ಸಿಂಗಾಪುರ ಝಿಕಾ ಬಾಧೆ, 13 ಭಾರತೀಯರು ಅಸ್ವಸ್ಥ

0
430

ನವದೆಹಲಿ: ಸಿಂಗಾಪುರದಲ್ಲಿ ಝಿಕಾ ವೈರಸ್ ರೋಗ ವ್ಯಾಪಿಸಿದ್ದು, ಭಾರತೀಯ ಮೂಲದ 13 ಜನರಿಗೆ ಸೋಂಕು ತಗುಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಸೊಳ್ಳೆಯಿಂದ ಹರಡುವ ಈ ಸಾಂಕ್ರಾಮಿಕ ರೋಗದಿಂದಾಗಿ ನಿರ್ಮಾಣ ಕಾಮಗಾರಿ ಸ್ಥಳವೊಂದರಲ್ಲಿ ಕೆಲಸ ಮಾಡುತ್ತಿದ್ದ 36 ವಿದೇಶಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಇವರಲ್ಲಿ 13 ಮಂದಿ ಭಾರತೀಯರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

ಝಿಕಾ ಹಬ್ಬಿದ ಆರಂಭಿಕ ದಿನಗಳಲ್ಲೇ ವಿದೇಶಿ ನಿರ್ಮಾಣ ಕಾರ್ಮಿಕರು ಹೆಚ್ಚು ಬಾಧೆಗೊಳಗಾಗಿದ್ದಾರೆ. ಕಳೆದ ಶನಿವಾರದಂದು ಸಿಂಗಾಪುರದಲ್ಲಿ ಮೊದಲ ಬಾರಿ ಝಿಕಾ ರೋಗ ಕಾಣಿಸಿಕೊಂಡಿದೆ. ಸೋಮವಾರದ ವೇಳೆಗೆ ಝಿಕಾ ಅಂಟಿಕೊಂಡ 56 ಜನರನ್ನು ಗುರುತಿಸಲಾಗಿದೆ. ಇವರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 36 ವಿದೇಶಿ ಕಾರ್ಮಿಕರೂ ಸೇರಿದ್ದಾರೆ. ಈ ನಿರ್ಮಾಣ ಕಾಮಗಾರಿಯಲ್ಲಿ 450ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮಂಗಳವಾರದ ವೇಳೆಗೆ ಈ ಝಿಕಾ ರೋಗಪೀಡಿತರ ಸಂಖ್ಯೆ 115ಕ್ಕೇರಿದೆ. ಆದರೆ, ತೀರಾ ಇತ್ತೀಚಿನ ಪ್ರಕರಣಗಳಲ್ಲಿ ವಿದೇಶಿ ಕಾರ್ಮಿಕರೂ ಸೇರಿದ್ದಾರೆಯೇ ಎಂದು ಸಿಂಗಾಪುರ ಸರ್ಕಾರ ದೃಢಪಡಿಸಿಲ್ಲ.