ಸೆಮಿ ಫೈನಲ್ಗೆ ಸಿಂಧು: ಪದಕ ಗೆಲ್ಲುವ ಭರವಸೆಯ ಆಶಾಕಿರಣ

0
715

ರಿಯೋ ಡಿ ಜನೈರೊ: ಬುಧವಾರ ನಡೆದ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ರೋಚಕ ಹಣಾಹಣಿಯಲ್ಲಿ ಪಿ.ವಿ. ಸಿಂಧು ಚೀನದ ವರ್ಲ್ಡ್ ನಂ.2 ಖ್ಯಾತಿಯ ವಾಂಗ್ ಯಿಹಾನ್ ಅವರನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿ ಭಾರತದ ಪದಕದ ಆಸೆ ಜೀವಂತವಾಗಿರಿಸಿದ್ದಾರೆ.

ಯಿಹಾನ್ ವಿರುದ್ದ ಜಿದ್ದಾಜಿದ್ದಿನ ಹೋರಾಟದಲ್ಲಿ ಅದ್ಭುತ ಆಟವಾಡಿದ ಸಿಂಧು 22-20, 21-19 ಸೆಟ್ಗಳಿಂದ ಜಯ ತನ್ನದಾಗಿಸಿಕೊಂಡರು. ಹೈದರಾಬಾದ್‍ನ 21 ವರ್ಷದ ಸಿಂಧು ಆಕ್ರಮಣಕಾರಿ ಆಟದಿಂದ ವಿಶ್ವದ ಮಾಜಿ ನಂ.1 ಆಟಗಾರ್ತಿ ವಾಂಗ್ ಬೆಸ್ತು ಬಿದ್ದರು. ಎರಡು ಸೆಟ್‍ಗಳಲ್ಲಿ ಪ್ರಾಬಲ್ಯ ತೋರಿದ ಭಾರತದ ಭರವಸೆಯ ಆಟಗಾರ್ತಿ ಚೀನಾ ಷಟ್ಲರ್‍ಗೆ ಸೋಲಿನ ರುಚಿ ತೋರಿಸಿ ಆಘಾತ ನೀಡಿದರು.

ಚೊಚ್ಚಲ ಒಲಂಪಿಕ್ಸ್ ಪದಕದ ನಿರೀಕ್ಷೆಯಲ್ಲಿರುವ ಸಿಂಧು 10ನೇ ದಿನದ ಪಂದ್ಯದಲ್ಲಿ ಚೀನಾ ತೈಪೆಯ ಥೈ ಜು ಯಿಂಗ್ ಅವರನ್ನು 21-13, 21-15ರ ನೇರ ಸೆಟ್‍ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಎರಡು ಬಾರಿ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಗೆದ್ದು ಸಾಧನೆ ಮಾಡಿರುವ ಸಿಂಧು ರಿಯೋದಲ್ಲೂ ಪದಕ ಗೆಲ್ಲುವ ಭರವಸೆಯ ಆಶಾಕಿರಣವಾಗಿದ್ದಾರೆ.

ಭಾರತದ ರಿಯೋ ನಿರೀಕ್ಷೆಗಳೆಲ್ಲ ಒಂದೊಂದಾಗಿ ಕಮರುತ್ತಿರುವ ಹೊತ್ತಿನಲ್ಲಿ ಬ್ಯಾಡ್ಮಿಂಟನ್ ತಾರೆ, 2 ಬಾರಿಯ ವಿಶ್ವ ಚಾಂಪಿಯನ್ಶಿಪ್ ಕಂಚಿನ ವಿಜೇತೆ ಪಿ.ವಿ. ಸಿಂಧು ಭರವಸೆಯ ಬೆಳ್ಳಿ ರೇಖೆಯಾಗಿ ಮೂಡಿಬಂದಿದ್ದಾರೆ.