ವಿವಾದಿತ ಭೂಮಿ ಪಿಒಕೆ ಪ್ರವರ

0
4953

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಜಮ್ಮು-ಕಾಶ್ಮೀರದ ಅವಿಭಾಜ್ಯ ಅಂಗ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿಕೆ ನೀಡಿರುವುದು ಭಾರತ, ಪಾಕಿಸ್ತಾನದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಪಿಒಕೆಯಲ್ಲಿನ ಗಿಲ್ಗಿಟ್-ಬಾಲ್ಟಿಸ್ತಾನ್?ದಲ್ಲಿ ಪಾಕ್ ಸೇನೆಯ ದೌರ್ಜನ್ಯ, ಹಿಂಸಾಚಾರದ ವಿರುದ್ಧ ಮೋದಿ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದು, ಅಲ್ಲಿನ ಸಂತ್ರಸ್ತರೂ ಭಾರತದತ್ತ ಒಲವು ತೋರಿಸುತ್ತಿದ್ದಾರೆ. ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ವಿವಾದ ಹಾಗೂ ಅಲ್ಲಿನ ಸ್ಥಿತಿಗತಿಗಳ ಚಿತ್ರಣ ಇಲ್ಲಿದೆ.

ಗಿಲ್ಗಿಟ್-ಬಾಲ್ಟಿಸ್ತಾನ ವಿವಾದಿತ ಪ್ರದೇಶ

© img.dunyanews.tv
© img.dunyanews.tv

ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶವನ್ನು ಪಾಕಿಸ್ತಾನ ವಿವಾದಿತ ಎಂದು ಪರಿಗಣಿಸಿದೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ತನ್ನ ಘನತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಭಾಗಗಳನ್ನು ಪಾಕ್ ಇಂದಿಗೂ ತನ್ನ ಭಾಗ ಎಂದು ಪರಿಗಣಿಸುತ್ತಿಲ್ಲ. ಆದರೆ 2009ರಲ್ಲಿ ಮೀರ್ಪುರ-ಮುಜಫರಾಬಾದ್ ರೀತಿಯಲ್ಲೇ ಶಾಸನಾತ್ಮಕ ಆದೇಶ ಹೊರಡಿಸಿ ಆಡಳಿತ ನಿರ್ವಹಿಸಲಾಗುತ್ತಿದೆ.

ಹಂಚಿಹೋದ ಭೂಭಾಗ

ರಾಜ ಹರಿಸಿಂಗ್ ಆಡಳಿತ ನಡೆಸುತ್ತಿದ್ದ, 1947ರ ಅಕ್ಟೋಬರ್ 22ರಿಂದಲೂ ಪಾಕಿಸ್ತಾನದ ವಶದಲ್ಲಿರುವ ಭಾಗಗಳನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಭಾರತ ಪರಿಗಣಿಸುತ್ತದೆ. ಈ ಭಾಗಗಳನ್ನು ಗಿಲ್ಗಿಟ್-ಬಾಲ್ಟಿಸ್ತಾನ್ ಹಾಗೂ ದಕ್ಷಿಣಕ್ಕಿರುವ ಪ್ರದೇಶವನ್ನು ಮೀರ್ಪುರ-ಮುಜಫರಾಬಾದ್ ಎಂದು ಪಾಕಿಸ್ತಾನ ವಿಭಜಿಸಿದೆ.

ಮೀರ್ಪುರ ಆಡಳಿತ

1970ಕ್ಕಿಂತ ಮೊದಲು ಮೀರ್ಪುರದಲ್ಲಿ ವಿವಿಧ ರೀತಿಯ ಆಡಳಿತ ನಡೆಯುತ್ತಿತ್ತು. 70ರಲ್ಲಿ ಸಂಸದೀಯ ವ್ಯವಸ್ಥೆ ಜಾರಿಗೊಳಿಸಿ ಮತದಾನದ ಹಕ್ಕು ನೀಡಲಾಯಿತು. ಇದೇ ನೀತಿ ಈಗಲೂ ಚಾಲ್ತಿಯಲ್ಲಿದೆ. 1975ರಿಂದಲೂ ಇಲ್ಲಿ ಪ್ರಧಾನಿಯಿದ್ದಾರೆ. ಅಲ್ಲದೆ, ಪಾಕ್ ಪ್ರಧಾನಿ ನೇತೃತ್ವದಲ್ಲಿ 6 ಸದಸ್ಯರ ಸಮಿತಿ ಅಸ್ತಿತ್ವದಲ್ಲಿದೆ. ಈ ಪೈಕಿ ಮೂವರು ಅಧಿಕಾರಿಗಳಾಗಿದ್ದರೆ, ಉಳಿದವರು ಪಾಕ್ ಪ್ರಧಾನಿ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ವಾಸ್ತವದಲ್ಲಿ, ರಕ್ಷಣೆ, ಭದ್ರತೆ, ವಿದೇಶಾಂಗ ವ್ಯವಹಾರಗಳನ್ನು ಪಾಕಿಸ್ತಾನವೇ ನಿರ್ವಹಿಸುತ್ತದೆ. ಹೀಗಾಗಿ ಪಾಕಿಸ್ತಾನ ಹೇಳಿಕೊಳ್ಳುವ ಸ್ವಾಯತ್ತತೆ ಎಂಬುದು ಕೇವಲ ಕಣ್ಕಟ್ಟು ಎನ್ನಲಾಗಿದೆ.

