ವಿಶ್ವದಾಖಲೆ ಬರೆದ ನೀರಜ್: ಮೋದಿಯಿಂದ ಅಭಿನಂದನೆ!

0
842

ನವದೆಹಲಿ : ಭರವಸೆಯ ಜಾವಲಿನ್ ಎಸೆತ ಸ್ಪರ್ಧಿ ನೀರಜ್ ಚೋಪ್ರಾ ಅವರು ಶನಿವಾರ ರಾತ್ರಿ ಜೂನಿಯರ್ ವಿಭಾಗದಲ್ಲಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಅಥ್ಲೆಟಿಕ್ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ.

ಪೋಲೆಂಡ್ನ ಬೈಡ್ಗೊಸ್ ಜೆಕ್ನಲ್ಲಿ ನಡೆದ ಐಎಎಎಫ್ ವಿಶ್ವ ಚಾಂಪಿಯನ್ಷಿಪ್ನ 20 ವರ್ಷದೊಳ ಗಿನವರ ವಿಭಾಗದಲ್ಲಿ 86.48 ಮೀಟರ್ಸ್ ದೂರ ಜಾವಲಿನ್ ಎಸೆಯುವ ಮೂಲಕ ನೀರಜ್ ಈ ಸಾಧನೆ ಮಾಡಿದ್ದಾರೆ.

ಜತೆಗೆ ವಿಶ್ವ ಚಾಂಪಿಯನ್ಷಿಪ್ನ ಜೂನಿಯರ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಶ್ರೇಯಕ್ಕೂ ಅವರೂ ಪಾತ್ರರಾಗಿದ್ದಾರೆ.

2000ರಲ್ಲಿ ನಡೆದಿದ್ದ ಚಾಂಪಿಯನ್ ಷಿಪ್ನ 20 ವರ್ಷದೊಳಗಿನವರ ಮಹಿಳಾ ವಿಭಾಗದ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಸೀಮಾ ಪೂನಿಯ ಅವರು ಚಿನ್ನ ಗೆದ್ದಿದ್ದರು. ಆದರೆ ಅವರು ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಪದಕವನ್ನು ಹಿಂದಕ್ಕೆ ಪಡೆಯಲಾಗಿತ್ತು.

2002ರ ಚಾಂಪಿಯನ್ಷಿಪ್ನಲ್ಲಿ ಸೀಮಾ ಅವರಿಂದ ಕಂಚಿನ ಸಾಧನೆ ಮೂಡಿಬಂದಿತ್ತು. 2004ರಲ್ಲಿ ನಡೆದಿದ್ದ ಚಾಂಪಿಯನ್ಷಿಪ್ನಲ್ಲಿ ನವಜೀತ್ ಕೌರ್ ಧಿಲ್ಲೊನ್ ಅವರೂ ಕಂಚು ಜಯಿಸಿದ ಸಾಧನೆ ಮಾಡಿದ್ದರು.

ಹರಿಯಾಣದ 18 ವರ್ಷದ ಅಥ್ಲೀಟ್ ನೀರಜ್ ಅವರು ಶನಿವಾರ ನಡೆದ ಚಾಂಪಿಯನ್ಷಿಪ್ನ ಆರಂಭಿಕ ಸುತ್ತಿನಲ್ಲಿ 79.66 ಮೀಟರ್ಸ್ ದೂರ ಜಾವಲಿನ್ ಎಸೆದು ಭರವಸೆ ಮೂಡಿಸಿದ್ದರು. ಎರಡನೇ ಸುತ್ತಿನಲ್ಲಿ ಅವರು ಇನ್ನಷ್ಟು ಶಕ್ತಿಯುತವಾಗಿ ಜಾವಲಿನ್ ಎಸೆದು ಸಂಭ್ರಮಿಸಿದರು.

ಈ ಮೂಲಕ ಲಾತ್ವಿಯಾದ ಜಿಗಿಸ್ಮಂಡ್ಸ್ ಸರ್ಮೈಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮೀರಿ ನಿಂತರು. ಜಿಗಿಸ್ಮಂಡ್ಸ್ ಅವರು 84.69 ಮೀಟರ್ಸ್ ದೂರ ಜಾವಲಿನ್ ಎಸೆದಿದ್ದು ಇದುವರೆಗಿನ ದಾಖಲೆಯಾಗಿತ್ತು.

ಅವರು ಈ ಮೊದಲು 82.23 ಮೀಟರ್ಸ್ ದೂರ ಜಾವಲಿನ್ ಎಸೆದು ರಾಜೀಂದರ್ ಸಿಂಗ್ ಅವರ ಹೆಸರಿನ ಲ್ಲಿದ್ದ ಸೀನಿಯರ್ ವಿಭಾಗದ ರಾಷ್ಟ್ರೀಯ ದಾಖಲೆಯನ್ನು ಅಳಿಸಿ ಹಾಕಿದ್ದರು.

ಮೋದಿ ಅಭಿನಂದನೆ: ವಿಶ್ವ ದಾಖಲೆ ಮಾಡಿರುವ ನೀರಜ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

‘ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದಿರುವ ನಿಮಗೆ ಅಭಿನಂದನೆಗಳು. ನೀವು ದೇಶಕ್ಕೆ ಹೆಮ್ಮೆ ತಂದಿದ್ದೀರಿ. ನಿಮ್ಮ ಸಾಧನೆ ಯುವ ಸಮುದಾಯಕ್ಕೆ ಪ್ರೇರಣೆ ಯಾಗಲಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.