ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 7ನೇ ಸ್ಥಾನ ಪಡೆದುಕೊಂಡಿದೆ

0
1837

ವಾಷಿಂಗ್ಟನ್: ದೇಶದ ಆರ್ಥಿಕತೆ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆಯೊಂದು ನಡೆದಿದೆ. ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿ ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಅಂದಾಜಿಗಿಂತಲೂ ಹೆಚ್ಚಿನ ಬೆಳವಣಿಗೆ ದಾಖಲಿಸಿದ್ದು, ಚೀನಾದ ಆರ್ಥಿಕತೆಯನ್ನೂ ಹಿಂದಿಕ್ಕಿದೆ. ಭಾರತ ಈ ಮೂಲಕ ಜಾಗತಿಕ ಆರ್ಥಿಕತೆಯಲ್ಲಿ ಮುಂಚೂಣಿ ಸಾಧಿಸುವಲ್ಲಿ ದಾಪುಗಾಲು ಇಟ್ಟಿರುವುದು ಮಹತ್ವದ ಬೆಳವಣಿಗೆ.

 ಬರೋಬ್ಬರಿ 125 ಕೋಟಿ ಜನಸಂಖ್ಯೆ ಹೊಂದಿರುವ ಭಾರತ, ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆಯ ಕೂಗುಗಳ ನಡುವೆಯೇ ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ. ‘ನ್ಯೂ ವರ್ಲ್ಡ್ ವೆಲ್ತ್’ ಬಿಡುಗಡೆ ಮಾಡಿರುವ ಈ ಸಮೀಕ್ಷಾ ವರದಿ ಅನ್ವಯ ಭಾರತೀಯರ ಒಟ್ಟು ಆಸ್ತಿಯ ಮೊತ್ತ 37 ಲಕ್ಷ ಕೋಟಿ ರೂಪಾಯಿ. 322 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅನಂತರದ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಚೀನ, ಜಪಾನ್ ಇವೆ. ಸಂಪತ್ತಿನ ವರದಿ ತಯಾರಿಸುವಾಗ ಸರಕಾರದ ಸಂಪತ್ತು ಮತ್ತು ಜನರ ಸಂಪತ್ತನ್ನು ಒಗ್ಗೂಡಿಸಿ ಲೆಕ್ಕ ಹಾಕಲಾಗುತ್ತದೆ. ಆದರೆ ನ್ಯೂ ವರ್ಲ್ಡ್ ವೆಲ್ತ್ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿ ತಯಾರಿಸುವಾಗ ಕೇವಲ ಜನರ ಸಂಪತ್ತು (ಆಸ್ತಿ, ನಗದು, ಹೂಡಿಕೆ, ಉದ್ಯಮ ಆಸಕ್ತಿ) ಮಾತ್ರ ಪರಿಗಣಿಸಿದೆ.

ಸರಕಾರದ ಯಾವುದೇ ಸಂಪತ್ತನ್ನು ಪರಿಗಣಿಸಿಲ್ಲ. ಈ ಆಧಾರದಲ್ಲಿ ಅಮೆರಿಕದ 32 ಕೋಟಿ ಜನರ ಒಟ್ಟು ಸಂಪತ್ತು 322 ಲಕ್ಷ ಕೋ.ರೂ. ಎಂದು ವರದಿ ಹೇಳಿದೆ. ಈ ಮೂಲಕ ಅದು ವಿಶ್ವದ ಶ್ರೀಮಂತ ರಾಷ್ಟ್ರವಾಗಿದೆ. ವಿಶ್ವದ ಇತರ ಹಲವು ಅಭಿವೃದ್ಧಿ ಹೊಂದಿದ ಮತ್ತು ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಪಟ್ಟಿಯಲ್ಲಿ ಭಾರತ ಉನ್ನತ ಸ್ಥಾನದಲ್ಲಿದೆ. ಇದಕ್ಕೆ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿರುವುದೇ ಕಾರಣವಾಗಿದೆ.

ವಿಶ್ವದ ಶ್ರೀಮಂತ ರಾಷ್ಟ್ರಗಳ ಸ್ಥಾನ: 32 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕ 322 ಲಕ್ಷ ಕೋಟಿ ರೂ. ಸಂಪತ್ತಿನೊದಿಗೆ ಮೊದಲ ಸ್ಥಾನದಲ್ಲಿದೆ. 135 ಕೋಟಿ ಜನಸಂಖ್ಯೆ ಹೊಂದಿರುವ ಚೀನದ ಒಟ್ಟು ಸಂಪತ್ತು 115 ಲಕ್ಷ ಕೋಟಿ ರೂ. (2ನೇ ಸ್ಥಾನ). 13 ಕೋಟಿ ಜನಸಂಖ್ಯೆ ಹೊಂದಿರುವ ಜಪಾನ್ 100 ಲಕ್ಷ ಕೋಟಿ ರೂ.ಸಂಪತ್ತಿನೊಂದಿಗೆ 3ನೇ ಸ್ಥಾನದಲ್ಲಿದೆ. ಉಳಿದಂತೆ ಬ್ರಿಟನ್ 61 ಲಕ್ಷ ಕೋಟಿ ರೂ, (4ನೇ ಸ್ಥಾನ), ಜರ್ಮನಿ 60 ಲಕ್ಷ ಕೋಟಿ ರೂ. (5ನೇ ಸ್ಥಾನ), ಫ್ರಾನ್ಸ್ 44 ಲಕ್ಷ ಕೋಟಿ ರೂ. (6ನೇ ಸ್ಥಾನ), ಭಾರತ 37 ಲಕ್ಷ ಕೋಟಿ ರೂ. (7ನೇ ಸ್ಥಾನ), ಕೆನಡಾ 31 ಲಕ್ಷ ಕೋಟಿ ರೂ. (8ನೇ ಸ್ಥಾನ), ಆಸ್ಟ್ರೇಲಿಯಾ 30 ಲಕ್ಷ ಕೋಟಿ ರೂ. (9ನೇ ಸ್ಥಾನ) ಮತ್ತು 20 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಇಟಲಿ 10ನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ಭಾರೀ ಏರಿಕೆ: 2000ನೇ ಇಸವಿಯಲ್ಲಿ ಭಾರತದಲ್ಲಿ ತಲಾ ಸಂಪತ್ತಿನ ಪ್ರಮಾಣ 58,500 ರೂ. ಇದ್ದಿದ್ದು, 2015ರಲ್ಲಿ ಅದು 1,82,000 ರೂ.ಗೆ ಏರಿಕೆ ಕಂಡಿದೆ. ಇದು ಶೇ. 211ರಷ್ಟು ಭಾರೀ ಏರಿಕೆಯಾಗಿದೆ ಎಂದು ವರದಿ ಹೇಳಿದೆ.