ವಿಶ್ವದ ಅತಿದೊಡ್ಡ ಕ್ರೀಡಾಹಬ್ಬಕ್ಕೆ ಸಂಭ್ರಮದ ಚಾಲನೆ :ಭಾರತವನ್ನು ಮುನ್ನಡೆಸಿದ ಬಿಂದ್ರಾ

0
1083
Fireworks are seen during a rehearsal of the opening ceremony of the Rio 2016 Olympic Games in Rio de Janeiro on August 3, 2016. / AFP PHOTO / YASUYOSHI CHIBA

ರಿಯೊ ಡಿ ಜನೈರೊ, ಆ.6: ಒಲಿಂಪಿಕ್ಸ್‌ ಕ್ರೀಡೆಗಳ ಸಂಪನ್ನಗೊಳ್ಳುವ ರಿಯೋದಲ್ಲಿನ ಪ್ರಧಾನ ಮ್ಯಾರಕಾನಾ ಕ್ರೀಡಾಂಗಣವು ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ವೈಭವೋಪೇತ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾಕ್ಷಿಯಾಯಿತು. ವಿಶ್ವಾದ್ಯಂತದ 300 ಕೋಟಿಗೂ ಅಧಿಕ ಕ್ರೀಡಾ ಪ್ರೇಮಿಗಳು ಈ ಉದ್ಘಾಟನಾ ಸಮಾರಂಭದ ವೈಭವವನ್ನು ಕಣ್ತುಂಬಿಕೊಂಡರು.

ಸಾಂಬಾ ನೃತ್ಯದ ಸೊಬಗು ಮರಕಾನ ಕ್ರೀಡಾಂಗಣದಲ್ಲಿ ಅನಾವರಣಗೊಳ್ಳುತ್ತಿದ್ದಂತೆ, ವಿಶ್ವದ ಅತಿದೊಡ್ಡ ಕ್ರೀಡಾಕೂಟಕ್ಕೆ ಶನಿವಾರ ಮುಂಜಾನೆ (ಭಾರತೀಯ ಕಾಲಮಾನದ ಪ್ರಕಾರ) ಸಂಭ್ರಮದ ಚಾಲನೆ ಸಿಕ್ಕಿತು.

ಬ್ರೆಝಿಲ್ ನ ಶ್ರೇಷ್ಠ ಕ್ರೀಡಾಪಟುಗಳು ಮೈದಾನದಲ್ಲಿ ಒಲಿಂಪಿಕ್ಸ್ ಕ್ರೀಡಾಜ್ಯೋತಿಯ ರಿಲೇ ಪೂರ್ಣಗೊಳಿಸುತ್ತಿದ್ದಂತೆ, ಫುಟ್ಬಾಲ್ ಮಾಂತ್ರಿಕ ಪೀಲೆ, ಒಲಿಂಪಿಕ್ ಕ್ರೀಡಾಜ್ಯೋತಿ ಬೆಳಗಿದರು.

ವಿಶ್ವದ ಮಹೋನ್ನತ  31ನೇ ರಿಯೋ ಒಲಿಂಪಿಕ್ಸ್‌  ಕ್ರೀಡಾಕೂಟ ಶುಕ್ರವಾರ ಇಲ್ಲಿ ಅದ್ದೂರಿಯಿಂದ ಹಾಗೂ ಅಪಾರವಾದ ನಿಸರ್ಗ ಪ್ರೇಮದೊಂದಿಗೆ ಉದ್ಘಾಟನೆಗೊಂಡಿದೆ. ಭಾರತದ ಕ್ರೀಡಾ ಪಟು ಅಭಿನವ ಬಿಂದ್ರಾ ಅವರು ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಭಾರತದ ತಂಡವನ್ನು ಮುನ್ನಡೆಸಿದ್ದಾರೆ.

ಅಮೆಜಾನ್ ಮಳೆಕಾಡು ಇಡೀ ಬ್ರೆಝಿಲ್ನ ಜೀವನಾಡಿ ಎನ್ನುವುದನ್ನು ಅದ್ಭುತವಾಗಿ ನಿರೂಪಿಸಿದ ರೂಪಕವನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಕಣ್ತುಂಬಿಕೊಂಡರು. ಥಳಕು- ಬಳಕಿನ ನೃತ್ಯವೈಯಾರ ಇಡೀ ಕ್ರೀಡಾಂಗಣವನ್ನೇ ಹುಚ್ಚೆದ್ದು ಕುಣಿಸಿತು. ಬ್ರೆಝಿಲ್ನ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಶಾಲಾಮಕ್ಕಳು 5,500ಕ್ಕೂ ಹೆಚ್ಚು ವೇಷಭೂಷಣಗಳನ್ನು ಪ್ರದರ್ಶಿಸಿ, ಬೆಡಗಿನ ಮಾಯಾಲೋಕವನ್ನೇ ಸೃಷ್ಟಿಸಿದರು. ಶಾಂತಿ, ವಿವಿಧತೆಯಲ್ಲಿ ಏಕತೆ ಹಾಗೂ ಪರಿಸರ ಕಾಳಜಿಯ ಸಂದೇಶ ಸಾರಿದ ಉದ್ಘಾಟನಾ ಸಮಾರಂಭ ಸುಮಾರು ಮೂರು ಗಂಟೆ ಕಾಲ ಪ್ರೇಕ್ಷಕರನ್ನು ಭಾವಲೋಕಕ್ಕೆ ಕರೆದೊಯ್ದಿತು.

ಬ್ರೆಝಿಲ್ ಸಂಗೀತ ಪರಂಪರೆಯ ಹರಿಕಾರ ಎನಿಸಿದ ಗಿಟಾರ್ ವಾದಕ, ಗಿಲ್ಬೆಟೊ ಪ್ಯಾಸೋಸ್ ಗಿಲ್ಮೊರೈರಾ ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದರು. ಆಕರ್ಷಕ ಪಥಸಂಚಲನದಲ್ಲಿ ಕೊನೆಯ ತಂಡವಾಗಿ ಬ್ರೆಝಿಲ್ ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆ, 80 ಸಾವಿರಕ್ಕೂ ಹೆಚ್ಚು ಮಂದಿಯ ಹರ್ಷೋದ್ಗಾರ ಮುಗಿಲು ಮುಟ್ಟಿತು.

2008ರ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹೆಮ್ಮೆಯ ಶೂಟರ್ ಅಭಿನವ್ ಬಿಂದ್ರಾ ಭಾರತ ತಂಡವನ್ನು ಪಥಸಂಚಲನದಲ್ಲಿ ಮುನ್ನಡೆಸಿದರು. ಭಾರತೀಯ ಬಿಲ್ಗಾರರು ಮತ್ತು ಹಾಕಿ ತಂಡ ಪಥಸಂಚಲನದಿಂದ ಹೊರಗುಳಿದಿತ್ತು. ಶನಿವಾರ ಸ್ಪರ್ಧೆಗಳು ಇರುವ ಹಿನ್ನೆಲೆಯಲ್ಲಿ ಈ ಕ್ರೀಡಾಪಟುಗಳು ಉದ್ಘಾಟನಾ ಸಂಭ್ರಮದಲ್ಲಿ ಪಾಲ್ಗೊಳ್ಳಲಿಲ್ಲ.