ವಿಮಾನದ ಮೇಲೆ ‘ಕಬಾಲಿ’ ಅಬ್ಬರ

0
1520

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ‘ಕಬಾಲಿ’ ಯ ಟೀಸರ್ ಬಿಡುಗಡೆಯಾದ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದರಲ್ಲದೇ ಚಿತ್ರದ ಬಿಡುಗಡೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದರು.

‘ಕಬಾಲಿ’ ಚಿತ್ರ ಜುಲೈ 15 ರಂದು ಬಿಡುಗಡೆಯಾಗಲಿದೆ ಎಂದು ಈ ಮೊದಲು ಹೇಳಲಾಗಿತ್ತಾದರೂ ಅದೀಗ ಜುಲೈ 22 ಕ್ಕೆ ಮುಂದೂಡಲ್ಪಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಭೂಗತ ಲೋಕದ ಕಥಾ ಹಂದರವನ್ನು ಹೊಂದಿರುವ ‘ಕಬಾಲಿ’ ಯಲ್ಲಿ ರಜನಿಕಾಂತ್ ತಮ್ಮ ಎಂದಿನ ಸ್ಟೈಲ್ ಹಾಗೂ ಡೈಲಾಗ್ ಡೆಲಿವರಿಯಿಂದ ಪ್ರೇಕ್ಷಕರ ಮನ ಸೆಳೆಯಲಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ‘ಕಬಾಲಿ’ ಯ ವಿಶೇಷ ವಿಮಾನವನ್ನು ಮಲೇಶಿಯಾ ಮೂಲದ ಏರ್ ಏಷ್ಯಾ ರೂಪಿಸಿದೆ. ಈ ವಿಮಾನದ ಎರಡೂ ಬದಿಯಲ್ಲಿ ‘ಕಬಾಲಿ’ ಚಿತ್ರದ ಜಾಹೀರಾತು ಕಂಗೊಳಿಸುತ್ತಿದ್ದು, ಚಿತ್ರ ಬಿಡುಗಡೆಯಾದ ಮೊದಲ ದಿನದ ಮೊದಲ ಷೋ ವೀಕ್ಷಿಸಲು ಬೆಂಗಳೂರಿನಿಂದ ಚೆನ್ನೈಗೆ ರಜನಿಕಾಂತ್ ಅಭಿಮಾನಿಗಳನ್ನು ಕರೆದೊಯ್ಯಲಿದೆ ಎನ್ನಲಾಗಿದೆ. ಅಲ್ಲದೇ ಅತಿಥಿಗಳಿಗೆ ನೀಡುವ ಮೆನು ಕೂಡಾ ಸಂಪೂರ್ಣ ‘ಕಬಾಲಿ’ಮಯವಾಗಿರದೆ ಎಂದು ತಿಳಿದುಬಂದಿದೆ.