ಚಾರಣಿಗರ ನೆಚ್ಚಿನ ಪ್ರವಾಸಿ ತಾಣ ಸಾವನದುರ್ಗ ಬೆಟ್ಟ

0
3729

ಬೆಂಗಳೂರಿನ ಆಸುಪಾಸಿನಲ್ಲಿರುವ ಚಾರಣಿಗರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಸಾವನದುರ್ಗವೂ ಒಂದು. ಒಂದು ದಿನದ ಪ್ರವಾಸಕ್ಕೆ, ಚಾರಣದ ಹಿತ ಅನುಭವಕ್ಕೆ ಸಾವನದುರ್ಗ ಹೇಳಿ ಮಾಡಿಸಿದ ಸ್ಥಳ.

ಸಾವನದುರ್ಗ6

ಏಷ್ಯಾದ ಅತಿ ದೊಡ್ಡ ಏಕಶಿಲಾ ಪರ್ವತಗಳಲ್ಲಿ ಒಂದೆನಿಸಿಕೊಂಡಿರುವ ಸಾವನದುರ್ಗ ಬೆಟ್ಟ, ಬಹುಬಗೆಯ ಚಾರಣ ಸಾಹಸಗಳಿಗೆ ಹೆಸರುವಾಸಿಯಾಗಿದೆ. ಹೊಸಬರಿಗೆ ಚಾರಣದ ರುಚಿ ಹತ್ತಿಸುವಂತಿರುವ, ಅತೀ ದುರ್ಗಮವೂ ಅಲ್ಲದ ಸುಲಭವೆನ್ನಲೂ ಸಾಧ್ಯವಾಗದ ಬೋಳುಬೆಟ್ಟದ ಜಾರು ಹಾದಿ. ಮೇಲೆ ಉರಿಯುತ್ತಿರುವ ಸೂರ್ಯ, ಕೆಳಗೆ ಕಾದ ಬಂಡೆ! ಸದಾ ಬೀಸುತ್ತಿರುವ ತಂಗಾಳಿ, ಸುತ್ತಲ ವಿಹಂಗಮ ನೋಟ! ಇಲ್ಲಿ ಕಷ್ಟಪಟ್ಟು ಕಿತ್ತಿಡುವ ಪ್ರತಿ ಹೆಜ್ಜೆಗೂ ಬಹುಮಾನವಿದೆ. ಬೆಟ್ಟ ಹತ್ತಿದಂತೆಲ್ಲ ಪರದೆ ಸರಿದಂತೆ ತೆರೆದುಕೊಳ್ಳುವ ಸುಂದರ ದೃಶ್ಯಗಳು; ರಾಮನಗರ ಜಿಲ್ಲೆಯ ಚಿಕ್ಕ ಚಿಕ್ಕ ಊರುಗಳು, ಮಾವಿನ ತೋಪು, ದೂರದಲ್ಲಿ ಕಂಡೂ ಕಾಣದಂತಿರುವ ಮಂಚಿನಬೆಲೆ ಹಿನ್ನೀರು. ಆಹಾ! ನೋಡಬೇಕು ಹತ್ತಿ! ಅಂದಹಾಗೆ ಇದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿಗೆ ಸೇರಿದೆ.

ಸಾವನದುರ್ಗ5

ಅಚ್ಯುತರಾಯನ ಕಾಲದಲ್ಲಿ ಮಾಗಡಿಯ ಸಾಮಂತನೊಬ್ಬನ ಆಳ್ವಿಕೆಗೆ ಒಳಪಟ್ಟಿದ್ದ ಈ ದುರ್ಗಕ್ಕೆ ‘ಸಾಮಂತದುರ್ಗ’ ಎಂಬ ಹೆಸರು ಬಂದು ಕ್ರಮೇಣ ಅದು ಸಾವನದುರ್ಗ ಎಂದಾಗಿದೆ ಎಂದೂ ಹೇಳುತ್ತಾರೆ.

ಬೆಟ್ಟ ಹತ್ತುವ ಕಡಿದಾದ ಹಾದಿಯಲ್ಲಿ ಹಲವರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವುದರಿಂದ ಈ ಬೆಟ್ಟಕ್ಕೆ ಸಾವಿನದುರ್ಗ ಎಂಬ ಹೆಸರು ಬಂದು ಕಾಲಾನಂತರ ಅದು ಸಾವನದುರ್ಗವಾಗಿದೆ ಎಂದು ಹೇಳುವುವರೂ ಉಂಟು. ಮಾಗಡಿಯ ನಾಡಪ್ರಭು ಕೆಂಪೇಗೌಡ ಸಾವನದುರ್ಗವನ್ನು ತನ್ನ ಎರಡನೇ ರಾಜಧಾನಿಯಾಗಿ ಮಾಡಿಕೊಂಡಿದ್ದ ಎನ್ನುತ್ತದೆ ಚರಿತ್ರೆ.

