ಹಾಲು ಮಾರುತ್ತಿದ್ದಾಕೆ ಭಾರತದ ಹಾಕಿ ಒಲಿಂಪಿಕ್ ತಂಡದ ಸದಸ್ಯೆ!

0
1200

ರಾಯ್ಪುರ, ಜು.13: ಛತೀಸ್ಗಢದ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿರುವ 22ರ ಹರೆಯದ ರೇಣುಕಾ ಜೀವನದಲ್ಲಿ ಸಾಕಷ್ಟು ದೂರ ಕಲ್ಲು-ಮುಳ್ಳಿನ ಹಾದಿ ಸವೆಸಿದ್ದಾರೆ. ರಿಯೋ ಒಲಿಂಪಿಕ್ಸ್ಗೆ ಮಂಗಳವಾರ ಆಯ್ಕೆ ಮಾಡಲಾದ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿರುವ ರೇಣುಕಾ ತನ್ನ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

 ಮನೆಗೆಲಸ ಮಾಡುತ್ತಿರುವ ಹೆತ್ತವರ ಬೆಂಬಲ ಹಾಗೂ ಬಾಲ್ಯದಲ್ಲಿ ಬೈಸಿಕಲ್ನಲ್ಲಿ ಮನೆ-ಮನೆಗೆ ಹಾಲು ಮಾರುತ್ತಾ ಜೀವನ ಸಾಗಿಸಿದ್ದ ರೇಣುಕಾ ಯಾದವ್ ಇದೀಗ ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸುವ ಅಪೂರ್ವ ಅವಕಾಶ ಪಡೆದಿದ್ದಾರೆ.

”ಇದು ಸುಲಭ ಪ್ರಯಾಣವಾಗಿರಲಿಲ್ಲ. ನಾನು ಕೆಳಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ಜೀವನ ನಿರ್ವಹಣೆಗೆ ನಾನು ಮನೆ-ಮನೆಗೆ ಹಾಲು ಮಾರಾಟ ಮಾಡುತ್ತಿದ್ದೆ. ಹೆತ್ತವರು ಜೀವನ-ನಿರ್ವಹಣೆಗಾಗಿ ಬೇರೆಯವರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು” ಎಂದು ರೇಣುಕಾ ಹೇಳಿದ್ದಾರೆ.

ಭಾರತ ಹಾಕಿ ತಂಡದಲ್ಲಿ ಕಳೆದ ಕೆಲವು ಸಮಯದಿಂದ ಮಿಡ್ ಫೀಲ್ಡರ್ ಆಗಿ ಆಡುತ್ತಿರುವ ರೇಣುಕಾ ಬದ್ಧತೆ ಹಾಗೂ ಕಠಿಣ ಪರಿಶ್ರಮದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

”ಒಲಿಂಪಿಕ್ಸ್ನಲಿ ಸ್ಥಾನ ಪಡೆದಿರುವುದು ನನ್ನ ಜೀವನದ ಸುವರ್ಣ ಕ್ಷಣ. ಭಾರತದ ಮಹಿಳಾ ಹಾಕಿ ತಂಡ ಸುಮಾರು 36 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಆಡುವ ಅವಕಾಶ ಪಡೆದಿದೆ. ಒಲಿಂಪಿಕ್ಸ್ನಲ್ಲಿ ಆಡುತ್ತಿರುವ ಛತ್ತೀಸ್ಗಢದ ಮೊದಲ ಮಹಿಳಾ ಹಾಕಿ ಪಟು ಎನಿಸಿಕೊಳ್ಳುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ” ಎಂದು ಮುಂಬೈನ ಸೆಂಟ್ರಲ್ ರೈಲ್ವೇಯಲ್ಲಿ ಟಿಸಿಯಾಗಿ ಕೆಲಸ ಮಾಡುತ್ತಿರುವ ರೇಣುಕಾ ಸಂತಸ ವ್ಯಕ್ತಪಡಿಸಿದ್ದಾರೆ.