಾರ್ಡ್

0
664

ಮಂಗಳೂರು: ಯಾವುದೇ ಸಮಸ್ಯೆಯಾದರೂ ಸರಿ, ಇಚ್ಚಾಶಕ್ತಿ ಹೊಂದಿದ್ದರೆ ಕ್ಷಣದಲ್ಲಿ ನಿವಾರಣೆಯಾಗುತ್ತದೆ ಎನ್ನುವುದಕ್ಕೆ ನಿದರ್ಶನವಾಗಿದ್ದಾರೆ ಬೆಂದೂರ್ ವೆಲ್ ಸರ್ಕಲ್‌ನ ಮಹಿಳಾ ಹೋಂಗಾರ್ಡ್, ರಿಕ್ಷಾ ಚಾಲಕ ಮತ್ತು ಸ್ಥಳೀಯರು.

ರಸ್ತೆಯಲ್ಲಿನ ದೊಡ್ಡ ಹೊಂಡ ಗುಂಡಿ, ಅದರಲ್ಲಿ ಸಿಲುಕಿ ವಾಹನ ಸವಾರರು ಪಡುವ ಸಂಕಷ್ಟ, ದ್ವಿಚಕ್ರ ಸವಾರರು ಬಿದ್ದು ಪಡುವ ಪಾಡು ಎಲ್ಲವನ್ನೂ ನೋಡಿ ನೋಡಿ ಬೇಸರಗೊಂಡ ಮೂವರು ಭಾನುವಾರ ಹೊಂಡ ಮುಚ್ಚುವ ಕೆಲಸವನ್ನು ಮಾಡಿದರು.

ಕಂಕನಾಡಿಯ ಟ್ರಾಫಿಕ್ ನಿರ್ವಾಹಕಿ ಸರಿಪಲ್ಲದ ರೇಖಾರ ಈ ಕಾರ್ಯಕ್ಕೆ ಆಟೋ ಚಾಲಕ ಬೂಬಣ್ಣ ಸ್ಥಳೀಯರಾದ ಪ್ರದೀಪ್ ಕೈಜೋಡಿಸಿದರು. ಮೂವರ ಕೆಲಸ ನೋಡಿದ ಸ್ಥಳೀಯರು, ವಾಹನ ಸವಾರರು ಭೇಷ್ ಎಂದು ಮೆಚ್ಚುಗೆ ಸೂಚಿಸಿದರು.

ಮಂಗಳೂರು ನಗರದ ಕಂಕನಾಡಿ ಸರ್ಕಲ್ ನಿತ್ಯ ಜನಜಂಗುಳಿ ಹಾಗೂ ವಾಹನ ನಿಬಿಡವಾದ ಪ್ರದೇಶ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಇಲ್ಲಿ ಸಂಚರಿಸುವುದೇ ಸಾಹಸ. ಈ ಮಧ್ಯೆ ಹೊಂಡ ಗುಂಡಿ ಸಮಸ್ಯೆ ಸಂಚಾರವನ್ನು ಮತ್ತಷ್ಟು ತ್ರಾಸದಾಯಕವಾಗಿ ಮಾಡಿತ್ತು.

ಈ ಸಮಸ್ಯೆಯನ್ನು ಅರಿತ ಮಹಿಳಾ ಹೋಂಗಾರ್ಡ್ ರೇಖಾ ಮತ್ತು ಬೂಬಣ್ಣ ಅವರು ಗುಂಡಿ ಮುಚ್ಚಲು ಮುಂದಾದರು. ಸ್ಥಳೀಯರಾದ ಪ್ರದೀಪ್ ಈ ಕಾರ್ಯಕ್ಕೆ ಕೈ ಜೋಡಿಸಿದರು. ಈ ಕಾರ್ಯಕ್ಕೆ ವಾಹನ ಸವಾರರು ಅಭಿನಂದನೆ ಸಲ್ಲಿಸಿದರು.

ಪೊಲೀಸರಿಂದ ಅಭಿನಂದನೆ: ಸಂಚಾರ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಹೋಂಗಾರ್ಡ್ ರೇಖಾ, ಅವರಿಗೆ ನೇರವಾದ ಬೂಬಣ್ಣ, ಪ್ರದೀಪ್ ಅವರ ಕಾರ್ಯವನ್ನು ಸಂಚಾರಿ ಪೊಲೀಸರು ಶ್ಲಾಘಿಸಿದ್ದಾರೆ. ಎಲ್ಲರನ್ನೂ ಅಭಿನಂದಿಸಲಾಗುತ್ತದೆ ಎಂದು ಉದಯ್ ನಾಯಕ್ ತಿಳಿಸಿದ್ದಾರೆ.