ಸಾವನದುರ್ಗ4

ಹಲವು ಐತಿಹ್ಯಗಳನ್ನು ಹೊಂದಿರುವ ಸಾವನದುರ್ಗ ಸಮುದ್ರ ಮಟ್ಟದಿಂದ 1,226 ಮೀಟರ್‌ ಎತ್ತರದಲ್ಲಿದೆ. ಹಲವು ಅಪರೂಪದ ಹಾಗೂ ಔಷಧೀಯ ಸಸ್ಯ ಪ್ರಭೇದಗಳಿಗೆ ಪ್ರಸಿದ್ಧಿಯಾಗಿರುವ ಸಾವನದುರ್ಗವು ನೂರಾರು ಪ್ರಭೇದದ ಸುಂದರ ಹೂಗಿಡಗಳಿಗೂ ಹೆಸರಾಗಿದೆ.

ಇತ್ತ ಜೋಡಿ ಬೆಟ್ಟಗಳು ಚಾರಣಿಗರನ್ನು ಸೆಳೆಯುತ್ತಿದ್ದರೆ, ಅತ್ತ ಬೆಟ್ಟದ ಬುಡದಲ್ಲಿರುವ ಸಾವಂದಿ ವೀರಭದ್ರೇಶ್ವರ ಸ್ವಾಮಿ ಮತ್ತು ನರಸಿಂಹ ಸ್ವಾಮಿ ದೇಗುಲಗಳು ನೂರಾರು ಭಕ್ತರನ್ನು ಆಕರ್ಷಿಸುತ್ತವೆ. ಹಾಗಾಗಿ ಇದು ಬರೀ ಚಾರಣಕ್ಕೆ ಮಾತ್ರವಲ್ಲ, ಒಂದು ವಾರಾಂತ್ಯದ ವಿಹಾರಕ್ಕೂ ಆಯ್ದುಕೊಳ್ಳಬಹುದಾದ ತಾಣ.

ಸಾವನದುರ್ಗ2

ಬೆಂಗಳೂರಿನಿಂದ ಸಾವನದುರ್ಗಕ್ಕೆ ಹೋಗಲು ಮುಖ್ಯವಾದ ಎರಡು ಮಾರ್ಗಗಳಿವೆ.

*ಬೆಂಗಳೂರು-ಮಾಗಡಿ-ಸಾವನದುರ್ಗ

ಬೆಂಗಳೂರಿನಿಂದ ಮಾಗಡಿ ರಸ್ತೆಯಲ್ಲಿ ಸಾಗಿ, ಮಾಗಡಿಗೆ ಸ್ವಲ್ಪ ಮುಂಚೆ ಮಾಗಡಿ-ರಾಮನಗರ ರಸ್ತೆಯಲ್ಲಿ ಎಡಕ್ಕೆ ತಿರುಗಬೇಕು.

*ಬೆಂಗಳೂರು-ರಾಮನಗರ-ಸಾವನದುರ್ಗ

ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ರಾಮನಗರ, ಅಲ್ಲಿಂದ ಬಲಕ್ಕೆ ತಿರುಗಿ ರಾಮನಗರ-ಮಾಗಡಿ ರಸ್ತೆಯಲ್ಲಿ ಹೋಗಬೇಕು.

ಸಾವನದುರ್ಗ7

ನಗರದಿಂದ ದೂರದ ಬೆಟ್ಟಗಳಿಗೆ ಹೋಗಿ, ಬೆಟ್ಟ ಹತ್ತಿ ಸುಸ್ತಾಗಿ ಹಿಂದಿರುಗಿ ಮರುದಿನ ಕಚೇರಿಗೆ ರಜೆ ಹೇಳುವುದಕ್ಕಿಂತ ನಗರಕ್ಕೆ ಹತ್ತಿರದಲ್ಲೇ ಇರುವ ಸಾವನದುರ್ಗಕ್ಕೆ ಭೇಟಿ ನೀಡಿದರೆ ಒಂದೇ ದಿನದಲ್ಲಿ ಚಾರಣದ ಹಿತ–ಮಿತ ಅನುಭವ ನಿಮ್ಮದಾಗುತ್ತದೆ.