ಶಾಟ್ಪುಟ್ನಲ್ಲಿ ಬೆಳ್ಳಿ ಗೆದ್ದು ಮತ್ತೋಂದು ಇತಿಹಾಸ ಸೃಷ್ಟಿಸಿದ ದೀಪಾ ಮಲಿಕ್

0
503

ರಿಯೋ ಡಿ ಜನೈರೋ:  ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಅಥ್ಲೀಟ್ ದೀಪಾ ಮಲಿಕ್ ಅವರು ಮತ್ತೋಂದು ಹೊಸ ಇತಿಹಾಸ ಬರೆದಿದ್ದಾರೆ. ಇಲ್ಲಿ ನಡೆಯುತ್ತಿರುವ ರಿಯೋ 2016 ಪ್ಯಾರಾಲಿಂಪಿಕ್ಸ್ ನ ಶಾಟ್ ಪುಟ್ ವಿಭಾಗದ ಎಫ್ 33 ಸ್ಪರ್ಧೆಯಲ್ಲಿ ದೀಪಾ ಮಲಿಕ್ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದಾರೆ. ಮಹಿಳೆಯರ ಶಾಟ್ ಪುಟ್ ಸ್ಪರ್ಧೆಯಲ್ಲಿ ಈ ಪ್ರಶಸ್ತಿ ಲಭಿಸಿದ್ದು, ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ದೀಪಾ ಮಲೀಕ್ ಪಾತ್ರರಾಗಿದ್ದಾರೆ.

ಶಾಟ್ಪುಟ್ ಅಲ್ಲದೆ, ಜಾವೆಲಿನ್ ಥ್ರೋ, ಈಜು ಸ್ಪರ್ಧೆಗಳಲ್ಲಿಯೂ ದೀಪಾ ಮಲಿಕ್ ಸ್ಪರ್ಧಿಸಿದ್ದರು. 2011ರ ವಿಶ್ವ ಚಾಂಪಿಯನ್ ಶಿಪ್ ಶಾಟ್ ಪಟ್ ಮತ್ತು ಡಿಸ್ಕಸ್ ಥ್ರೋನಲ್ಲಿ ಅವರು ಬೆಳ್ಳಿ ಪದಕಗಳನ್ನು ಗೆದ್ದಿದ್ದರು.

45 ವರ್ಷ ವಯಸ್ಸಿನ ಅರ್ಜುನ ಪ್ರಶಸ್ತಿ ವಿಜೇತ ಸಾಧಕಿ ದೀಪಾ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಬೆಳ್ಳಿ ಪದಕ ಗೆದ್ದಿರುವ ದೀಪಾ ಅವರಿಗೆ ಹರ್ಯಾಣ ಸರ್ಕಾರದ ವತಿಯಿಂದ 4 ಕೋಟಿ ರೂಪಾಯಿ  ಪ್ರೋತ್ಸಾಹ ಧನ ಉಡುಗೊರೆಯಾಗಿ ಸಿಗಲಿದೆ.

ಬೆಳ್ಳಿ ಪದಕ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ 45 ವರ್ಷದ ದೀಪಾ ಮಲಿಕ್  ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.