ಮಾತುಕತೆಗೆ ಆಹ್ವಾನಿಸಿದ ಪಾಕ್

ಪಾಕಿಸ್ತಾನದೊಂದಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಬಗ್ಗೆ ಮಾತ್ರ ಮಾತುಕತೆ ನಡೆಸುವುದಾಗಿ ಭಾರತ ಈಗಾಗಲೇ ಸ್ಪಷ್ಟಪಡಿಸಿದ್ದರೂ, ಜಮ್ಮು-ಕಾಶ್ಮೀರ ವಿವಾದದ ಬಗ್ಗೆ ಮಾತುಕತೆ ನಡೆಸಲು ಪಾಕಿಸ್ತಾನ ಭಾರತಕ್ಕೆ ಆಹ್ವಾನ ನೀಡಿದೆ. ಸೋಮವಾರ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಚೌಧರಿ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್?ಗೆ ಈ ಬಗ್ಗೆ ಪತ್ರ ರವಾನಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿಲುವಳಿಗೆ ಅನುಗುಣವಾಗಿ ಜಮ್ಮು-ಕಾಶ್ಮೀರ ವಿಚಾರ ಮಾತುಕತೆ ಬಗ್ಗೆ ಇದರಲ್ಲಿ ಪ್ರಸ್ತಾಪಿಸಲಾಗಿದೆ.

ಬಲೂಚಿಸ್ತಾನ- ಪಾಕ್ ಮಾತುಕತೆ

ಬಲೂಚಿಸ್ತಾನದಲ್ಲಿ ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ ನಂತರದಲ್ಲಿ, ಇದೀಗ ಪಾಕಿಸ್ತಾನ ಬಲೂಚಿಸ್ತಾನದ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದೆ. ಸಮಸ್ಯೆ ಬಗೆಹರಿಸಲು ಮಾತುಕತೆ ಮಾತ್ರ ಪರಿಹಾರ ಎಂಬುದಾಗಿ ಪಾಕ್ ಹೇಳಿದೆ. ಸ್ವಯಂ ಗಡೀಪಾರಿಗೆ ಒಳಗಾದ ಬಲೂಚ್ ಮುಖಂಡರು ದೇಶಕ್ಕೆ ಆಗಮಿಸಬೇಕು ಎಂದು ಬಲೂಚಿಸ್ತಾನದ ಮುಖ್ಯಮಂತ್ರಿ ನವಾಬ್ ಸನಾವುಲ್ಲಾ ಜೆಹರಿ ಹೇಳಿದ್ದಾರೆ.

ವಿವಾದದ ಹಾದಿ

1947- ಕಾಶ್ಮೀರದ ಮುಸ್ಲಿಮರು ಭಾರತಕ್ಕೆ ಸೇರಲು ವಿರೋಧಿಸಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಗಿಲ್ಗಿಟ್ ಬಾಲ್ಟಿಸ್ತಾನ್?ದ ಮಹಾರಾಜ ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದ್ದ. ಈ ಭಾಗದಲ್ಲಿ ಪಾಕ್ ಸೇನೆಯನ್ನು ಹಿಂಪಡೆಯುವಂತೆ ಆಗಿನ ಪ್ರಧಾನಿಯಾಗಿದ್ದ ಜವಾಹರಲಾಲ ನೆಹರು ಸೂಚಿಸಿದ್ದರು.

ಅ. 31, 1947, ಜಮ್ಮು-ಕಾಶ್ಮೀರಕ್ಕೆ ಪಾಕ್ ಸೇನೆ ಒಳನುಸುಳಿ ಬಾರಾಮುಲ್ಲಾಗೆ ಪ್ರವೇಶಿಸಿದಾಗ, ಮಹಾರಾಜ ಹರಿ ಸಿಂಗ್ ಚಿಂತಿತನಾದ. ಆಗ ಭಾರತದೊಂದಿಗೆ ಸೇರ್ಪಡೆ ಸಹಿ ಹಾಕಿದ. ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಲು ಭಾರತ ತನ್ನ ಸೇನೆ ಅಲ್ಲಿಗೆ ಕಳುಹಿಸಿತ್ತು.

ಏ.1948- ಸೇನೆ ಹಿಂಪಡೆಯುವಂತೆ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಸೂಚಿಸಿದ್ದಲ್ಲದೆ, ಭಾರತದ ವಶದಲ್ಲಿರುವ ಭಾಗದಲ್ಲಿ ಜನಮತಗಣನೆ ನಡೆಸುವಂತೆ ಭಾರತಕ್ಕೆ ಸೂಚಿಸಿತ್ತು.

1970- ಉತ್ತರದ ಭಾಗಗಳು ಹಾಗೂ ಮೀರ್ಪುರ-ಮುಜಫರಾಬಾದ್ ಪ್ರದೇಶಗಳನ್ನು ಪಾಕಿಸ್ತಾನ ವಿಭಜಿಸಿತು. ಪಿಒಕೆಯಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂತು.